
ಕೆನ್‌ಬೆರಾ, ಆಸ್ಟ್ರೇಲಿಯಾ: ದೇಶದಲ್ಲಿ ಕೊರೊನಾ ವೈರಸ್‌ನ ಓಮೈಕ್ರಾನ್ ತಳಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆಯಲು ನಿಗದಿಪಡಿಸಿರುವ ಕಾಯುವ ಅವಧಿಯನ್ನು ಕಡಿಮೆಗೊಳಿಸಿರುವುದಾಗಿ ಆಸ್ಟ್ರೇಲಿಯಾ ಸರ್ಕಾರ ಭಾನುವಾರ ತಿಳಿಸಿದೆ.
18 ವರ್ಷ ಮೇಲ್ಪಟ್ಟವರು ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡು ಆರು ತಿಂಗಳಾಗಿದ್ದರೆ, ಅಂಥವರಿಗೆ ಬೂಸ್ಟರ್ ಡೋಸ್ ನೀಡುವುದಾಗಿ ಈ ಮೊದಲು ಸರ್ಕಾರ ಪ್ರಕಟಿಸಿತ್ತು.
‘ಓಮೈಕ್ರಾನ್ ತಳಿಯ ಸೋಂಕಿನ ಪ್ರಕರಣಗಳ ಹೆಚ್ಚುತ್ತಿರುವ ಕಾರಣ, ಲಸಿಕೆಯ ಎರಡನೇ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಈಗ ಐದು ತಿಂಗಳಿಗೆ ಇಳಿಸಲಾಗಿದೆ’ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಹೇಳಿದ್ದಾರೆ.
‘ಎರಡನೇ ಡೋಸ್ ಪಡೆದ ಐದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ನಂತರ ಬೂಸ್ಟರ್ ಡೋಸ್ ಪಡೆದರೆ, ಕೊರೊನಾ ವೈರಸ್ ವಿರುದ್ಧ ಹೆಚ್ಚು ರಕ್ಷಣೆ ಸಿಗುತ್ತದೆ. ಸೋಂಕು ಪ್ರಸರಣವನ್ನು ತಡೆಯಲು ಕೂಡ ಸಹಾಯವಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.