ಹೈಲೈಟ್ಸ್:
- ಸಿನಿಲೋಕಕ್ಕೆ ನಟಿ ರಶ್ಮಿಕಾ ಮಂದಣ್ಣ ಕಾಲಿಟ್ಟು 5 ವರ್ಷಗಳು ತುಂಬಿವೆ
- ಐದು ವರ್ಷಗಳಲ್ಲಿ 9 ಪಾಠಗಳನ್ನು ಕಲಿತಿರುವ ರಶ್ಮಿಕಾ ಮಂದಣ್ಣ
- ರಶ್ಮಿಕಾ ಮಂದಣ್ಣ ಕಲಿತಿರುವ ಪಾಠಗಳು ಯಾವುವು?
ಈ ಐದು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಕೆಲ ವಿವಾದಗಳಲ್ಲಿ ಸಿಲುಕಿದ್ದಾರೆ. ಅನೇಕ ಬಾರಿ ಟ್ರೋಲ್‌ಗಳಿಗೂ ಒಳಗಾಗಿದ್ದಾರೆ. ಬಹುತೇಕ ಯಶಸ್ಸನ್ನೇ ಕಂಡಿರುವ ನಟಿ ರಶ್ಮಿಕಾ ಮಂದಣ್ಣ ಐದು ವರ್ಷಗಳ ತಮ್ಮ ಸಿನಿ ಕೆರಿಯರ್‌ನಲ್ಲಿ ಒಂಬತ್ತು ಪಾಠಗಳನ್ನು ಕಲಿತಿದ್ದಾರೆ. ಆ 9 ಪಾಠಗಳು ಯಾವುವು ಗೊತ್ತಾ?
ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಪೋಸ್ಟ್
ಚಿತ್ರರಂಗದಲ್ಲಿ ಐದು ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ತಾವು ಕಲಿತ 9 ಪಾಠಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಉಲ್ಲೇಖಿಸಿದ್ದಾರೆ.
‘’ಸಿನಿಮಾ ರಂಗದಲ್ಲಿ ನಾನು ಐದು ವರ್ಷಗಳನ್ನು ಪೂರೈಸಿದ್ದೇನೆ. ವಾವ್.. ಇದು ಹೇಗಾಯಿತು..? ಈ ಐದು ವರ್ಷಗಳಲ್ಲಿ ನಾನು ಸುಮಾರು ಪಾಠಗಳನ್ನು ಕಲಿತಿದ್ದೇನೆ. ಆ ಪಾಠಗಳು ಏನು ಅಂದ್ರೆ…
1 – ಸಮಯವು ವೇಗವಾಗಿ ಹೋಗುತ್ತಿದೆ. ಪ್ರತಿದಿನವೂ ಮೆಮೊರೀಸ್ ಮಾಡಿಕೊಳ್ಳುವುದು..
2 – ಹೃದಯದಾಳದಿಂದ ನಿಜವಾಗಿಯೂ ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿತಿದ್ದೇನೆ. ನಾನು ಸಂತೋಷವಾಗಿದ್ದೇನೆ.
3 – ಜೀವನದಲ್ಲಿ ಯಾವುದೂ ಸುಲಭವಲ್ಲ ಎಂದು ನಾನು ಅರಿತಿದ್ದೇನೆ. ನಿಮಗೆ ಬೇಕಾಗಿರುವುದಕ್ಕಾಗಿ ನೀವು ಯಾವಾಗಲೂ ಹೋರಾಡುತ್ತಲೇ ಇರಬೇಕು. ಎಚ್ಚರವಾಗಿದ್ದು ಮತ್ತು ಕೃತಜ್ಞತೆಯೊಂದಿಗೆ ಯಾವಾಗಲೂ ಹೋರಾಡುತ್ತಿರಬೇಕು.
4 – ಕೆಲವು ವಿಷಯಗಳು ಆಯಾ ಸ್ಥಾನಗಳನ್ನು ಪಡೆಯುವವರೆಗೂ ತಾಳ್ಮೆಯಿಂದಿರಬೇಕು.. ಈ ಹಾದಿ ಕಠಿಣವಾಗಿರಬಹುದು. ಆದರೆ ತಾಳ್ಮೆ ಹಾಗೂ ಶಾಂತವಾಗಿರುವುದು ಬಹಳ ಮುಖ್ಯ.
5 – ಬೇರೆಯವರು ನಿಮಗೆ ಏನನ್ನಾದರೂ ಕಲಿಸಲು ಮುಂದಾಗುತ್ತಲೇ ಇರುತ್ತಾರೆ. ಹೀಗಾಗಿ, ಕಲಿಯಲು ಮುಕ್ತವಾಗಿರಬೇಕು. ಇದರಿಂದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ.
6 – ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕ ಭಾರಗಳಿಂದ ದೂರವಿರುವುದನ್ನು ಕಲಿತಿದ್ದೇನೆ.
7 – ಜೀವನದಲ್ಲಿ ನಮಗೆ ಬೇಕಾಗಿರುವ, ನಾವು ಬಯಸುವ ವಿಷಯಗಳಿಗೆ ಸಮಯವನ್ನು ನೀಡಬೇಕು. ಉದಾಹರಣೆಗೆ ವೃತ್ತಿಯಾಗಿದ್ದರೆ – ಅದಕ್ಕೆ ಸಮಯ ನೀಡಬೇಕು. ಪ್ರೀತಿ ಮುಖ್ಯವಾಗಿದ್ದರೆ – ಅದಕ್ಕೆ ಸಮಯ ನೀಡಬೇಕು. ಕುಟುಂಬ ಮುಖ್ಯವಾಗಿದ್ದರೆ – ಅದಕ್ಕೆ ಸಮಯ ನೀಡಬೇಕು. ನಿಮಗೆ ನೀವೇ ಮುಖ್ಯವಾಗಿದ್ದರೆ – ನಿಮಗಾಗಿ ನೀವು ಸಮಯ ಮಾಡಿಕೊಳ್ಳಬೇಕು. ಯಾವುದು ಮುಖ್ಯ ಅಂತ ನೀವೇ ನಿರ್ಧರಿಸಬೇಕು. ಸಮಯ ಮತ್ತು ಫ್ಲೈಟ್ ಯಾರನ್ನೂ ಕಾಯುವುದಿಲ್ಲ.
8 – ಸ್ವಚ್ಛ ಆಹಾರವನ್ನು ತಿನ್ನುವುದು, ಚೆನ್ನಾಗಿ ನಿದ್ದೆ ಮಾಡುವುದು, ಕಠಿಣವಾಗಿ ವರ್ಕೌಟ್ ಮಾಡುವುದು, ಚೆನ್ನಾಗಿ ನಗುವುದು, ಮುಕ್ತವಾಗಿ ಪ್ರೀತಿಸುವುದನ್ನು ನಾನು ಕಲಿತಿದ್ದೇನೆ.
9 – ನೀವು ಯಾರಿಗೂ ಉಪಕಾರ ಮಾಡಬೇಕಾಗಿಲ್ಲ. ನಿಮ್ಮ ಬಗ್ಗೆ ನೀವು ಮೊದಲು ಯೋಚಿಸಬೇಕು ಅಷ್ಟೇ.
ಇವಿಷ್ಟೇ ಅಲ್ಲ.. ಇನ್ನೂ ಹಲವಾರು ವಿಷಯಗಳಿವೆ. ಅದನ್ನೆಲ್ಲಾ ಇನ್ನೊಮ್ಮೆ ಹೇಳುತ್ತೇನೆ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ತೆಲುಗಿನ ‘ಪುಷ್ಪ – ದಿ ರೂಲ್’, ಹಿಂದಿಯ ‘ಮಿಷನ್ ಮಜ್ನು’ ಮತ್ತು ‘ಗುಡ್ ಬೈ’ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.