ರಸ್ತೆ ಅಪಘಾತದಿಂದಾಗಿ ಸಂಚಾರಿ ವಿಜಯ್ ಕೊನೆಯುಸಿರೆಳೆದರೆ, ತೀವ್ರ ಹೃದಯ ಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ವಿಧಿವಶರಾದರು. ‘ಬಿಗ್ ಬಾಸ್’ ವಿಜೇತ ಸಿದ್ದಾರ್ಥ್ ಶುಕ್ಲಾ ಕೂಡ ಹಠಾತ್ ನಿಧನರಾದರು. ಹಿರಿಯ ನಟ ಶನಿಮಹಾದೇವಪ್ಪ, ‘ಬಿಗ್ ಬಾಸ್’ ಖ್ಯಾತಿಯ ಜಯಶ್ರೀ, ಶಂಖನಾದ ಅರವಿಂದ್, ನಿರ್ದೇಶಕ ರೇಣುಕಾ ಶರ್ಮಾ, ಕೃಷ್ಣೇಗೌಡ, ತಿಪಟೂರು ರಘು, ಬಿ.ಜಯಾ, ‘ಅಭಿನಯ ಶಾರದೆ’ ಜಯಂತಿ, ಹಿರಿಯ ನಟ ಶಿವರಾಂ ಸೇರಿದಂತೆ ಕೆಲ ತಾರೆಯರು ಮೋಡದ ಮರೆಗೆ ಸರಿದಿದ್ದು ಇದೇ ವರ್ಷ.
ಶನಿಮಹಾದೇವಪ್ಪ

ಕನ್ನಡ ಚಿತ್ರರಂಗದಲ್ಲಿ 550ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಹಿರಿಯ ಪೋಷಕ ನಟ ಶನಿಮಹದೇವಪ್ಪ ಜನವರಿ 3 ರಂದು ಸಂಜೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದರು. ‘ಭಕ್ತ ಕುಂಬಾರ’, ‘ಶ್ರೀನಿವಾಸ ಕಲ್ಯಾಣ’, ‘ಕವಿರತ್ನ ಕಾಳಿದಾಸ’, ‘ಮೂರೂವರೆ ವಜ್ರಗಳು’ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಶನಿಮಹದೇವಪ್ಪ ನಟಿಸಿದ್ದರು.
‘ಭಕ್ತ ಕುಂಬಾರ’, ‘ಶ್ರೀನಿವಾಸ ಕಲ್ಯಾಣ’ ಸಿನಿಮಾಗಳ ಖ್ಯಾತಿಯ ನಟ ಶನಿ ಮಹದೇವಪ್ಪ ಇನ್ನಿಲ್ಲ!
ಸಂಗೀತ ನಿರ್ದೇಶಕ ರತ್ನಂ

ಸುಮಾರು 70ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದ ರತ್ನಂ ಅವರು ತಮ್ಮ 97ನೇ ವಯಸ್ಸಿನಲ್ಲಿ ಜನವರಿ 9 ರಂದು ನಿಧನರಾದರು. ಚೆನ್ನೈನವರಾದರೂ ಕನ್ನಡದ ಮೇಲಿನ ಪ್ರೀತಿಗೆ ಬೆಂಗಳೂರಿನಲ್ಲೇ ತಮ್ಮ ಅಂತ್ಯಕ್ರಿಯೆ ನಡೆಸಬೇಕೆಂದು ರತ್ನಂ ಅವರು ಮೊದಲೇ ಹೇಳಿದ್ದರು. ಅದರಂತೆ ಬೆಂಗಳೂರಿನಲ್ಲೇ ಅವರ ಅಂತ್ಯಕ್ರಿಯೆ ನಡೆಯಿತು.
ಹಿರಿಯ ಸಂಗೀತ ನಿರ್ದೇಶಕ ರತ್ನಂ ನಿಧನ! ಹಳೆಯ ನೆನಪುಗಳನ್ನು ಹಂಚಿಕೊಂಡ ಹಿರಿಯ ನಟ ರಾಜೇಶ್
ವೆನ್ನೆಲಕಂಟಿ ರಾಜೇಶ್ವರ ಪ್ರಸಾದ್

ತೆಲುಗು ಚಿತ್ರರಂಗದ ಜನಪ್ರಿಯ ಗೀತರಚನಕಾರ ವೆನ್ನೆಲಕಂಟಿ ರಾಜೇಶ್ವರ ಪ್ರಸಾದ್ ಅವರು ಜನವರಿ 5 ರಂದು ಹೃದಯಾಘಾತದಿಂದ ಮೃತರಾದರು. ಚೆನ್ನೈನಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು. ವೆನ್ನೆಲಕಂಟಿ ಎಂದೇ ಖ್ಯಾತರಾಗಿದ್ದ ಅವರು 2 ಸಾವಿರಕ್ಕೂ ಅಧಿಕ ಸಿನಿಮಾ ಗೀತೆಗಳನ್ನು ಬರೆಯುವ ಮೂಲಕ ಜನಪ್ರಿಯರಾಗಿದ್ದರು. ವೆನ್ನೆಲಕಂಟಿ ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದರು.
ಜಯಶ್ರೀ

‘ಉಪ್ಪು ಹುಳಿ ಖಾರ’, ‘ಕನ್ನಡ್ ಗೊತ್ತಿಲ್ಲ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿದ್ದ ‘ಬಿಗ್ ಬಾಸ್’ ಕನ್ನಡ ಸೀಸನ್ 3ರ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಜನವರಿ 25 ರಂದು ಆತ್ಮಹತ್ಯೆ ಮಾಡಿಕೊಂಡರು. ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾಕಿರಣ ಆಶ್ರಮದ ಕೊಠಡಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ರಾಜೀವ್ ಕಪೂರ್

‘ರಾಮ್ ತೇರಿ ಗಂಗಾ ಮೈಲಿ’ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ರಾಜೀವ್ ಕಪೂರ್ ಅವರು ಫೆಬ್ರವರಿ 9 ರಂದು ಹೃದಯಾಘಾತದಿಂದ ನಿಧನರಾದರು. ರಿಷಿ ಕಪೂರ್ ಮತ್ತು ರಣಧೀರ್ ಕಪೂರ್ ಅವರ ಕಿರಿಯ ಸಹೋದರ ರಾಜೀವ್ ಅವರು ನಟನೆ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು.
ಸತೀಶ್ ಕೌಲ್

ಪಂಜಾಬಿ ನಟ ಸತೀಶ್ ಕೌಲ್ ಅವರು ಅನೇಕ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು. ಅಷ್ಟೇ ಅಲ್ಲದೆ ಬಿ.ಆರ್.ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ಕೊರೊನಾದಿಂದಾಗಿ ಸತೀಶ್ ಅವರು ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ರಘು ಶೆಟ್ಟಿ

ತುಳು ನಿರ್ದೇಶಕ ರಘು ಶೆಟ್ಟಿ ಅವರು ಏಪ್ರಿಲ್ 17 ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ಮೂಡುಬಿದಿರೆ ಮೂಲದ ರಘು ಶೆಟ್ಟಿ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದರು. ‘ಅರ್ಜುನ್ ವೆಡ್ಸ್ ಅಮೃತ’ ಎಂಬ ತುಳು ಚಿತ್ರವನ್ನು ರಘು ಶೆಟ್ಟಿ ನಿರ್ದೇಶಿಸಿದ್ದರು. ಜೊತೆಗೆ ಹೋಟೆಲ್ ಉದ್ಯಮಕ್ಕೂ ರಘು ಶೆಟ್ಟಿ ಕೈ ಹಾಕಿದ್ದರು.
‘ಅರ್ಜುನ್ ವೆಡ್ಸ್ ಅಮೃತ’ ಖ್ಯಾತಿಯ ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ಇನ್ನಿಲ್ಲ
ಡಾ.ಮಂಜುನಾಥ್

ಏಪ್ರಿಲ್ 18 ರಂದು ನಟ, ನಿರ್ಮಾಪಕ ಡಾ. ಡಿ.ಎಸ್. ಮಂಜುನಾಥ್ ಅವರು ಕೊರೊನಾದಿಂದ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. 2019ರಲ್ಲಿ ತೆರೆಕಂಡ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ಮಂಜುನಾಥ್ ನಿರ್ಮಾಣ ಮಾಡಿದ್ದರು.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ಮಾಪಕ, ನಟ ಡಾ. ಮಂಜುನಾಥ್ ಕೊರೊನಾದಿಂದ ಸಾವು!
ಮಸ್ತಾನ್

ಕನ್ನಡ ಚಿತ್ರರಂಗದ ಹಿರಿಯ ಪೋಸ್ಟರ್ ವಿನ್ಯಾಸಕರಾದ ಮಸ್ತಾನ್ ಅವರು ಕೋವಿಡ್-19ಗೆ ಬಲಿಯಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದ ಹಿರಿಯ ಪೋಸ್ಟರ್ ಡೈಸೈನರ್ ಆಗಿದ್ದ ಮಸ್ತಾನ್, ಸುಮಾರು 42 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆಗಿನ ಕಾಲದ ಹಿರಿಯ ನಟರ ಸಿನಿಮಾಗಳಿಂದಿಡಿದು, ಇತ್ತೀಚಿನ ಸಿನಿಮಾಗಳವರೆಗೂ ಅವರು ಪೋಸ್ಟರ್ ಡಿಸೈನ್ ಮಾಡಿದ್ದರು. 42 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಹೆಮ್ಮೆ ಅವರದ್ದು.
ಕೊರೊನಾದಿಂದ ಸಾವನಪ್ಪಿದ ಸ್ಯಾಂಡಲ್‌ವುಡ್‌ನ ಹಿರಿಯ ಪೋಸ್ಟರ್ ಡಿಸೈನರ್ ಮಸ್ತಾನ್!
ನಿರ್ಮಾಪಕ ರಾಮು

ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಏಪ್ರಿಲ್ 26 ರಂದು ಕೊರೊನಾ ವೈರಸ್‌ನಿಂದ ನಿಧನರಾದರು. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದರು. ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ‘ಲಾಕಪ್ ಡೆತ್’, ‘AK-47’, ‘ರಾಕ್ಷಸ’, ‘ಕಲಾಸಿಪಾಳ್ಯ’, ‘ಅರ್ಜುನ್ ಗೌಡ’ ಸೇರಿ ಅವರು ಹಲವು ಸಿನಿಮಾಗಳನ್ನು ರಾಮು ನಿರ್ಮಾಣ ಮಾಡಿದ್ದರು.
ನಿರ್ಮಾಪಕ ಚಂದ್ರಶೇಖರ್

ಮಹಾಮಾರಿ ಕೊರೊನಾ ವೈರಸ್‌ಗೆ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಂದ್ರಶೇಖರ್ ಬಲಿಯಾದರು. ಕೋವಿಡ್-19 ಸೋಂಕಿಗೆ ಒಳಗಾಗಿದ್ದ ನಿರ್ಮಾಪಕ ಚಂದ್ರಶೇಖರ್ ಏಪ್ರಿಲ್ 28 ರಂದು ನಿಧನರಾದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಅಣ್ಣಯ್ಯ’, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಬಿಂದಾಸ್’, ಕಿಚ್ಚ ಸುದೀಪ್ ಅಭಿನಯದ ‘ರನ್ನ’, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಏನೋ ಒಂಥರಾ’ ಮುಂತಾದ ಚಿತ್ರಗಳನ್ನ ಚಂದ್ರಶೇಖರ್ ನಿರ್ಮಾಣ ಮಾಡಿದ್ದರು.
ಕೋವಿಡ್19: ‘ಅಣ್ಣಯ್ಯ’, ‘ಬಿಂದಾಸ್’, ‘ರನ್ನ’ ನಿರ್ಮಾಪಕ ಚಂದ್ರಶೇಖರ್ ನಿಧನ
ಕೆ.ವಿ.ಆನಂದ್

ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಹಾಗೂ ನಿರ್ದೇಶಕ ಕೆ.ವಿ.ಆನಂದ್ ಹೃದಯಾಘಾತದಿಂದ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ‘ಪುಣ್ಯ ಭೂಮಿ ನಾ ದೇಸಂ’, ‘ಕಾದಲ್ ದೇಸಂ’, ‘ಚಂದ್ರಲೇಖ’, ‘ಮುಧಲವನ್’, ‘ಜೋಶ್’, ‘ನಾಯಕ್: ದಿ ರಿಯಲ್ ಹೀರೋ’, ‘ಬಾಯ್ಸ್, ‘ಖಾಕಿ’, ‘ಶಿವಾಜಿ’ ಮುಂತಾದ ಚಿತ್ರಗಳಿಗೆ ಕೆ.ವಿ.ಆನಂದ್ ಛಾಯಾಗ್ರಹಣ ಮಾಡಿದ್ದರು. ‘ಅಯನ್’, ‘ಕೊ’, ‘ಮಾತ್ರಾನ್’, ‘ಕಾವನ್’, ‘ಕಾಪ್ಪಾನ್’ ಚಿತ್ರಗಳನ್ನು ಕೆ.ವಿ.ಆನಂದ್ ನಿರ್ದೇಶಿಸಿದ್ದರು.
ನಟ ಪಾಂಡು

ತಮಿಳಿನ ಜನಪ್ರಿಯ ಹಾಸ್ಯ ನಟ ಪಾಂಡು (74) ಕೂಡ ಕೊರೊನಾದಿಂದಾಗಿ ನಿಧನರಾದರು. ಕೊರೊನಾ ಸೋಂಕು ತಗುಲಿದ್ದರಿಂದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೇ 6 ರಂದು ಮುಂಜಾನೆ ಅವರು ಕೊನೆಯುಸಿರೆಳೆದರು.
ವನ್‌ರಾಜ್ ಭಾಟಿಯಾ

ಬಾಲಿವುಡ್‌ನ ಹಿರಿಯ ಸಂಗೀತ ನಿರ್ದೇಶಕ ವನ್‌ರಾಜ್ ಭಾಟಿಯಾ ನಿಧನರಾದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವನ್‌ರಾಜ್ ಭಾಟಿಯಾ ಮೇ 7ರಂದು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಶಂಖನಾದ ಅರವಿಂದ್

ಮೇ 7ರಂದು ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಶಂಖನಾದ ಅರವಿಂದ್ ಅವರು ಕೊರೊನಾದಿಂದಾಗಿ ಕೊನೆಯುಸಿರೆಳೆದರು. ಕನ್ನಡದಲ್ಲಿ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ಅರವಿಂದ್ ಅವರು ಬಣ್ಣ ಹಚ್ಚಿದ್ದರು. ಕಾಶಿನಾಥ್, ಜಗ್ಗೇಶ್ ಅವರ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದರು. 1986ರಲ್ಲಿ ತೆರೆಕಂಡಿದ್ದ ‘ಶಂಖನಾದ’ ಸಿನಿಮಾದಲ್ಲಿ ಅರವಿಂದ್ ಪ್ರಧಾನ ಪಾತ್ರ ನಿರ್ವಹಿಸಿದ್ದರು.
ರೇಣುಕಾ ಶರ್ಮಾ

ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ನಿಧನರಾದರು. ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ರೇಣುಕಾ ಶರ್ಮಾ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಕೊನೆಯುಸಿರೆಳೆದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಶ್ರೀರಂಗ

ಕನ್ನಡ ಚಿತ್ರರಂಗದಲ್ಲಿ ಅನೇಕ ಜನಪ್ರಿಯ ಗೀತೆಗಳ ಮೂಲಕ ಗುರುತಿಸಿಕೊಂಡಿದ್ದ ಹಿರಿಯ ಗೀತ ಸಾಹಿತಿ ಶ್ರೀರಂಗ ಅವರು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ನಾಗರಬಾವಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಕನ್ನಡ ಚಿತ್ರರಂಗದಲ್ಲಿ ಅವರು ಸುಮಾರು ಒಂದು ಸಾವಿರಕ್ಕೂ ಅಧಿಕ ಚಿತ್ರಗೀತೆಗಳನ್ನು ರಚಿಸಿದ್ದರು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅವರ ಅಗಲಿದರು.
‘ರಂಭೆ ನೀ ವಯ್ಯಾರದ ಗೊಂಬೆ’, ‘ಒಳಗೆ ಸೇರಿದರೆ ಗುಂಡು’ ಥರದ ಹಿಟ್ ಗೀತೆಗಳ ಸಾಹಿತಿ ಶ್ರೀರಂಗ ಇನ್ನಿಲ್ಲ
ಆರ್.ಎಸ್.ರಾಜಾರಾಮ್

ಕನ್ನಡ ಧಾರಾವಾಹಿ, ಸಿನಿಮಾ, ರಂಗಭೂಮಿಯಲ್ಲಿ ಕೆಲಸ ಮಾಡಿದ್ದ ನಟ ಆರ್.ಎಸ್.ರಾಜಾರಾಮ್ ಅವರು ಮೇ 10 ರಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ರಾಜಾರಾಮ್ ನಿಧನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಂತಾಪ ಸೂಚಿಸಿದ್ದರು.
ನಿತೀಶ್ ವೀರಾ

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ತಮಿಳು ನಟ ನಿತೀಶ್ ವೀರಾ ನಿಧನರಾದರು. ನಟ ನಿತೀಶ್ ವೀರಾಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಚೆನ್ನೈನ ಆಸ್ಪತ್ರೆಯಲ್ಲಿ ದಾಖಲಾಗಿ ನಿತೀಶ್ ವೀರಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿತೀಶ್ ವೀರಾ ಸಾವನ್ನಪ್ಪಿದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.
ಕೃಷ್ಣೇಗೌಡ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬಿ.ಎಂ. ಕೃಷ್ಣೇ ಗೌಡ ಅವರು ನಿಧನರಾದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು, ಅದರಿಂದ ಗುಣಮುಖರಾಗಿದ್ದರು. ಆದರೆ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾದರು.
ತಿಪಟೂರು ರಘು

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ನಿಧನರಾದರು. ಶ್ವಾಸಕೋಶ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಿಪಟೂರು ರಘು ಶಂಕರಮಠದಲ್ಲಿನ ತಮ್ಮ ನಿವಾಸದಲ್ಲಿ ವಿಧಿವಶರಾದರು. 80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದವರು ತಿಪಟೂರು ರಘು. ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ಗೆ ‘ಕಲ್ಲುವೀಣೆ ನುಡಿಯಿತು’, ‘ನಾಗ ಕಾಳ ಭೈರವ’, ‘ಬೆಂಕಿ ಬಿರುಗಾಳಿ’ ಅಂತಹ ಹಿಟ್ ಚಿತ್ರಗಳನ್ನು ತಿಪಟೂರು ರಘು ನಿರ್ದೇಶನ ಮಾಡಿದ್ದರು.
ಬಿ.ಜಯಾ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಜೂನ್ 3 ರಂದು ನಿಧನರಾದರು. ಸುಮಾರು 6 ದಶಕಗಳಿಗೂ ಅಧಿಕ ಸಮಯ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಜಯಾ ಗುರುತಿಸಿಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜಯಾ ಜನಪ್ರಿಯರಾಗಿದ್ದರು.
ಸುರೇಖಾ

ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡದ ಹಲವು ನಟರ ಜೊತೆಗೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಸುರೇಖಾ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ನೃತ್ಯ ಕಲಾವಿದೆಯೂ ಆಗಿದ್ದ ಸುರೇಖಾ ಅವರಿಗೆ ವಿವಾಹವಾಗಿರಲಿಲ್ಲ.
ಡಾ. ರಾಜ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಸುರೇಖಾ ಇನ್ನಿಲ್ಲ
ಸಂಚಾರಿ ವಿಜಯ್

ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಿಂದಾಗಿ ನಿಧನರಾದರು. ಅಪಘಾತ ಆದ ತಕ್ಷಣ ವಿಜಯ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆಪರೇಶನ್ ಕೂಡ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸಿರಲಿಲ್ಲ. ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿತ್ತು. ವಿಜಯ್‌ಗೆ 38 ವರ್ಷ ವಯಸ್ಸಾಗಿತ್ತು.
ದಿಲೀಪ್ ಕುಮಾರ್

ಬಾಲಿವುಡ್‌ನ ಜನಪ್ರಿಯ ನಟ ದಿಲೀಪ್ ಕುಮಾರ್ ನಿಧನರಾದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಜುಲೈ 7 ರಂದು ಕೊನೆಯುಸಿರೆಳೆದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.
‘ಅಭಿನಯ ಶಾರದೆ’ ಜಯಂತಿ

ಹಿರಿಯ ನಟಿ, ‘ಅಭಿನಯ ಶಾರದೆ’ ಜಯಂತಿ ಕೊನೆಯುಸಿರೆಳೆದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ (76) ಚಿರನಿದ್ರೆಗೆ ಜಾರಿದರು.
ಜಯಂತಿ ನಿಧನ: ‘ಅಭಿನಯ’ ನಿಲ್ಲಿಸಿದ ‘ಶಾರದೆ’ಗೆ ಕಂಬನಿ ಮಿಡಿದ ಕನ್ನಡ ಚಿತ್ರರಂಗ
ಸಿದ್ಧಾರ್ಥ್ ಶುಕ್ಲಾ

‘ಬಿಗ್ ಬಾಸ್ 13’ ವಿಜೇತ, ಕಿರುತೆರೆ ನಟ ಸಿದ್ದಾರ್ಥ್ ಶುಕ್ಲಾ ಅವರು 40ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 2 ರಂದು ಮುಂಬೈನಲ್ಲಿ ಹೃದಯಾಘಾತದಿಂದಾಗಿ ನಿಧನರಾದರು. ಸಿದ್ದಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನದಿಂದ ಇಡೀ ಬಾಲಿವುಡ್ ದಿಗ್ಭ್ರಮೆಗೊಂಡಿತ್ತು.
ಬಿ.ವಿಜಯ್ ಕುಮಾರ್

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಬಿ.ವಿಜಯ್ ಕುಮಾರ್ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿ.ವಿಜಯ್ ಕುಮಾರ್ ಆಗಸ್ಟ್ 15 ರಂದು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಡಾ.ವಿಷ್ಣುವರ್ಧನ್ ಅಭಿನಯದ ‘ಲಯನ್ ಜಗಪತಿ ರಾವ್’, ‘ಸಿಂಹಾದ್ರಿಯ ಸಿಂಹ’ ಸೇರಿದಂತೆ ಅನೇಕ ಚಿತ್ರಗಳನ್ನು ಬಿ.ವಿಜಯ್ ಕುಮಾರ್ ನಿರ್ಮಾಣ ಮಾಡಿದ್ದರು.
ಸಿ.ಜಯರಾಮ್

‘ಗಲಾಟೆ ಸಂಸಾರ’, ‘ಆಟೋರಾಜ’, ‘ನಾ ನಿನ್ನ ಬಿಡಲಾರೆ’ ಮುಂತಾದ ಮೆಗಾ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ. ಜಯರಾಮ್ ಅವರು ಸೆಪ್ಟೆಂಬರ್ 9 ರಂದು ಕೊನೆಯುಸಿರೆಳೆದರು.
ಉಮೇಶ್ ಹೆಗಡೆ

ಕನ್ನಡ ಧಾರಾವಾಹಿ, ಸಿನಿಮಾ ನಟ, ರಂಗಭೂಮಿ ಕಲಾವಿದ ಉಮೇಶ್ ಹೆಗಡೆ ಅವರು ಅಕ್ಟೋಬರ್ 10 ರಂದು ನಿಧನರಾದರು. ಉಮೇಶ್ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ‘ಬಹಳ ಚೆನ್ನಾಗಿದೆ’, ‘ಗೋಪಿ ಕಲ್ಯಾಣ’, ‘ಲವ್ ಟ್ರೇನಿಂಗ್’, ‘ಭರ್ಜರಿ ಗಂಡು’, ‘ನೀ ಬರೆದ ಕಾದಂಬರಿ’ ಮುಂತಾದ ಸಿನಿಮಾಗಳಲ್ಲಿ ಉಮೇಶ್ ಹೆಗಡೆ ನಟಿಸಿದ್ದರು. ಉಮೇಶ್ ಹೆಗಡೆ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು, ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.
ಕನ್ನಡ ಧಾರಾವಾಹಿ, ಸಿನಿಮಾ ನಟ ಉಮೇಶ್ ಹೆಗಡೆ ವಿಧಿವಶ; ಸಂತಾಪ ಸೂಚಿಸಿದ ಚಿತ್ರರಂಗ
ನೆಡುಮುಡಿ ವೇಣು

ಮೂರು ಬಾರಿ ರಾಷ್ಟ್ರ ಪ್ರಶಸ್ತಿ, 6 ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದ ಖ್ಯಾತ ತಮಿಳು, ಮಲಯಾಳಂ ನಟ ನೆಡುಮುಡಿ ವೇಣು ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ರಂಗಭೂಮಿ ಕಲಾವಿದರಾಗಿ ನೆಡುಮುಡಿ ವೇಣು ಅವರು ‘ಕವಾಲಂ ನಾರಾಯಣ ಪಣಿಕೆರ್’ ನಾಟಕದ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಅವರು ನಟಿಸಿದ ಸಿನಿಮಾಗಳ ಸಂಖ್ಯೆ 500ಕ್ಕೂ ಅಧಿಕ.
ಜಿ.ಕೆ.ಗೋವಿಂದ ರಾವ್

ನಟ, ಚಿಂತಕ ಜಿ.ಕೆ ಗೋವಿಂದ ರಾವ್ (86) ನಿಧನರಾದರು. ಹುಬ್ಬಳ್ಳಿಯ ಪುತ್ರಿಯ ನಿವಾಸದಲ್ಲಿ ಗೋವಿಂದ ರಾವ್ ನಿಧನರಾದರು. ಪುತ್ರಿ ಶ್ಯಾಮಲಾ ಗುರುಪ್ರಸಾದ್ ಮನೆಯಲ್ಲಿ ಉಳಿದುಕೊಂಡಿದ್ದ ಗೋವಿಂದ ರಾವ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಅರವಿಂದ್ ತ್ರಿವೇದಿ

ಹಿರಿಯ ನಟ ಅರವಿಂದ್ ತ್ರಿವೇದಿ ನಿಧನರಾದರು. ‘ರಾವಣ’ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಅರವಿಂದ್ ತ್ರಿವೇದಿ ಅಕ್ಟೋಬರ್ 6 ರಂದು ರಾತ್ರಿ ಮುಂಬೈನಲ್ಲಿ ವಿಧಿವಶರಾದರು. ನಟ ಅರವಿಂದ್ ತ್ರಿವೇದಿ ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅರವಿಂದ್ ತ್ರಿವೇದಿ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಶಂಕರ್ ರಾವ್

‘ಪಾಪ ಪಾಂಡು’, ‘ಪರ್ವ’, ‘ಸಿಲ್ಲಿ ಲಲ್ಲಿ’, ‘ಮಾಯಾಮೃಗ’ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಶಂಕರ್ ರಾವ್ ಅವರು ನಿಧನರಾದರು. ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅಭಿನಯದ ‘ಅಪ್ಪು’ ಸಿನಿಮಾದಲ್ಲಿಯೂ ಶಂಕರ್ ರಾವ್ ಬಣ್ಣ ಹಚ್ಚಿದ್ದರು.
ಸತ್ಯಜಿತ್

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸತ್ಯಜಿತ್ ವಿಧಿವಶರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಆಪ್ತಮಿತ್ರ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೇಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದರು.
ಪುನೀತ್ ರಾಜ್‌ಕುಮಾರ್

ತೀವ್ರ ಹೃದಯಸ್ತಂಭನದಿಂದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29 ರಂದು ವಿಧಿವಶರಾದರು. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಇಡೀ ಕರುನಾಡೇ ದಿಗ್ಭ್ರಮೆಗೊಂಡಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಲಕ್ಷಾಂತರ ಮಂದಿ ಪಡೆದರು. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ದೇವರ ಮೇಲೆ ಇದ್ದ ನಂಬಿಕೆ ಹೊರಟು ಹೋಯ್ತು: ಅಪ್ಪು ನಿಧನಕ್ಕೆ ಕಣ್ಣೀರಿಟ್ಟ ವಿನೋದ್ ರಾಜ್
ಶಿವರಾಂ

ಕನ್ನಡದ ಹಿರಿಯ ನಟ ಶಿವರಾಂ ಅವರು ಡಿಸೆಂಬರ್ 4ರಂದು ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಶಿವರಾಂ ಗುರುತಿಸಿಕೊಂಡಿದ್ದರು.
ಕೆ.ವಿ.ರಾಜು

80-90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಕೆ.ವಿ.ರಾಜು ಡಿಸೆಂಬರ್ 24 ರಂದು ಬೆಳಗ್ಗೆ ಇಹಲೋಕ ತ್ಯಜಿಸಿದರು. ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಕೆ.ವಿ.ರಾಜು ಕೊನೆಯುಸಿರೆಳೆದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ ಹಾಗೂ ಪುತ್ರಿಯನ್ನ ಕೆ.ವಿ.ರಾಜು ಅಗಲಿದರು.
ವಿಜಯ್ ಗಲಾನಿ

ಹಿಂದಿ ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ವಿಜಯ್ ಗಲಾನಿ ಡಿಸೆಂಬರ್ 29 ರಂದು ವಿಧಿವಶರಾದರು. ವಿಜಯ್ ಗಲಾನಿ ಲಂಡನ್‌ನಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ವಿಜಯ್ ಗಲಾನಿ ಕ್ಯಾನ್ಸರ್‌ನಿಂದ ಬಳುತ್ತಿದ್ದರು. ವಿಜಯ್ ಗಲಾನಿ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿಯಿತು.