ಬೆಂಗಳೂರು: ಎಸ್‌ಸಿ, ಎಸ್‌ಟಿ ಹಾಗೂ ಬಡವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಮಾಡುವುದು ಸಲ್ಲ. ತಕ್ಷಣವೇ ಕಾರ್ಯನಿರ್ವಹಿಸಿ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆದಷ್ಟು ಜನರ ಬಳಿ ತೆರಳಿ ಕಾರ್ಯನಿರ್ವಹಿಸಬೇಕು. ಜನರು ಜಿಲ್ಲಾಧಿಕಾರಿ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದಂತೆ ಮಾಡಬೇಕು. ಜನರ ಬಳಿಗೇ ಜಿಲ್ಲಾಧಿಕಾರಿಗಳು ತೆರಳುವಂತಾಗಬೇಕು. ಕಂದಾಯ ಸಚಿವರೇ ಜನರ ಬಳಿ ತೆರಳಿ, ಅವರ ಸಮಸ್ಯೆ ಆಲಿಸಿ ಅವುಗಳನ್ನು ಬಗೆಹರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳೂ ಇದೇ ಹಾದಿ ಅನುಸರಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: 45 ಲಕ್ಷ ರೈತರ ಮನೆ ಬಾಗಿಲಿಗೆ ಉಚಿತವಾಗಿ ಪಹಣಿ, ಇತರ ದಾಖಲೆ ವಿತರಣೆ: ಆರ್.ಅಶೋಕ
ಕೋವಿಡ್–19 ವಿರುದ್ಧದ ಲಸಿಕಾ ಅಭಿಯಾನವನ್ನೂ ಚುರುಕುಗೊಳಿಸುವಂತೆ ಮುಖ್ಯಮಂತ್ರಿಗಳು ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
‘ಬೆಳೆ ಪರಿಹಾರಕ್ಕೆ ₹1,061.24 ಕೋಟಿ ಬಿಡುಗಡೆ’
ಬೆಳೆ ಪರಿಹಾರವಾಗಿ ರಾಜ್ಯದ ರೈತರಿಗೆ ಈಗಾಗಲೇ ₹1,061.24 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಪ್ರತಿ ಬಾರಿ ಈ ವರ್ಷದ ಪರಿಹಾರವನ್ನು ಮುಂದಿನ ವರ್ಷ ನೀಡಲಾಗುತ್ತಿದೆ. ಆದರೆ ಈ ಬಾರಿ ಸಂಪ್ರದಾಯ ಮುರಿದು ಒಂದೇ ತಿಂಗಳಲ್ಲಿ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಈಗಾಗಲೇ ಬೆಳೆ ಪರಿಹಾರ ನೀಡಲಾಗಿದೆ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ: ಪೊಲೀಸ್ ವ್ಯವಸ್ಥೆ ಸದೃಢತೆಗೆ ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ