Karnataka news paper

ನಾನು ಪ್ರಧಾನಿಯನ್ನು ಅನುಸರಿಸುತ್ತೇನೆ, ಹಾಗಾಗಿ ಮಾಸ್ಕ್ ಧರಿಸೊಲ್ಲ!: ಸಂಜಯ್ ರಾವತ್



ಮುಂಬಯಿ: ಮಾಸ್ಕ ಧರಿಸದೆ ಕಾರ್ಯಕ್ರಮವೊಂದಕ್ಕೆ ಗುರುವಾರ ಹಾಜರಾಗುವ ಮೂಲಕ ಟೀಕೆಗೆ ಗುರಿಯಾಗಿದ್ದ ಶಿವಸೇನಾ ಸಂಸದ , ತಾವು ಪ್ರಧಾನಿ ಅವರ ಉದಾಹರಣೆಯನ್ನು ಪಾಲಿಸುತ್ತಿರುವುದಾಗಿ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು, ಕೋವಿಡ್ ಹರಡುವುದನ್ನು ತಡೆಯಲು ಧರಿಸಬೇಕೆಂಬ ನಿಯಮ ಇದ್ದರೂ ಅದನ್ನು ಪಾಲಿಸದ ಬಗ್ಗೆ ಪ್ರಶ್ನಿಸಲಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾವತ್, ‘ಮಾಸ್ಕ್ ಧರಿಸುವಂತೆ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡುತ್ತಾರೆ. ಆದರೆ ಅವರೇ ಸ್ವತಃ ಮಾಸ್ಕ್ ಧರಿಸುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಾಸ್ಕ್ ಧರಿಸುತ್ತಾರೆ. ಆದರೆ ಮೋದಿ ದೇಶದ ನಾಯಕರು. ನಾನು ಪ್ರಧಾನಿ ಅವರನ್ನು ಅನುಸರಿಸುತ್ತೇನೆ. ಹೀಗಾಗಿ ನಾನು ಮಾಸ್ಕ್ ಧರಿಸುವುದಿಲ್ಲ. ಹಾಗೆಯೇ ಜನರೂ ಮಾಸ್ಕ್ ಧರಿಸುವುದಿಲ್ಲ’ ಎಂದಿದ್ದಾರೆ.

ಸಾರ್ಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದೂ ಅವರು ಈ ವೇಳೆ ಹೇಳಿದ್ದಾರೆ. ‘ಪ್ರಸ್ತುತ ನಿರ್ಬಂಧ ಆದೇಶಗಳು ಜಾರಿಯಲ್ಲಿವೆ. ಆದರೆ, ಆರ್ಥಿಕ ಬೆಳವಣಿಗೆಯನ್ನು ಸ್ಥಗಿತಗೊಳಿಸುವಂತಹ ದಿನವಿಡೀ ನಿರ್ಬಂಧಗಳು ಜಾರಿಗೆ ಬರಬಾರದು ಎಂದು ನಾನು ಆಶಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಅವರ ಪತಿ ಸದಾನಂದ ಸುಳೆ, ಎನ್‌ಸಿಪಿ ಶಾಸಕ ಪ್ರಜಕ್ತ್ ತಾನ್ಪುರೆ, ಸಚಿವೆ ವರ್ಷಾ ಗಾಯಕ್‌ವಾಡ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದ್ದಾರೆ.



Read more