ಹೈಲೈಟ್ಸ್:
- ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ
- ಟಿಬೆಟ್ ದಕ್ಷಿಣ ಪ್ರದೇಶವು ತನ್ನ ಅಂತರ್ಗತ ಭಾಗ ಎಂದು ವಾದಿಸಿರುವ ಚೀನಾ
- ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತದ ತಿರುಗೇಟು
- ಹೆಸರುಗಳನ್ನು ಬದಲಿಸಿದ ಮಾತ್ರಕ್ಕೆ ವಾಸ್ತವಾಂಶಗಳು ಬದಲಾಗೊಲ್ಲ ಎಂದ ಭಾರತ
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಭಾರತ, ಅರುಣಾಚಲ ಪ್ರದೇಶ ಈ ಹಿಂದಿನಿಂದಲೂ ಮತ್ತು ಮುಂದೆ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ. ಚೀನಾ ಹೊಸ ಹೆಸರುಗಳನ್ನು ಹುಡುಕಿದ ಮಾತ್ರಕ್ಕೆ ಈ ವಾಸ್ತವಾಂಶವನ್ನು ಅದು ಬದಲಿಸುವುದಿಲ್ಲ ಎಂದು ಹೇಳಿದೆ.
ಅರುಣಾಚಲ ಪ್ರದೇಶ ತನ್ನ ನಿಯಂತ್ರಣದಲ್ಲಿರುವ ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುತ್ತಿರುವ ಚೀನಾ ಅಲ್ಲಿನ ಒಟ್ಟು 15 ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ನೀಡಿದೆ. ಅರುಣಾಚಲ ಪ್ರದೇಶವನ್ನು ಚೀನಾ ಭೂಪಟ ‘ಝಂಗ್ನಾನ್’ (ದಕ್ಷಿಣ ಟಿಬೆಟ್) ಎಂದೇ ತೋರಿಸುತ್ತದೆ. 2017ರಲ್ಲಿಯೂ ಚೀನಾ ಆರು ಸ್ಥಳಗಳಿಗೆ ತನ್ನದೇ ಹೆಸರು ಇರಿಸಿತ್ತು. ಬೌದ್ಧ ಧರ್ಮ ಗುರು ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಕೂಡಲೇ ಅದು ಪ್ರತೀಕಾರದ ಕ್ರಮವಾಗಿ ಹೆಸರು ಬದಲಾವಣೆ ಮಾಡಿತ್ತು.
‘ನಾವು ಈ ರೀತಿಯ ಚಟುವಟಿಕೆಯನ್ನು ಹಿಂದೆಯೂ ನೋಡಿದ್ದೇವೆ. ಅರುಣಾಚಲ ಪ್ರದೇಶ ರಾಜ್ಯದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುತ್ತಿರುವುದು ಇದು ಮೊದಲ ಸಲವೇನಲ್ಲ. 2017ರ ಏಪ್ರಿಲ್‌ನಲ್ಲಿ ಕೂಡ ಚೀನಾ ಇದೇ ರೀತಿ ಹೆಸರುಗಳನ್ನು ಇರಿಸಿತ್ತು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಝಂಗ್ನಾನ್‌ನ 15 ಪ್ರದೇಶಗಳ ಹೆಸರನ್ನು ಚೀನೀ ಭಾಷೆಯಲ್ಲಿ, ಟಿಬೆಟಿಯನ್ ಮತ್ತು ರೋಮನ್ ಅಕ್ಷರಗಳಲ್ಲಿ ಉನ್ನತೀಕರಿಸಿದ್ದೇವೆ ಎಂದು ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ. ಎಂಟು ಜನವಸತಿ ಪ್ರದೇಶಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಹಾಗೂ ಒಂದು ಪರ್ವತ ಮಾರ್ಗ ಪ್ರದೇಶಗಳಿಗೆ ಚೀನಾ ತನ್ನದೇ ನಾಮಕರಣ ಮಾಡಿದೆ. ಈ ಹೊಸ ಹೆಸರುಗಳು 2022ರ ಜನವರಿ 1ರಿಂದ ಅಸ್ತಿತ್ವಕ್ಕೆ ಬರಲಿವೆ.
ತನ್ನ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಚೀನಾ, ಟಿಬೆಟ್‌ನ ದಕ್ಷಿಣ ಪ್ರದೇಶವು ತನ್ನ ಅಂತರ್ಗತ ಭಾಗ ಎಂದು ಹೇಳಿಕೊಂಡಿದೆ. ವಿಭಿನ್ನ ಸಮುದಾಯಗಳ ಜನರು ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಅನೇಕ ಹೆಸರುಗಳನ್ನು ನೀಡಿದ್ದಾರೆ. ಈ ಪ್ರದೇಶದ ನಿರ್ವಹಣೆಯ ಉನ್ನತೀಕರಣಕ್ಕಾಗಿ ಚೀನಾದ ಸಂಬಂಧಿತ ಅಧಿಕಾರಿಗಳು ಸೂಕ್ತ ನಿಯಮಗಳಿಗೆ ಅನುಗುಣವಾಗಿ ಸಮರ್ಪಕ ಸ್ಥಳಗಳಿಗೆ ಹೆಸರುಗಳನ್ನು ಪ್ರಕಟಿಸಿದೆ. ಇದು ಚೀನಾದ ಸಾರ್ವಭೌಮತೆ ಒಳಗೆ ಇರುವ ವಿಚಾರ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿಕೊಂಡಿದ್ದಾರೆ.
ನಮ್ಮ ದೇಶದೊಳಗಿನ ಪ್ರದೇಶಕ್ಕೆ ಚೀನಾ ತನ್ನದೇ ಹೆಸರು ಇಡುವ ಮಟ್ಟಕ್ಕೆ ಬೆಳೆದಿದೆ. ಆದರೆ ಕೇಂದ್ರ ಸರ್ಕಾರ ಅಸಹಾಯಕತೆಯಿಂದ ಕುಳಿತಿದೆ. ಈಗಾಗಲೇ ಭಾರತದ ಗಡಿಯೊಳಗೆ ಅದು ಹಳ್ಳಿಗಳನ್ನು ನಿರ್ಮಿಸಿದೆ. ಇಷ್ಟಾದರೂ ಸರ್ಕಾರ ಯಾವುದೇ ದಿಟ್ಟ ಕ್ರಮ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.