Karnataka news paper

‘ಎಲ್ಲಾ ಪಕ್ಷಗಳು ಸಮಯಕ್ಕೆ ಸರಿಯಾಗಿ ವಿಧಾನಸಭೆ ಚುನಾವಣೆ ನಡೆಸಿ ಎನ್ನುತ್ತಿವೆ’: ಚುನಾವಣಾ ಆಯೋಗ


The New Indian Express

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿರುವುದರ ನಡುವೆಯೇ ಕೇಂದ್ರ ಚುನಾವಣಾ ಆಯೋಗವು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಮುಂದೂಡುವ ಸಾಧ್ಯತೆಗಳನ್ನು ಗುರುವಾರ ತಳ್ಳಿಹಾಕಿದೆ.

“ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಮ್ಮನ್ನು ಭೇಟಿ ಮಾಡಿದ್ದು, ಎಲ್ಲಾ ಕೋವಿಡ್-19 ಪ್ರೋಟೋಕಾಲ್ಗಳನ್ನು ಅನುಸರಿಸಿ ಸಮಯಕ್ಕೆ ಸರಿಯಾಗಿ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಹೇಳಿರುವುದಾಗಿ” ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ​

“ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಗಳನ್ನು ಅಳವಡಿಸಲಾಗುವುದು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 1 ಲಕ್ಷ ಮತಗಟ್ಟೆಗಳಲ್ಲಿ ಲೈವ್ ವೆಬ್‌ಕಾಸ್ಟಿಂಗ್ ಸೌಲಭ್ಯಗಳು ಲಭ್ಯವಿರುತ್ತವೆ. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ. 61 ರಷ್ಟು ಮತದಾನವಾಗಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ, ಮತದಾನದ ಪ್ರಮಾಣ ಶೇ. 59 ಆಗಿತ್ತು. ಜನರಲ್ಲಿ ಹೆಚ್ಚಿನ ರಾಜಕೀಯ ಅರಿವು ಇರುವ ಉತ್ತರ ಪ್ರದೇಶದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಏಕೆ ಕಡಿಮೆಯಾಗಿದೆ ಎಂಬುದು ಆತಂಕದ ವಿಷಯ” ಎಂದು ಅವರು ಹೇಳಿದ್ದಾರೆ.

‘ವಿಧಾನಸಭಾ ಚುನಾವಣೆಯ ಮತದಾನವು ಮತದಾನದ ದಿನಾಂಕದಂದು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಯಲಿದೆ’ ಎಂದು ಸುಶೀಲ್ ಚಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಒಂದೇ ದಿನದಲ್ಲಿ 180 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಕೋವಿಡ್ ಹೊಸ ರೂಪಾಂತರಿ ಸೋಂಕಿತರ ಒಟ್ಟು ಸಂಖ್ಯೆ 961ಕ್ಕೆ ಏರಿಕೆಯಾಗಿದೆ.



Read more