Karnataka news paper

ದಲಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರ್ಕಾರ ಕ್ರಮ: ಸಚಿವ ಶ್ರೀನಿವಾಸ ಪೂಜಾರಿ


Online Desk

ಬೆಂಗಳೂರು: ರಾಜ್ಯದಲ್ಲಿ ದಲಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗೃಹ ಇಲಾಖೆ ಕ್ರಮಕೈಗೊಂಡಿರುವುದಾಗಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.
 
ಉಡುಪಿ ಜಿಲ್ಲೆಯ ಕೋಟದಲ್ಲಿ ಗಿರಿಜನರ ಮೇಲಿನ ಪೊಲೀಸರ ಹಲ್ಲೆ ಸಂಬಂಧ ಸಚಿವ ಶ್ರೀನಿವಾಸ ಪೂಜಾರಿ ಬೆಂಗಳೂರಿನಲ್ಲಿಂದು ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿ ಮಾಡಿ ಘಟನೆ ಸಂಬಂಧ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೋಲಿಸರಿಂದ ಹಲ್ಲೆ ಮಾಡಲಾಗಿತ್ತು. ಘಟನೆ ಸಂಬಂಧ ಒಬ್ಬ ಪಿಎಸ್‌ಐ  ಸಸ್ಪೆಂಡ್, ಆರು ಜನರ ವರ್ಗಾವಣೆ ಕೂಡ ಮಾಡಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಿ‌ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೆ.ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು.ಒಬ್ಬ ಕಾನ್ಸ್‌ಟೇಬಲ್ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು.ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು ಎಂದರು.

ಇದನ್ನೂ ಓದಿ: ಕೊರಗ ಸಮುದಾಯದ ಮೇಲಿನ ಪೊಲೀಸರ ಪ್ರಕರಣ ಅಮಾನವೀಯ, ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

ಹೀಗಾಗಿ ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದೆ. ಅಲ್ಲಿರುವ ಪರಿಸ್ಥಿತಿಯನ್ನು ಗೃಹಸಚಿವರಿಗೆ ವಿವರಿಸಿದ್ದು, ಗೃಹಸಚಿವರು ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಎಸ್‌ಪಿ ಅವರಿಗೆ ಕರೆ ಮಾಡಿ ಪ್ರಕರಣದ ಕಾನೂನು ಪ್ರಕಾರ ದೂರು ದಾಖಲಿಸಲು ಸೂಚಿಸಿದ್ದಾರೆ. ದಲಿತರಿಗೆ ಯಾವುದೇ ತೊಂದರೆಯಾಗದಂತೆ ಗೃಹಸಚಿವರು ಸೂಚಿಸಿದ್ದಾರೆ.  ಕೊರಗರ, ಗಿರಿ ಜನರ, ದಲಿತ ಬಂಧುಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ‌. ಗೃಹ ಸಚಿವರು, ಸರ್ಕಾರ ನಿಮ್ಮ ಜತೆ ಇದೆ.  ಏನಾದರೂ ಇದ್ದಲ್ಲಿ ಸಿಎಂಗೂ ಮಾಹಿತಿ ನೀಡಿ ಹೆಚ್ಚಿನ ಕ್ರಮ ತೆಗೆದುಕೊಳ್ಳುವುದಾಗಿ ಕೋಟಾ ಸ್ಪಷ್ಟಪಡಿಸಿದರು.



Read more