Karnataka news paper

ಮೇಕೆದಾಟು ಯೋಜನೆ: ಕೇವಲ ಮತಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ- ಕುಮಾರಸ್ವಾಮಿ


Online Desk

ಬಿಡದಿ: ಮೇಕೆದಾಟು ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದು, ಕಾಂಗ್ರೆಸ್ ಪಾದಯಾತ್ರೆ ಕೇವಲ ಮತಕ್ಕಾಗಿ ಮಾಡುತ್ತಿರುವ ಯಾತ್ರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಿಡದಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಪಾದಯಾತ್ರೆಗೆ ಕರೆದಿದ್ದಾರೆ. ಆ ಯಾತ್ರೆಯಲ್ಲಿ ಭಾಗವಹಿಸಿ ಏನು ಮಾಡೋದು. ಕೇವಲ ಒಂದು ತಾಂತ್ರಿಕ ಸಮಸ್ಯೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮಾತನಾಡಬೇಕು. ಅದು ಬಿಟ್ಟು ಪಾದಯಾತ್ರೆ ಮಾಡಿ, ಆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದೇವೇಗೌಡರು ಹಲವು ಬಾರಿ ಪಾದಯಾತ್ರೆ ಮಾಡಿದ್ದಾರೆ. ನಾನು ಕೂಡಾ ಹುಬ್ಬಳ್ಳಿಯವರೆಗೆ ಪಾದಯಾತ್ರೆ ಮಾಡಿದ್ದೆ. ಆ ಪಾದಯಾತ್ರೆಗಳಿಗೂ ಇದಕ್ಕೂ ವ್ಯತ್ಯಾಸ ಇದೆ. ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನವರೆಗೆ ದೇವೇಗೌಡರು ಪಾದಯಾತ್ರೆ ಮಾಡಿದ್ದರು. ಗೋಲಿಬಾರ್ ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು. ಅದರ ವಿರುದ್ಧ ಅವರು ಪಾದಯಾತ್ರೆ ಮಾಡಿದ್ದರು. ಕುಣಿಗಲ್ ನಿಂದ ಬೆಂಗಳೂರು ವರೆಗೆ ಗೋಲಿಬಾರ್ ಗೆ ಬಲಿಯಾಗಿದ್ದ ರೈತನ ವಿಚಾರವಾಗಿ ಪಾದಯಾತ್ರೆ ಮಾಡಿದ್ದರು. ದೊಡ್ಡಳ್ಳಿ ಗೋಲಿಬಾರ್ ನಲ್ಲಿ ಕಾಂಗ್ರೆಸ್ ಸರ್ಕಾರ ಇಬ್ಬರು ರೈತರ ಸಾವಿಗೆ ಕಾರಣವಾಗಿತ್ತು. ಆಗ 9 ದಿನ ದೇವೇಗೌಡರು ಉಪವಾಸ ಮಾಡಿದ್ದರು ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಾದಯಾತ್ರೆ ಮಾಡ್ತಿದ್ದಾರೆ. ಮೇಕೆದಾಟು ಡಿಪಿಆರ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಡಿಪಿಆರ್ ಮಾಡಿ ಕಳುಹಿಸಿದ್ದೆ ಅಂತ ಅವರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ಮಾಡಿ ಕೇಂದ್ರ ಜಲ ಆಯೋಗಕ್ಕೆ ಕಳುಹಿಸಲಾಗಿತ್ತು. ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವರೇ ಪ್ರಶ್ನೋತ್ತರ ವೇಳೆ ಈ ಬಗ್ಗೆ ಉತ್ತರ ನೀಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಅವಶ್ಯಕೆ ಇಲ್ಲ. ತಾಂತ್ರಿಕ ಸಮಸ್ಯೆ ಇದೆಯಷ್ಟೇ. ಇನ್ನು ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಖಜಾನೆಯಲ್ಲಿ ಹಣ ಇಲ್ಲ ಎನ್ನುವ ಸಮಸ್ಯೆ. ಹೀಗಾಗಿ ಅವರು ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಯೋಜನೆಗೆ ಅನುಮತಿ ಸಿಕ್ಕರೆ ಕೆಲಸ ಮಾಡಲು ದುಡ್ಡೆಲ್ಲಿ ತರೋದು ಅನ್ನುವ ವಿಚಾರದಲ್ಲಿ ಸರ್ಕಾರವಿದೆ ಎಂದು ಕುಮಾರಸ್ವಾಮಿ ಹೇಳಿದರು.





Read more