Karnataka news paper

ಶಿರಾ ನಗರಸಭೆ ಅತಂತ್ರ: ಬಿಜೆಪಿಯಲ್ಲಿ ನಾಯಕರ ದಂಡೇ ಇದ್ದರೂ ದಂಡ..!


ಹೈಲೈಟ್ಸ್‌:

  • ಶಿರಾ ನಗರಸಭೆಯಲ್ಲಿ ಮುದುಡಿದ ಕಮಲ
  • ಸೋಲಿನ ಪರಾಮರ್ಶೆಗೆ ಇದೇ ಸಕಾಲ
  • ಕೈ ಮೇಲುಗೈ – ಪಕ್ಷೇತರರೇ ನಿರ್ಣಾಯಕ

ವಿಕ ವಿಶ್ಲೇಷಣೆ
ಶಶಿಧರ್‌ ಎಸ್‌. ದೋಣಿಹಕ್ಲು
ತುಮಕೂರು:
ಆಡಳಿತಾರೂಢ ಬಿಜೆಪಿಗೆ ಸೋಲಿನ ಯಾತ್ರೆ ಮುಂದುವರಿದಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ತುಮಕೂರಿನಲ್ಲಿ ಸೋತಿದ್ದ ಬಿಜೆಪಿ, ಶಿರಾ ನಗರಸಭೆಯಲ್ಲೂ ಮಕಾಡೆ ಮಲಗಿದೆ.

ಐದು ಮಂದಿ ಶಾಸಕರು, ಅವರಲ್ಲಿಬ್ಬರು ಸಚಿವರು, ಇಬ್ಬರು ಸಂಸದರು, ಅವರಲ್ಲೊಬ್ಬರು ಕೇಂದ್ರ ಸಚಿವರು, ಇಬ್ಬರು ಎಂಎಲ್‌ಸಿಗಳು ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಶಿರಾ ವಿಚಾರಕ್ಕೆ ಬಂದರೆ ಶಾಸಕ ಡಾ. ಸಿ. ಎಂ. ರಾಜೇಶ್‌ ಗೌಡ, ವಿಪ ಸದಸ್ಯ ಚಿದಾನಂದ ಎಂ. ಗೌಡ, ರೇಷ್ಮೆ ನಿಗಮದ ಅಧ್ಯಕ್ಷ ಎಸ್‌. ಆರ್‌. ಗೌಡ, ತೆಂಗು ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಕೆ. ಮಂಜುನಾಥ್‌ ಸೇರಿದಂತೆ ಪಕ್ಷದಲ್ಲಿ ಘಟಾನುಘಟಿಗಳ ಬಲವಿದೆ. ಆದರೆ, ಇದು ಕೇವಲ ತೋರಿಕೆಗೆ ಮಾತ್ರವಾಗಿದ್ದು, ದಂಡು ದಂಡ ಎಂಬುದನ್ನು ಈ ಫಲಿತಾಂಶ ಸಾರುತ್ತಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ; ಕಾಂಗ್ರೆಸ್-ಬಿಜೆಪಿ ಮಧ್ಯೆ ನೆಕ್‌ ಟು ನೆಕ್‌ ಫೈಟ್‌
ಶಿರಾ ನಗರಸಭೆಯಲ್ಲಿ ಕಳೆದ ಬಾರಿಯೂ ಕಾಂಗ್ರೆಸ್‌ನದ್ದೇ ದರ್ಬಾರು. ಈ ಬಾರಿ 4 ಸ್ಥಾನಗಳನ್ನು ಕಳೆದುಕೊಂಡರೂ 11 ಸ್ಥಾನಗಳೊಂದಿಗೆ ಅತಿ ಹೆಚ್ಚು ಸ್ಥಾನ ಪಡೆದು ನಿಟ್ಟುಸಿರು ಬಿಟ್ಟಿದೆ. ಜೆಡಿಎಸ್‌ ಕಳೆದ ಬಾರಿ 9 ಸ್ಥಾನ ಪಡೆದಿತ್ತು. ಈ ಬಾರಿ 7 ಸ್ಥಾನವನ್ನು ಪಡೆದಿದೆ. 4 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಕಳೆದ ಬಾರಿಗಿಂತ 3 ಸ್ಥಾನ ಹೆಚ್ಚಿಗೆ ಪಡೆದಿರುವುದೇ ಮಹತ್ತರ ಸಾಧನೆ! 8 ಸ್ಥಾನಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಪರಾಮರ್ಶೆಗೆ ಸಕಾಲ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಲ ವೃದ್ಧಿಯಾಗತ್ತಿರುವ ಸೂಚನೆ ಸಿಕ್ಕಿದೆ. ವಿಪ ಚುನಾವಣೆ ಹಾಗೂ ಶಿರಾ ನಗರಸಭೆ ಚುನಾವಣೆ ಫಲಿತಾಂಶ ಈ ಚರ್ಚೆಗೆ ಜೀವ ತುಂಬುತ್ತಿವೆ. ಅಸ್ತಿತ್ವ ಕಳೆದುಕೊಳ್ಳುತ್ತಿರುವ ಜೆಡಿಎಸ್‌ ಸುಧಾರಣೆ ಕಂಡುಕೊಳ್ಳಲು ಹೋರಾಟ ನಡೆಸಲೇಬೇಕಿದೆ. ಬಿಜೆಪಿಗೆ ಶಕ್ತಿ ಪುನರುಜ್ಜೀವನಗೊಳ್ಳಲು ಸೋಲಿನ ಪರಾಮರ್ಶೆ ಅಗತ್ಯವಿದೆ.

ತುಮಕೂರು ಡಿಸಿಯಿಂದ ಶಿಷ್ಟಾಚಾರ ಉಲ್ಲಂಘನೆ: ಕುಣಿಗಲ್‌ ಶಾಸಕ ರಂಗನಾಥ್‌ ಆರೋಪ
ಪಕ್ಷೇತರರೇ ನಿರ್ಣಾಯಕ ಪಾತ್ರ

ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಬರದಿರುವುದರಿಂದ ಪಕ್ಷೇತರರ ಪಾತ್ರವೇ ನಿರ್ಣಾಯಕವಾಗಲಿದೆ. 8 ಮಂದಿ ಪಕ್ಷೇತರರಿದ್ದು 11 ಸ್ಥಾನ ಪಡೆದ ಕಾಂಗ್ರೆಸ್‌ ಅಥವಾ 7 ಸ್ಥಾನ ಪಡೆದ ಜೆಡಿಎಸ್‌ನಲ್ಲಿ ಯಾವ ಪಕ್ಷಕ್ಕೆ ಎಷ್ಚು ಮಂದಿ ಬೆಂಬಲ ಸೂಚಿಸುತ್ತಾರೆ ಎಂಬುದು ಕುತೂಹಲ.

‘ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಬಿಜೆಪಿ ಸಂಪೂರ್ಣ ಕುಸಿದಿದೆ. ಪಕ್ಷೇತರ ಅಭ್ಯರ್ಥಿಗಳು ನಮ್ಮವರೇ ಆಗಿದ್ದು, ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರ ಮನವೊಲಿಸಿ ಬೆಂಬಲ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುವ ಆಶಾಭಾವನೆಯಲ್ಲಿದ್ದೇವೆ’ ಎನ್ನುತ್ತಾರೆ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌. ರಾಮಕೃಷ್ಣ.

‘ಪಕ್ಷೇತರರ ಜತೆ ಸೇರಿ ಅಧಿಕಾರ ಹಿಡಿಯುತ್ತೇವೆ. ಎಲ್ಲ 8 ಮಂದಿ ಪಕ್ಷೇತರರು ನಮಗೇ ಬೆಂಬಲ ಸೂಚಿಸುವ ವಿಶ್ವಾಸವಿದೆ’ ಎಂದು ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಟಿ. ಆರ್‌. ನಾಗರಾಜ್‌ ಹೇಳುತ್ತಾರೆ.

‘8 – 10 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಜೆಡಿಎಸ್‌ ಜತೆ ಸೇರಿ ಹಾಗೂ ನಿರ್ಣಾಯಕರಾಗಿರುವ ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯುವ ವಿಶ್ವಾಸವಿದೆ’ ಎನ್ನುತ್ತಾರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂಕಾರ್‌.

ಕಮಿಷನ್‌ ಬಿಜೆಪಿ ಸರಕಾರ ಕಿತ್ತೊಗೆಯಿರಿ – ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ ಸಲೀಂ ಅಹಮದ್‌



Read more