Source : ANI
ನವದೆಹಲಿ: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆ ಮುಖ್ಯಸ್ಥ(CDS) ಜನರಲ್ ಬಿಪಿನ್ ರಾವತ್, ಅವರ ರತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರಗಳನ್ನು ದೆಹಲಿಯ ಕಾಮರಾಜ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಕರೆತರಲಾಗಿದ್ದು ಅವರ ಪಾರ್ಥಿವ ಶರೀರಕ್ಕೆ ಕೇಂದ್ರದ ನಾಯಕರು, ಸೇನಾಧಿಕಾರಿಗಳು, ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಕೇಂದ್ರದ ನಾಯಕರಾದ ಅಮಿತ್ ಶಾ ಇಂದು ಬೆಳಗ್ಗೆ ಜನರಲ್ ರಾವತ್ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಇನ್ನೊಂದೆಡೆ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ದೆಹಲಿ ಕಂಟೋನ್ಮೆಂಟ್ ನ ಬ್ರಾರ್ ಸ್ಕ್ವಾರ್ ನಲ್ಲಿ ನೆರವೇರಿದೆ.
ಇದಕ್ಕೂ ಮೊದಲು ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅವರ ಪಾರ್ಥಿವ ಶರೀರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಪಡೆ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸಹ ಅಂತಿಮ ನಮನ ಸಲ್ಲಿಸಿದರು.
ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅವರ ಕಳೇಬರಕ್ಕೆ ಅವರ ಪತ್ನಿ ಮತ್ತು ಪುತ್ರಿ ಅಂತಿಮ ನಮನ ಸಲ್ಲಿಸುತ್ತಿರುವ ದೃಶ್ಯ ಕಾಣಬಹುದು.
#WATCH | Delhi: The wife and daughter of Brig LS Lidder pay their last respects to him at Brar Square, Delhi Cantt. He lost his life in #TamilNaduChopperCrash on 8th December. pic.twitter.com/oiHWxelISi
— ANI (@ANI) December 10, 2021
ನಂತರ ಸಕಲ ಸರ್ಕಾರಿ ಮಿಲಿಟರಿ ಗೌರವಗಳೊಂದಿಗೆ ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬ್ರಿಗೇಡಿಯರ್ ಲಿಡ್ಡರ್ ಭಾರತೀಯ ಸೇನೆಯಲ್ಲಿ ಉಜ್ವಲ ಭವಿಷ್ಯವನ್ನು ಹೊಂದಿದ್ದ ಅಧಿಕಾರಿಯಾಗಿದ್ದರು. ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದ ಅವರ ಮುಂದೆ ಸುದೀರ್ಘ ವೃತ್ತಿಜೀವನವಿತ್ತು ಎಂದು ಬಿಜೆಪಿ ನಾಯಕ ರಾಜ್ಯವರ್ಧನ ಸಿಂಗ್ ರಾಥೋಡ್ ಟ್ವೀಟ್ ಮಾಡಿದ್ದಾರೆ.
Delhi: Brig LS Lidder laid to final rest with full military honours. The officer lost his life in #TamilNaduChopperCrash on 8th December. pic.twitter.com/u0ybylFOTC
— ANI (@ANI) December 10, 2021
ಮೂರು ಮೃತದೇಹಗಳ ಗುರುತು ಪತ್ತೆ: ಕೂನ್ನೂರು ಬಳಿ ಸಂಭವಿಸಿದ ದುರಂತದಲ್ಲಿ ಸಜೀವ ದಹನವಾದ 13 ಮಂದಿಯಲ್ಲಿ ಇದುವರೆಗೆ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಲಿಡ್ಡರ್ ಅವರ ಗುರುತುಗಳನ್ನು ಮಾತ್ರ ಪತ್ತೆಹಚ್ಚಲಾಗಿದೆ. ಇನ್ನುಳಿದವರ ಗುರುತು ಪತ್ತೆಮಾಡಿ ಕುಟುಂಬದವರಿಗೆ ಹಸ್ತಾಂತರಿಸುವ ಕಾರ್ಯವಾಗಬೇಕಿದೆ.
Delhi | The mortal remains of CDS Gen Bipin Rawat and his wife Madhulika Rawat were brought to their residence
They both passed away in #TamilNaduChopperCrash on 8th December. pic.twitter.com/OUuD6xwuAK
— ANI (@ANI) December 10, 2021
ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರ ಹೆಸರುಗಳು: ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಕಿರಿಯ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು, ಅವರ ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ವಿವರ ನೀಡಿದ್ದಾರೆ.