ಬೆಂಗಳೂರು: ಬಿಜೆಪಿ ಕಳೆದ ಬಾರಿಗಿಂತ ಉತ್ತಮ ನಿರ್ವಹಣೆ ಮಾಡಿದೆ. ಆದರೆ, ಇನ್ನೂ ಹಲವು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಉತ್ತಮ ಸಾಧನೆ ಮಾಡಬಹುದಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಮತ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಗೆದ್ದಿಲ್ಲ. ಅಲ್ಲಿ ಶೇ 65 ರಷ್ಟು ಅಲ್ಪಸಂಖ್ಯಾತ ಸಮುದಾಯದವರು ಇದ್ದಾರೆ. ಅದು ಹೇಳುವುದು ಸಮಂಜಸವಲ್ಲ. ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳನ್ನು ಭೇದ ಮಾಡದೇ ಅಭಿವೃದ್ಧಿ ಕಾರ್ಯ ಮಾಡುತ್ತೇವೆ’ ಎಂದು ಹೇಳಿದರು.
‘ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. 4–5 ನಗರಸಭೆ ಮತ್ತು ಪುರಸಭೆಗಳ ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಹಿಗ್ಗುವ ಅಗತ್ಯವಿಲ್ಲ’ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
‘ಬಿಜೆಪಿಯ ಬುಡ ಅಲ್ಲಾಡುತ್ತಿದೆ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ, ‘ಕಾಂಗ್ರೆಸ್‌ಗೆ ಬುಡವೇ ಇಲ್ಲ’. ‘ಕಾಂಗ್ರೆಸ್‌ನವರು 2023 ರಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಕನಸು ಕಾಣಲಿ, ನಮ್ಮ ಆಕ್ಷೇಪ ಇಲ್ಲ. ಹಕೀಕತ್ ಎಂದರೆ 2023 ರಲ್ಲೂ ಬಿಜೆಪಿಯೇ ಗೆಲ್ಲುತ್ತದೆ. 2028 ರವರೆಗೆ ಅಧಿಕಾರದಲ್ಲಿ ಇರುತ್ತದೆ’ ಎಂದು ಬೊಮ್ಮಾಯಿ ತಿಳಿಸಿದರು.