ಪ್ರತಿಪಕ್ಷ ಸದಸ್ಯ ಶಶಿಧರ್ ಹೆಗ್ಡೆ ಮಾತನಾಡಿ, ಜಾಕ್‌ವೆಲ್ ದುರಸ್ತಿ ಸಂದರ್ಭ ಒಂದೇ ಬಾರಿಗೆ ಒಂದು ವಾರ ಕಾಮಗಾರಿ ಮಾಡಿಸುವ ಬದಲು, ವಾರಕ್ಕೆ ಎರಡು ದಿನದಂತೆ ದುರಸ್ತಿ ಕಾರ್ಯ ಕೈಗೊಳ್ಳಿ. ಇದರಿಂದ ಹೆಚ್ಚಿನ ಸಮಸ್ಯೆ ಆಗುವುದನ್ನು ತಪ್ಪಿಸಬಹುದು ಎಂದು ಹೇಳಿದರು. ಬಿಜೆಪಿ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು ಮಾತನಾಡಿ, ದುರಸ್ತಿ ಸಂದರ್ಭ ನೀರು ಪೂರೈಕೆ ಸಮಸ್ಯೆಯಾದರೆ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆ ಮಾಡಿ ಕುಡಿಯುವ ನೀರು ಪೂರೈಕೆ ಮಾಡುವಂತೆ ವಿನಂತಿಸಿದರು.
ನೀರಿನ ದರ ಇಳಿಕೆ ಮಾಡಿ
ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಲ್ಲಿ ನೀರಿನ ದರವನ್ನು ತಕ್ಷಣ ಇಳಿಸಲಾಗುವುದು ಎಂದು ಬಿಜೆಪಿ ಚುನಾವಣೆ ಸಂದರ್ಭ ಭರವಸೆ ನೀಡಿತ್ತು. ಕಳೆದ ಅವಧಿಯಲ್ಲಿ ಈ ಬಗ್ಗೆ ಮೇಯರ್ ಆಗಿದ್ದ ದಿವಾಕರ ಪಾಂಡೇಶ್ವರ ಅವರು ಘೋಷಣೆಯನ್ನೂ ಮಾಡಿದ್ದರು. ಆದರೆ ಇನ್ನೂ ನಿರಿನ ದರವನ್ನು ಇಳಕೆ ಮಾಡಿ ಕನಿಷ್ಠ ನೀರಿದ ಉಪಯೋಗವನ್ನು ಹೆಚ್ಚಳ ಮಾಡಿಲ್ಲ ಯಾಕೆ ಎಂದು ಕಾಂಗ್ರೆಸ್ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಪ್ರಶ್ನಿಸಿದರು.
ನಾವು ಸರಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ. ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಸಚಿವರಿಗೆ ಮಾತನಾಡಿದ್ದಾರೆ. ಆದರೆ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಮೇಯರ್ ತಿಳಿಸಿದರು. ತಿಂಗಳಿಗೆ ಕನಿಷ್ಠ ನೀರಿನ ಬಳಕೆಯ ಮಿತಿಯನ್ನು 8 ಸಾವಿರದಿಂದ ಈ ಹಿಂದಿನಂತೆ 24 ಸಾವಿರ ಲೀಟರ್‌ಗೆ ಹೆಚ್ಚಿಸಬೇಕು ಎಂದು ಶಶಿಧರ್ ಹೆಗ್ಡೆ ಆಗ್ರಹಿಸಿದರು.
ಇನ್ನು, ಪಂಪ್‌ವೆಲ್ – ಪಡೀಲ್ ರಸ್ತೆ ಅಭಿವೃದ್ಧಿ ನಡೆಸದೆ ತೀವ್ರ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸದನಕ್ಕೆ ಉತ್ತರ ನೀಡಿ ಎಂದು ಕಾಂಗ್ರೆಸ್ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಬಿಜೆಪಿಯ ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ ಆಗ್ರಹಿಸಿದರು. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಿದ್ದೇವೆ. 30 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ನೀಲ ನಕಾಶೆ ಸಿದ್ಧವಾಗಿದೆ. ಆದರೆ ತುಂಬೆಯಿಂದ ಮಂಗಳೂರಿಗೆ ಆಗಮಿಸುವ ಪೈಪ್‌ಲೈನ್ ಸ್ಥಳಾಂತರ, ಒಳಚರಂಡಿ ವ್ಯವಸ್ಥೆಗೆ 12 ಕೋಟಿ ರೂ. ವೆಚ್ಚವಾಗಲಿದೆ. ಆದಷ್ಟು ಬೇಗನೆ ಕಾಮಗಾರಿ ಆರಂಭಿಸಲಾಗುವುದು ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಭರವಸೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಬೇಕು ಎಂದು ಸದಸ್ಯೆ ಪೂರ್ಣಿಮಾ ಆಗ್ರಹಿಸಿದರು. ಪ್ರತಿಪಕ್ಷ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ಕಾರ್ಯಾಚರಣೆಗೆ ನಮ್ಮ ವಿರೋಧವಿಲ್ಲ, ಆದರೆ ಬೀದಿ ಬದಿ ವ್ಯಾಪಾರಿಗಳ ಸಾಮಗ್ರಿ ತೆರವುಗೊಳಿಸುವಾಗ ಹಾನಿ ಎಸಗುವುದು ಸರಿಯಲ್ಲ. ಮಾನವೀಯತೆ ಇರಲಿ ಎಂದು ಹೇಳಿದರು.
ಉಪಮೇಯರ್ ಸುಮಂಗಳಾ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೀಲಾವತಿ, ಲೋಕೇಶ್ ಬೊಳ್ಳಾಜೆ, ಶೋಭಾ ರಾಜೇಶ್ ಸಭೆಯಲ್ಲಿ ಭಾಗವಹಿಸಿದ್ದರು.
ವಾರ್ಡ್ ಸಮಿತಿ ಕಾರ್ಯಾಗಾರ
ಪಾಲಿಕೆ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿ ವಾರ್ಡ್ ಸಮಿತಿ ರಚಿಸಲಾಗಿದೆ. ಆದರೆ ಅದನ್ನು ಕಾರ್ಯಗತಗೊಳಿಸುವ ಮುನ್ನ ಕಾರ್ಯಾಗಾರ ನಡೆಸಲಾಗುವುದು. ಈ ಕಾರ್ಯಾಗಾರದಲ್ಲಿ ವಾರ್ಡ್ ಸದಸ್ಯರೂ ಇರುತ್ತಾರೆ. ಆಯಾ ವಾರ್ಡ್‌ಗಳ ಕುಂದು ಕೊರತೆ, ಆದಾಯ ಕ್ರೋಢೀಕರಣ, ಫಲಾನುಭವಿಗಳ ಆಯ್ಕೆ ಸೇರಿದಂತೆ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಾಗಾರ ಮೂಲಕ ದೃಷ್ಟಿಕೋನ ನೀಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
25 ಲಕ್ಷ ಹೆಚ್ಚುವರಿ ಅನುದಾನ
ಪಾಲಿಕೆಯ ಎಲ್ಲ ವಾರ್ಡ್‌ಗಳ ಸದಸ್ಯರಿಗೆ ಅಭಿವೃದ್ಧಿಗಾಗಿ ಪ್ರಸ್ತುತ 25 ಲಕ್ಷ ರೂ. ಅಲ್ಲದೆ ಹೆಚ್ಚುವರಿಯಾಗಿ ಮತ್ತೆ 25 ಲಕ್ಷ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಪ್ರಕಟಿಸಿದರು. ಎಲ್ಲ ಸದಸ್ಯರು ಜನವರಿ ಅಂತ್ಯದೊಳಗೆ ಹೆಚ್ಚುವರಿ ಹಾಗೂ ಬಾಕಿ ಇರುವ ಮೊತ್ತಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಪಾಲಿಕೆಗೆ ಸಲ್ಲಿಸಬೇಕು. ಜನವರಿ ಬಳಿಕ ಕ್ರಿಯಾಯೋಜನೆ ನೀಡಿದರೆ ಅನುದಾನ ಬಿಡುಗಡೆಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.
ಚರ್ಚೆಗೆ ವೇದಿಕೆಯಾದ ಲೇಡಿಸ್ ಕ್ಲಬ್ ಕಾಮಗಾರಿ
ರಸ್ತೆ ಅಗಲೀಕರಣ ಸಂದರ್ಭ ಲೈಟ್ ಹೌಸ್ ಹಿಲ್ ರಸ್ತೆಯ ಲೇಡಿಸ್ ಕ್ಲಬ್ ಆವರಣದ ಗೋಡೆಯನ್ನು ಪಾಲಿಕೆ ವತಿಯಿಂದ ಸುಮಾರು ಒಂದೂವರೆ ಕೋಟಿ ರೂ. ವೆಚ್ಚ ಮಾಡಿ ಮರು ನಿರ್ಮಾಣ ಮಾಡಲಾಗುತ್ತಿದೆ. ಅವರ ಕ್ಲಬ್‌ಗಾಗಿ ಅಷ್ಟೊಂದು ವೆಚ್ಚ ಮಾಡುವ ಅಗತ್ಯ ಏನಿದೆ ಎಂದು ಕಾಂಗ್ರೆಸ್ ಸದಸ್ಯ ವಿನಯ ರಾಜ್ ಆಕ್ಷೇಪಿಸಿದರು.
ಲೇಡಿಸ್ ಕ್ಲಬ್‌ನಿಂದ ಸಾರ್ವಜನಿಕರಿಗೆ ಏನೂ ಪ್ರಯೋಜನ ಇಲ್ಲ. ಅವರು ಅಲ್ಲಿ ಕೇವಲ ಪಾರ್ಟಿ ಮಾಡುತ್ತಾರೆ. ಇದಕ್ಕಾಗಿ ಅವರಿಗೆ ಯಾಕೆ ಅಷ್ಟು ಆದ್ಯತೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೇಡಿಸ್ ಕ್ಲಬ್ ಕೇವಲ ಪಾರ್ಟಿ ಮಾಡುತ್ತಾರೆ ಎಂಬ ವಿನಯ ರಾಜ್ ಹೇಳಿಕೆ ಪರಿಷತ್ ಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿಯ ಸುಧೀರ್ ಶೆಟ್ಟಿ, ಪೂರ್ಣಿಮಾ ಸೇರಿದಂತೆ ಬಿಜೆಪಿ ಇತರ ಮಹಿಳಾ ಸದಸ್ಯರು ಎದ್ದು ನಿಂತು ನೀವು ಮಹಿಳೆಯರಿಗೆ ಅವಮಾನ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ: ಆರೋಪ- ಪ್ರತ್ಯಾರೋಪ
ಪಾಲಿಕೆಯಲ್ಲಿ ಇ – ಆಡಳಿತ ವ್ಯವಸ್ಥೆ ಸರಿಯಾಗಿ ಜಾರಿಯಾಗಿಲ್ಲ, ಇ-ಖಾತಾ, ನಿರ್ಮಾಣ್-2, ಸ್ವಯಂ ಘೋಷಿತ ಆಸ್ತಿ ತೆರಿಗೆ ಆನ್‌ಲೈನ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ಆಗುತ್ತಿದೆ ಎಂದು ಎ. ಸಿ. ವಿನಯರಾಜ್ ದೂರಿದರು.
ಭ್ರಷ್ಟಾಚಾರ ಆರೋಪ ಮೇಯರ್ ಹಾಗೂ ಆಡಳಿತ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಜವಾಬ್ದಾರಿಯುತ ಸದಸ್ಯರಾಗಿದ್ದು ಭ್ರಷ್ಟಾಚಾರ ಆರೋಪ ಮಾಡುವಾಗ ದಾಖಲೆ ಸಹಿತ ಮಾಡಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೇಯರ್ ಹೇಳಿದರು. ಆದರೆ ಆರೋಪಕ್ಕೆ ವಿನಯ ರಾಜ್ ದಾಖಲೆ ನೀಡದಿದ್ದಾಗ ಆಡಳಿತ ಸದಸ್ಯರು ಮಾತಿನ ಜಟಾಪಟಿ ನಡೆಸಿದರು. ರಾಜಕೀಯ ಕಾರಣಕ್ಕೆ ಪ್ರತಿಪಕ್ಷ ಸದಸ್ಯರು ವಿನಾ ಕಾರಣ ಆರೋಪ ಮಾತನಾಡುತ್ತಿದ್ದಾರೆ ಎಂದು ಸಚೇತಕ ಸುಧೀರ್ ಶೆಟ್ಟಿ ಆರೋಪಿಸಿದರು.
ಮಂಗಳೂರು ರಸ್ತೆಗೆ ‘ಪದ್ಮಶ್ರೀ ಹಾಜಬ್ಬ’ ಹೆಸರು!
ಮಂಗಳೂರು ಪಾಲಿಕೆ ವ್ಯಾಪ್ತಿಯ ಸ್ಟೇಟ್‌ಬ್ಯಾಂಕ್ ಎದುರಿನ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತದ ವರೆಗಿನ ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಎಂದು ನಾಮಕರಣ ಮಾಡುವ ಬಗ್ಗೆ ಕಾರ್ಯಸೂಚಿ ಮಂಡಿಸಲಾಯಿತು. ಸದಸ್ಯ ಅಬ್ದುಲ್ ಲತೀಫ್ ಇದನ್ನು ಮಂಡಿಸಿದರು. ಹಾಜಬ್ಬ ಅವರು ಇದೇ ರಸ್ತೆಯಲ್ಲಿ ಕಿತ್ತಳೆ ಮಾರಿ, ಬಂದ ದುಡ್ಡಿನಿಂದ ಹರೇಕಳದಲ್ಲಿ ಶಾಲೆ ತೆರೆದಿದ್ದರು. ಇವರ ಸಾಧನೆ ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಬೋಳಾರ ವಾರ್ಡ್‌ನ ಮಾರ್ಗನ್‌ಗೇಟ್ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ ರಸ್ತೆಗೆ ‘ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ರಸ್ತೆ’ ಎಂದು ನಾಮಕರಣ ಮಾಡಲು ಜಪ್ಪು ರಾಮಕ್ಷತ್ರಿಯ ಸೇವಾ ಸಂಘ ಮಾಡಿದ ಮನವಿಯನ್ನು ಸಭೆಯಲ್ಲಿ ಮಂಡಿಸಲಾಯಿತು.