Karnataka news paper

ಮುಂದಿನ 2 ಪಂದ್ಯಗಳಲ್ಲಿ ಈ ಇಬ್ಬರ ವೇಗಿಗಳ ಬೆದರಿಕೆ ನಮಗಿದೆ ಎಂದ ಎಲ್ಗರ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಮೊದಲನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ 113 ರನ್‌ ಜಯ.
  • ಶಮಿ-ಬುಮ್ರಾ ಅವರ ಬೌಲಿಂಗ್‌ ಬೆದರಿಕೆ ನಮ್ಮ ಬ್ಯಾಟ್ಸ್‌ಮನ್‌ಗಳಿಗಿದೆ ಎಂದ ಎಲ್ಗರ್‌.

ಸೆಂಚೂರಿಯನ್‌: ಮುಂಬರುವ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಭಾರತ ತಂಡದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಬೆದರಿಕೆ ಇದೆ ಎಂದು ಆತಿಥೇಯ ತಂಡದ ನಾಯಕ ಡೀನ್ ಎಲ್ಗರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್‌ ಸ್ಟೇಡಿಯಂನಲ್ಲಿ ಮುಕ್ತಾಯವಾಗಿದ್ದ ಮೊದಲನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 113 ರನ್‌ಗಳ ಗೆಲುವು ಪಡೆದಿತ್ತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸೆಂಚೂರಿಯನ್‌ನಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಏಷ್ಯದ ಮೊದಲ ತಂಡ ಎಂಬ ಕೀರ್ತಿಗೆ ಭಾರತ ಭಾಜನವಾಯಿತು.

ಪ್ರಥಮ ಇನಿಂಗ್ಸ್‌ನಲ್ಲಿ ಮೊಹಮ್ಮದ್‌ ಶಮಿ ಐದು ವಿಕೆಟ್‌ ಸಾಧನೆ ಮಾಡುವ ಮೂಲಕ 200 ವಿಕೆಟ್‌ಗಳ ಸಾಧನೆ ಮಾಡಿದ್ದರು. ನಂತರ, ದ್ವಿತೀಯ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆ ಮೂಲಕ ಭಾರತ ತಂಡ ಐತಿಹಾಸಿಕ ಗೆಲುವಿಗೆ ನೆರವಾಗಿದ್ದರು.

ಸೆಂಚೂರಿಯನ್ ಟೆಸ್ಟ್ ಗೆದ್ದ ಮೊದಲ ಏಷ್ಯನ್ ತಂಡ : ಇತಿಹಾಸ ಸೃಷ್ಟಿಸಿದ ಭಾರತ!

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೀನ್‌ ಎಲ್ಗರ್‌, “ಹೌದು ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಮೊಹಮ್ಮದ್‌ ಶಮಿ ತಮ್ಮ ಬೌಲಿಂಗ್‌ ಮೂಲಕ ಸಮಸ್ಯೆಯನ್ನು ತಂದೊಡ್ಡಿದ್ದರು. ನಿಸ್ಸಂಶಯವಾಗಿ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಪಡೆದಿದ್ದ ವಿಕೆಟ್‌ಗಳು ನಮ್ಮ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಬುಮ್ರಾ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಓಡುವ ಅಥವಾ ಓಡದೇ ಇದ್ದರೂ ಅಧಿಕ ಶಕ್ತಿಯಿಂದ ಬೌಲ್‌ ಮಾಡುತ್ತಾರೆ,” ಎಂದು ಹೇಳಿದರು.

“ಬ್ಯಾಟ್ಸ್‌ಮನ್‌ ಆಗಿ ನಿಮ್ಮ ಮೇಲೆ ಅವರು ಸದಾ ಸವಾಲೊಡ್ಡುತ್ತಾರೆ. ಹಾಗಾಗಿ ನೀವು ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಅವರನ್ನು ಎದುರಿಸುವಾಗ ಬಹಳಾ ಬುದ್ದಿವಂತಿಕೆಯಿಂದ ಆಡಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಅವರು ಅತ್ಯುತ್ತಮ ಸಂಯೋಜನೆಯ ದಾಳಿಯನ್ನು ಹೊಂದಿದ್ದಾರೆ,” ಎಂದು ಅವರು ತಿಳಿಸಿದರು.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿ ಶಾಕ್‌ ನೀಡಿದ ಕ್ವಿಂಟನ್‌ ಡಿ ಕಾಕ್!

ಮೊಹಮ್ಮದ್‌ ಸಿರಾಜ್‌ ಅವರನ್ನು ಎದುರಿಸುವುದು ಕೂಡ ದೊಡ್ಡ ತಲೆ ನೋವೆಂದು ಹೇಳಿದ ದಕ್ಷಿಣ ಆಫ್ರಿಕಾ ನಾಯಕ, ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ ಈ ಇಬ್ಬರು ವೇಗಿಗಳು ಹರಿಣಗಳನ್ನು ತೊಂದರೆಗೆ ಸಿಲುಕಿಸಲಿದ್ದಾರೆಂದು ಅಭಿಪ್ರಾಯ ಪಟ್ಟರು.

“ಮೊಹಮ್ಮದ್‌ ಸಿರಾಜ್‌ ಕೂಡ ನಾಲ್ಕನೇ ದಿನ ಪರಿಣಾಮಕಾರಿಯಾಗಿದ್ದರು. ಅವರು ಕೂಡ ನಮಗೆ ತೊಂದರೆ ನೀಡಬಲ್ಲ ಬೌಲರ್‌. ಹೌದು ಟೀಮ್‌ ಇಂಡಿಯಾದ ಇಬ್ಬರು ಹಿರಿಯ ವೇಗಿಗಳಾದ ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ ಅವರ ಬೌಲಿಂಗ್‌ ದಕ್ಷಿಣ ಅಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆ ಇದೆ,” ಎಂದು ಡೀನ್ ಎಲ್ಗರ್‌ ಹೇಳಿದರು.

ಭಾರತ Vs ದಕ್ಷಿಣ ಆಫ್ರಿಕಾ ಪಂದ್ಯದ ಸ್ಕೋರ್‌ಕಾರ್ಡ್

ಸೆಂಚೂರಿಯನ್‌ ಟೆಸ್ಟ್‌ ಪಂದ್ಯದ ಗೆಲುವಿನಲ್ಲಿ ಸಂಭ್ರಮದಲ್ಲಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಟೀಮ್‌ ಇಂಡಿಯಾ ಮುಂದಿನ ಸೋಮವಾರದಿಂದ ಜೋಹನ್ಸ್‌ಬರ್ಗ್‌ನಲ್ಲಿ ಶುರುವಾಗಲಿರುವ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.



Read more