ಹೈಲೈಟ್ಸ್:
- ಗದ್ದೆಮ್ಮ ದೇವಿಯ ಮೂರ್ತಿ ಸಹ ಇರುವ ಬೇವಿನ ಮರದಿಂದ ಬಿಳಿ ಹಾಲು ಜಿನುಗುತ್ತಿರುವುದನ್ನು ಜನತೆ ಪವಾಡವೆಂದೇ ನಂಬುತ್ತಿದ್ದಾರೆ
- ಜನ ಜಾತ್ರೆ ಸೇರಿದ್ದು, ಒಂದು ಕಿಮೀ ದೂರದಿಂದ ನಡೆದುಕೊಂಡು ಬಂದು ಮರಕ್ಕೆ ಸೀರೆ ತೊಡಿಸಿ ಪೂಜೆ ಸಲ್ಲಿಕೆ
- ಬೇವಿನ ಮರದಲ್ಲಿ ಹಾಲಿನ ಮಾದರಿ ದ್ರವ ಕಳೆದ ಒಂದು ವಾರದಿಂದ ಹರಿದು ಬರುತ್ತಿದೆ, ನೊರೆ ನೊರೆಯಾಗಿ ನಿರಂತರವಾಗಿ ಹಾಲಿನಂತೆ ಜಿನುಗುತ್ತಿದೆ
ಬಿಜಕಲ್ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಜನರಲ್ಲಿ ಅಚ್ಚರಿ, ಗದ್ದೆಮ್ಮ ದೇವಿಯ ಮೂರ್ತಿ ಸಹ ಇರುವ ಬೇವಿನ ಮರದಿಂದ ಬಿಳಿ ಹಾಲು ಜಿನುಗುತ್ತಿರುವುದನ್ನು ಜನತೆ ಪವಾಡವೆಂದೇ ನಂಬುತ್ತಿದ್ದಾರೆ. ಇದು ಗದ್ದೆಮ್ಮ ದೇವಿಯ ಪವಾಡ ಎಂದು ಸಹ ನಂಬಿದ್ದು ಈಗ ಈ ದೃಶ್ಯ ನೋಡಲು ಜನ ತಂಡೋಪತಂಡ ಬರುತ್ತಾರೆ, ಇದರಿಂದಾಗಿ ಇಲ್ಲಿ ಜನ ಜಾತ್ರೆ ಸೇರಿದೆ. ಒಂದು ಕಿಮೀ ದೂರದಿಂದ ನಡೆದುಕೊಂಡು ಬಂದು ಮರಕ್ಕೆ ಸೀರೆ ತೊಡಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಬೇವಿನ ಮರದಲ್ಲಿ ಹಾಲಿನ ಮಾದರಿ ದ್ರವ ಕಳೆದ ಒಂದು ವಾರದಿಂದ ಹರಿದು ಬರುತ್ತಿದೆ, ನೊರೆ ನೊರೆಯಾಗಿ ನಿರಂತರವಾಗಿ ಹಾಲಿನಂತೆ ಜಿನುಗುತ್ತಿದೆ, ಮರದ ಸುತ್ತಲು ಈ ನೊರೆಯಿಂದಾಗಿ ಹಾಲು ನೆಲದಲ್ಲಿ ಹರಿಯುವಂತೆ ಇದೆ, ಈ ದೃಶ್ಯವನ್ನು ನೋಡಿದ ಗ್ರಾಮದ ಜನ ಗದ್ದೆಮ್ಮ ದೇವಿಯ ಪವಾಡ ಎಂದು ಪೂಜೆ ಸಲ್ಲಿಸುತ್ತಿದ್ದಾರೆ.

ಇನ್ನು ಬೇವಿನ ಮರವನ್ನು ನೋಡಲು ಆಗಮಿಸುವ ಜನರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಜಮೀನಿನಲ್ಲಿ ಟೆಂಟ್ ಸಹ ಹಾಕಲಾಗಿದೆ. ಇನ್ನೂ ಈ ಸುದ್ದಿ ಸುತ್ತಲಿನ ಗ್ರಾಮಗಳಿಗೂ ಹಬ್ಬಿದ್ದು, ಹಿರಿಯುರು, ಕಿರಿಯರು ಎನ್ನದೇ ಗೋಪಾಲ್ ರಾವ್ ಜಮೀನಿನತ್ತ ಆಗಮಿಸುತ್ತಿದ್ದಾರೆ. ದೇವಿಯ ಪವಾಡ ಎಂದು ನಂಬಿರುವ ಜನರು ಭಕ್ತಿ ಭಾವದಿಂದ ನಮಸ್ಕರಿಸಿ ಹಿಂದಿರುಗುತ್ತಿದ್ದಾರೆ.
ಇದು ಗಿಡ ಮರಗಳಲ್ಲಿಯ ಸಹಜ ಕ್ರಿಯೆಯಾಗಿದೆ, ಇದರಲ್ಲಿ ಅಂಥ ವಿಶೇಷ ಏನು ಅಲ್ಲ, ಬೇವಿನ ಮರದಿಂದ ಆಗಾಗ ಹಾಲಿನಂತೆ ದ್ರವ ಜಿನುಗುತ್ತಿದೆ, ಅದು ಯಾವಾಗಲೂ ಅಲ್ಲ, ಕೆಲವು ಮರಗಳಲ್ಲಿ ಕಾಣುವುದಿಲ್ಲ, ಕೆಲವು ಮರಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಇದು ವೈಜ್ಞಾನಿಕವಾಗಿ ಸಹಜ ಕ್ರಿಯೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಆದರೂ ಜನ ಮಾತ್ರ ದೇವಿಯ ಪವಾಡ ಎಂದು ಪೂಜೆ ಸಲ್ಲಿಸುವುದನ್ನು ಮುಂದುವರಿಸಿದ್ದಾರೆ.