Karnataka news paper

ಬಿಟ್ ಕಾಯಿನ್, ಪರ್ಸೆಂಟೇಜ್, ಮತಾಂತರ.. ಅಧಿವೇಶನದಲ್ಲಿ ಚರ್ಚೆಗೆ ಸಿದ್ಧ ಅಂದ್ರು ಸಿದ್ದರಾಮಯ್ಯ..!


ಹೈಲೈಟ್ಸ್‌:

  • ಸೋಮವಾರದಿಂದ ಆರಂಭ ಆಗಲಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನ
  • ಅಕಾಲಿಕ ಮಳೆಯಿಂದಾದ ಬೆಳೆ ಹಾನಿ ಕುರಿತು ಚರ್ಚೆ
  • ಕೊರೊನಾ ಪರಿಹಾರ, ಬಿಟ್ ಕಾಯಿನ್ ಕುರಿತೂ ಚರ್ಚಿಸುತ್ತೇವೆ ಎಂದರು ಸಿದ್ದರಾಮಯ್ಯ

ಕೋಲಾರ: ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭ ಆಗಲಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ, ಅಕಾಲಿಕ ಮಳೆಯಿಂದಾದ ಬೆಳೆ ಹಾನಿ, ಕೊರೊನಾ ಪರಿಹಾರ, ಬಿಟ್ ಕಾಯಿನ್, ಗುತ್ತಿಗೆದಾರರ ಪರ್ಸೆಂಟೇಜ್ ವಿವಾದ ಹಾಗೂ ಮತಾಂತರ ಕಾಯ್ದೆ ಬಗ್ಗೆ ಚರ್ಚೆ ಮಾಡ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಮತಾಂತರವನ್ನು ಬಲವಂತವಾಗಿ ಮಾಡಬಾರದು ಅಂತಾ ಈಗಾಗಲೇ ಕಾಯ್ದೆ ಇದೆ. ಆದರೂ ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಈಗ ರಾಜಕೀಯ ಮಾಡೋದು ಸರಿಯಲ್ಲ ಎಂದರು.

ಇನ್ನು, ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕೋಲಾರದಲ್ಲಿ ಕೂಡ ಅನಿಲ್ ಕುಮಾರ್ ಗೆಲುವು ಸಾಧಿಸಲಿದ್ದಾರೆ ಎಂದರು.

ಜೆಡಿಎಸ್ ಪಕ್ಷದವರು 6 ಕಡೆ ಅಭ್ಯರ್ಥಿ ಹಾಕಿದ್ದರು. ಆದ್ರೆ ಮಿಕ್ಕ 19 ಕಡೆ ಏಕೆ ಹಾಕಿಲ್ಲ ಎಂದು ಸವಾಲೆಸೆದ ಸಿದ್ದರಾಮಯ್ಯ, ಉಳಿದ ಕಡೆ ಜೆಡಿಎಸ್ ಪಕ್ಷದವರು ಬಿಜೆಪಿಗೆ ವೋಟು ಹಾಕಿಸಿರುತ್ತಾರೆ ಎಂದು ಆರೋಪಿಸಿದರು. ಅಷ್ಟೇ ಅಲ್ಲ, ಜೆಡಿಎಸ್‌ನವರು ಬಿಜೆಪಿಗೆ ಯಾವಾಗಲೂ ಬಿ ಟೀಂ ಎಂದು ಹರಿಹಾಯ್ದ ಸಿದ್ದರಾಮಯ್ಯ, ನಾವು ಯಾವತ್ತೂ ಜೆಡಿಎಸ್ ಪಕ್ಷದವರ ಮನೆ ಬಾಗಿಲಿಗೆ ಹೋಗಿ ನಮ್ಮ ಜೊತೆ ಅಧಿಕಾರ ಮಾಡಿ ಎಂದು ಕೇಳಿಲ್ಲ ಎಂದರು. ಕಳೆದ ಚುನಾವಣೆ ವೇಳೆ ಮಾತುಕತೆ ಆಗಿದ್ದು ನಿಜ, ಆದ್ರೆ ನಾನಂತೂ ಅವರ ಮನಗೆ ಹೋಗಿಲ್ಲ ಎಂದರು.

ಬೆಳಗಾವಿ ಅಧಿವೇಶನ: ಕಾಂಗ್ರೆಸ್‌ ಕಾರ್ಯತಂತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದ ಡಿಕೆ ಶಿವಕುಮಾರ್‌
ಇನ್ನು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜೆಡಿಎಸ್ ಪಕ್ಷದವರು ಏಕೆ ವಿರೋಧ ಮಾಡಿಲ್ಲ ಎಂದು ಸವಾಲೆಸೆದ ಸಿದ್ದರಾಮಯ್ಯ, ಕೊರೊನಾ ಸಮಯದಲ್ಲಿ ಅಧಿವೇಶನದಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿತ್ತು. ಇದೇ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಮಠಾಧೀಶರ ಬಗ್ಗೆ ಮಾತನಾಡೋದಿಲ್ಲ. ಆಹಾರ ಪದ್ಧತಿ ಅವರವರಿಗೆ ಬಿಟ್ಟಿರೋ ವಿಚಾರ. ಮೊಟ್ಟೆ ಯಾರು ತಿನ್ನುತ್ತಾರೋ ಅವರಿಗೆ ಕೊಡಿ, ಇಲ್ಲ ಅಂದ್ರೆ ಕೊಡ್ಬೇಡಿ ಎಂದಷ್ಟೇ ಹೇಳಿದರು.

ಬೆಳಗಾವಿ ಅಧಿವೇಶನ: ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ಬಳಿ ಇವೆ ಹಲವು ಅಸ್ತ್ರಗಳು!
ಇದೇ ವೇಳೆ ಆರ್. ಎಲ್. ಜಾಲಪ್ಪ ಅವರ ಆರೋಗ್ಯ ವಿಚಾರಿಸಿದ ಮಾಜಿ‌ ಸಿಎಂ ಸಿದ್ದರಾಮಯ್ಯ, ಬಳಿಕ ಈ ಕುರಿತಾಗಿಯೂ ಮಾಧ್ಯಮಗಳ ಜೊತೆಗೆ ಮಾತನಾಡಿದರು. 35 ದಿನಗಳಿಂದ ಜಾಲಪ್ಪ ಅವರು ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ಫೇಲ್ ಆಗಿದೆ, ಡಯಾಲಿಸಿಸ್‌ನಲ್ಲಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

ಜಾಲಪ್ಪ ಅವರ ಜೀನ್ಸ್ ಗಟ್ಟಿಯಾಗಿದೆ. ಹಾಗಾಗಿ ಆರೋಗ್ಯವಾಗಿದ್ದಾರೆ. ನಾನು ಬಂದಿದ್ದೇನೆ ಎಂದು ಕೂಗಿ ಹೇಳಿದಾಗ ಕಣ್ಣು ಬಿಟ್ಟು ನೋಡಿದ್ರು. ನಾವು ಜನತಾ ಪರಿವಾರದಿಂದಲೂ ಒಟ್ಟಿಗಿದ್ದೇವೆ. ಸದಾ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದವರ ಪರವಾಗಿದ್ರು. ಕೋಲಾರದಿಂದಲೇ ಅಹಿಂದ ಪ್ರಾರಂಭ ಆಗಿದ್ದು, ಅದರ ಅಧ್ಯಕ್ಷತೆಯನ್ನು ಜಾಲಪ್ಪನವರೇ ವಹಿಸಿದ್ರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಕುಮಾರಸ್ವಾಮಿ ಮನೆ ಬಾಗಿಲಿಗೆ ನಾನು ಹೋಗಿಲ್ಲ, ಸರ್ಕಾರ ಮಾಡೋಣ ಎಂದು ನಾನು ಕರೆದಿಲ್ಲ : ಸಿದ್ದರಾಮಯ್ಯ



Read more