Karnataka news paper

ಆ್ಯಷಸ್‌: ದ್ವಿತೀಯ ಟೆಸ್ಟ್‌ಗೂ ಮುನ್ನ ಆಸೀಸ್‌ಗೆ ಶಾಕ್, 4 ಆಟಗಾರರು ಔಟ್‌!


ಹೈಲೈಟ್ಸ್‌:

  • ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ್ದ ಆಸ್ಟ್ರೇಲಿಯಾ.
  • 2ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆ ಕಾರಣ ಪ್ರಮುಖರನ್ನು ಕಳೆದುಕೊಂಡ ಆಸೀಸ್‌.

ಅಡಿಲೇಡ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯ ಆರಂಭಕ್ಕೂ ಮೊದಲೇ ಆಸ್ಟ್ರೇಲಿಯಾ ತಂಡ ಭಾರಿ ಆಘಾತ ಅನುಭವಿಸಿದ್ದು, ಸ್ಟಾರ್‌ ಆಟಗಾರರಾದ ಜಾಶ್‌ ಹೇಝಲ್‌ವುಡ್‌ ಮತ್ತು ಡೇವಿಡ್‌ ವಾರ್ನರ್‌ ಸೇವೆ ಕಳೆದುಕೊಳ್ಳಲಿದೆ ಎಂದು ವರದಿಗಳಾಗಿವೆ.

ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ್ದ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಆಸೀಸ್‌ ಗೆಲುವಿಗೆ ಬಲವಾಗಿದ್ದ ವಾರ್ನರ್‌, ಹೇಝಲ್‌ವುಡ್‌ ಜೊತೆಗೆ ಅಲೆಕ್ಸ್‌ ಕೇರಿ ಮತ್ತು ಟ್ರಾವಿಸ್‌ ಹೆಡ್‌ ಕೂಡ ಈಗ ಗಾಯದ ಸಮಸ್ಯೆಗಳಿಗೆ ತುತ್ತಾಗಿದ್ದು, ಎರಡನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿರುವ ಬಲಗೈ ವೇಗಿ ಹೇಝಲ್‌ವುಡ್‌ ಸ್ಥಾನದಲ್ಲಿ 30 ವರ್ಷದ ಅನುಭವಿ ವೇಗದ ಬೌಲರ್‌ ಜೇ ರಿಚರ್ಡ್ಸನ್‌ ಆಸ್ಟ್ರೇಲಿಯಾ ತಂಡ ಸೇರುವಲ್ಲಿ ಮುಂಚೂಣಿಯಲ್ಲಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 16ರಿಂದ 2-ರವರೆಗೆ ಅಡಿಲೇಡ್‌ನಲ್ಲಿ ನಡೆಯಲಿದೆ. ಈ ನಡುವೆ ಗಾಯಗೊಂಡಿರುವ ಹೇಝಲ್‌ವುಡ್‌, ವಾರ್ನರ್‌, ಕೇರಿ ಮತ್ತು ಹೆಡ್‌ ಸಿಡ್ನಿಗೆ ಹಿಂದಿರುಗಿದ್ದಾರೆ ಎಂದು ಫಾಕ್ಸ್‌ ಸ್ಪೋರ್ಟ್ಸ್‌ ವರದಿ ಮಾಡಿದೆ.

ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ ಪಂತ್‌ ದಾಖಲೆ ಮುರಿದ ಅಲೆಕ್ಸ್‌ ಕೇರಿ!

ಗಬ್ಬಾ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 94 ರನ್‌ಗಳಿಸಿ ಔಟ್‌ ಆಗಿದ್ದ ವಾರ್ನರ್‌ ಬ್ಯಾಟಿಂಗ್‌ ವೇಳೆ ತಮ್ಮ ಬಲ ಪಕ್ಕೆಲುಬಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ವಾರ್ನರ್‌ ಸ್ಥಾನದಲ್ಲಿ ಉಸ್ಮಾನ್‌ ಖವಾಜ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಕ್ವೀನ್ಸ್‌ಲ್ಯಾಂಡ್‌ನ ಬ್ರೈಸ್‌ ಸ್ಟ್ರೀಟ್‌ ಅವರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರಿಸುವ ಸಾಧ್ಯತೆ ಇದ್ದು, ಓಪನರ್‌ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಬ್ರೈಸ್‌ ಆಸ್ಟ್ರೇಲಿಯಾ ‘ಎ’ ಪರ ಶತಕ (119) ಬಾರಿಸಿದ್ದರು.

ಆಸೀಸ್‌ಗೆ ಭರ್ಜರಿ ಜಯ
ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಇಂಗ್ಲೆಂಡ್ ತಂಡವನ್ನು 147 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ ಬಳಿಕ ಟ್ರಾವಿಸ್‌ ಹೆಡ್‌ (152) ಅವರ ಭರ್ಜರಿ ಶತಕದ ಬಲದಿಂದ 425 ರನ್‌ ಬಾರಿಸಿ ದೊಡ್ಡ ಮುನ್ನಡೆ ಗಳಿಸಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಜೋ ರೂಟ್‌ (89) ಮತ್ತು ಡಾವಿಡ್‌ ಮಲಾನ್‌ (82) ಅವರ ಬ್ಯಾಟಿಂಗ್‌ ಬಲದಿಂದ ಹೋರಾಟ ನಡೆಸಿದ್ದ ಇಂಗ್ಲೆಂಡ್‌ 278 ರನ್‌ ಗಳಿಸಿದರೂ ಆತಿಥೇಯರಿಗೆ 20 ರನ್‌ಗಳ ಗುರಿ ನೀಡಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತಿದ ಆಸೀಸ್‌ ಒಂದು ವಿಕೆಟ್‌ ಕಳೆದುಕೊಂಡು 9 ವಿಕೆಟ್‌ಗಳ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಹೀನಾಯ ಸೋಲಿನ ಬೇಸರದಲ್ಲಿದ್ದ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ!

ಪ್ರಥಮ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌ 50.1 ಓವರ್‌ಗಳಿಗೆ 147/10 (ಜೋಸ್‌ ಬಟ್ಲರ್‌ 39, ಓಲ್ಲೀ ಪೋಪ್‌ 35; ಪ್ಯಾಟ್‌ ಕಮಿನ್ಸ್‌ 38ಕ್ಕೆ 5).
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 104.3 ಓವರ್‌ಗಳಿಗೆ 425/10 (ಟ್ರಾವಿಸ್‌ ಹೆಡ್‌ 152, ಡೇವಿಡ್‌ ವಾರ್ನರ್ 94; ಓಲ್ಲೀ ರಾಬಿನ್ಸನ್‌ 58ಕ್ಕೆ 3).
ಇಂಗ್ಲೆಂಡ್‌: ದ್ವಿತೀಯ ಇನಿಂಗ್ಸ್‌ 103 ಓವರ್‌ಗಳಿಗೆ 297/10 (ಜೋ ರೂಟ್‌ 89, ಡಾವಿಡ್‌ ಮಲಾನ್‌ 82; ನೇಥನ್ ಲಯಾನ್‌ 91ಕ್ಕೆ 4).
ಆಸ್ಟ್ರೇಲಿಯಾ: ದ್ವಿತೀಯ ಇನಿಂಗ್ಸ್‌ 5.1 ಓವರ್‌ಗಳಿಗೆ 20 ( ಅಲೆಕ್ಸ್‌ ಕೇರಿ 9, ಮಾರ್ಕಸ್‌ ಹ್ಯಾರಿಸ್‌ 9*; ಓಲ್ಲೀ ರಾಬಿನ್ಸನ್‌ 13ಕ್ಕೆ 1).



Read more