ಹೈಲೈಟ್ಸ್:
- ಈಗಾಗಲೇ ಮೈಸೂರಿನ ಕೆಲವು ಸರಕಾರಿ ಶಾಲೆಗಳಿಗೆ ಇಸ್ಕಾನ್‌ನಿಂದ ಆಹಾರ ಪೂರೈಕೆ
- ಕಳೆದ ಹತ್ತು ವರ್ಷಗಳಿಂದಲೂ ಇಸ್ಕಾನ್ ಸಂಸ್ಥೆಯವರು ಆಹಾರ ಸರಬರಾಜು ಮಾಡುತ್ತಿದ್ದಾರೆ
- ಅಲ್ಲಿನ ಅಡುಗೆ ಸಿಬ್ಬಂದಿಯ ಕೆಲಸಕ್ಕೆ ಯಾವುದೇ ಕಂಟಕ ಎದುರಾಗಿಲ್ಲ: ಸಾ. ರಾ. ಮಹೇಶ್
ಕೃಷ್ಣರಾಜ ನಗರ ಪಟ್ಟಣದ ತಾ. ಪಂ. ನ ಕೃಷ್ಣ ರಾಜೇಂದ್ರ ಸಭಾಂಗಣದಲ್ಲಿ ನಡೆದ ಪಟ್ಟಣದ ಬಿಸಿಯೂಟ ಅಡುಗೆ ಸಿಬ್ಬಂದಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಇಸ್ಕಾನ್ ಸಂಸ್ಥೆಯವರಿಗೆ ಬಿಸಿಯೂಟ ಸರಬರಾಜು ಮಾಡುವ ಜವಾಬ್ದಾರಿಯನ್ನೂ ನೀಡಿದರೆ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಆಗುವುದರ ಜತೆಗೆ ಅಡುಗೆ ಸಿಬ್ಬಂದಿ ಮತ್ತು ಶಾಲೆಯ ಶಿಕ್ಷಕರುಗಳಿಗೂ ಕಾರ್ಯಭಾರದ ಒತ್ತಡ ಕಡಿಮೆಯಾಗಲಿದೆ ಎಂದು ಸಾರಾ ಮಹೇಶ್ ತಿಳಿಸಿದರು.
ಅಡುಗೆ ಸಿಬ್ಬಂದಿಯವರ ಅಭಿಪ್ರಾಯ ಪಡೆದ ನಂತರ ಸಾಂಕೇತಿಕವಾಗಿ ಪಟ್ಟಣದ ಶಾಲೆಗಳಿಗೆ ಆಹಾರ ಸರಬರಾಜು ಮಾಡುವ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆಯವರಿಗೆ ವಹಿಸಿ 3 ತಿಂಗಳು ಕಳೆದ ನಂತರ ಅವರ ಸೇವೆ ನಮಗೆ ತೃಪ್ತಿಯಾದರೆ ತಾಲೂಕಿನ ಎಲ್ಲ ಶಾಲೆಗಳಿಗೂ ಆಹಾರ ಸರಬರಾಜು ಮಾಡುವ ಹೊಣೆಯನ್ನು ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಅಡುಗೆ ಸಿಬ್ಬಂದಿಯವರಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದ್ದು ಆ ಸಮಯದಲ್ಲಿ ಅವರು ತಮ್ಮ ಅಭಿಪ್ರಾಯ ತಿಳಿಸಿದರೆ ಆ ನಂತರ ಮತ್ತೆ ಸಭೆ ನಡೆಸಿ ಇಸ್ಕಾನ್ ಸಂಸ್ಥೆಯವರಿಗೆ ಈ ಹೊಣೆಗಾರಿಕೆಯನ್ನು ವಹಿಸುವ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳೀದರು.
ಮೈಸೂರಿನ ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣ ಕೇಶವ ಪ್ರಭು ಮಾತನಾಡಿ, ನಮ್ಮ ಸಂಸ್ಥೆಗೆ ಆಹಾರ ಸರಬರಾಜು ಮಾಡುವ ಜವಾಬ್ದಾರಿಯನ್ನೂ ನೀಡಿದರೆ ಎಲ್ಲ ಮಕ್ಕಳಿಗೂ ಪೌಷ್ಠಿಕ ಆಹಾರ ನೀಡುವುದರ ಜತೆಗೆ ಸ್ವಚ್ಚತೆಯನ್ನು ಕಾಪಾಡಲು ಆದ್ಯತೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣದ ಅಡುಗೆ ಸಿಬ್ಬಂದಿಯವರು, ಇಸ್ಕಾನ್ ಸಂಸ್ಥೆಗೆ ಆಹಾರ ಸರಬರಾಜು ಮಾಡುವ ಜವಾಬ್ದಾರಿಯನ್ನೂ ನೀಡಿದರೆ ನಮ್ಮ ನಮ್ಮ ಕೆಲಸಕ್ಕೆ ಕಂಟಕ ಎದುರಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಇದಕ್ಕುತ್ತರಿಸಿದ ಶಾಸಕರು, ಮೈಸೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಸರಕಾರಿ ಶಾಲೆಗಳಿಗೆ ಕಳೆದ ಹತ್ತು ವರ್ಷಗಳಿಂದಲೂ ಇಸ್ಕಾನ್ ಸಂಸ್ಥೆಯವರು ಆಹಾರ ಸರಬರಾಜು ಮಾಡುತ್ತಿದ್ದು ಅಲ್ಲಿನ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ನೀವು ಈ ಸಂಬಂಧ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು. ನಮ್ಮ ಪ್ರಮುಖ ಉದ್ದೇಶ ಸರಕಾರಿ ಶಾಲೆಗಳಿಗೆ ತೆರಳುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶಯುತ ಆಹಾರ ನೀಡಬೇಕು ಎಂಬುದು ಆಗಿದೆಯೇ ಹೊರತು, ಅಡುಗೆ ಸಿಬ್ಬಂದಿಗೆ ಯಾವುದೇ ತೊಂದರೆ ನೀಡುವ ದುರುದ್ದೇಶ ಇಲ್ಲವೆಂದು ಅವರು ಸ್ಪಷ್ಟನೆ ನೀಡಿದರು.
ತಾಪಂ ಇಒ ಎಚ್. ಕೆ. ಸತೀಶ್, ಬಿಇಒ ಗಾಯತ್ರಿ, ಬಿಆರ್‌ಸಿ ರುದ್ರಪ್ಪ, ತಾಲೂಕು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಪ್ರದೀಪ್, ತಾ. ಪಂ. ವ್ಯವಸ್ಥಾಪಕಿ ಅನಿತಾ, ಹನಸೋಗೆ ಗ್ರಾ. ಪಂ. ಮಾಜಿ ಅಧ್ಯಕ್ಷ ಎಚ್. ಟಿ. ರಾಜೇಶ್ ತಾಲೂಕು ಆಶ್ರಯ ಸಮಿತಿ ಮಾಜಿ ಸದಸ್ಯ ಬಿ. ರಮೇಶ್, ಸಾಲಿಗ್ರಾಮ ತಾಲ್ಲೂಕು ಜೆಡಿಎಸ್ ಮುಖಂಡರಾದ ಹಳಿಯೂರು ಎಚ್. ಎಸ್. ಜಗದೀಶ್, ಟಿ ಪಿ ಮಂಜುನಾಥ್ ಮತ್ತಿತರರು ಹಾಜರಿದ್ದರು.