Karnataka news paper

ನಾನು, ಮನಮೋಹನ್ ಸಿಂಗ್ ಅಂದಿನ ಸಿಎಂ ಮೋದಿ ವಿರುದ್ಧ ಸೇಡಿನ ರಾಜಕಾರಣ ವಿರೋಧಿಸಿದ್ದೆವು: ಶರದ್ ಪವಾರ್


PTI

ಪುಣೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಬಾರದು ಎಂದು ನಾನು ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದೆವು ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಹೇಳಿದ್ದಾರೆ.

ಮರಾಠಿ ದೈನಿಕ ‘ಲೋಕಸತ್ತಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪವಾರ್, ಮನಮೋಹನ್ ಸಿಂಗ್ ಆಡಳಿತದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಹಿಂದಿನ ಯುಪಿಎ ಸರ್ಕಾರದಲ್ಲಿ ತಮ್ಮನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಚಿವರು ಇರಲಿಲ್ಲ ಎಂದಿದ್ದಾರೆ.

ಇದನ್ನು ಓದಿ: ಬಿಜೆಪಿ ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಶರದ್ ಪವಾರ್ ಹೇಳಿಕೆ​

ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ(2004-2014) ಕೃಷಿ ಸಚಿವರಾಗಿದ್ದರು.

ಕೇಂದ್ರೀಯ ತನಿಖಾ ಸಂಸ್ಥೆಗಳು ಮತ್ತು ಆಗಿನ ಕೇಂದ್ರ ಸರ್ಕಾರ ಮೋದಿಯನ್ನು ಹಿಂಬಾಲಿಸುತ್ತಿರುವ ಸಮಯದಲ್ಲಿ, ಮೋದಿ ಸಿಎಂ ಆಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ತಾವು ಮತ್ತು ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾಗಿ ಪ್ರಶ್ನೆಯೊಂದಕ್ಕೆ ಪವಾರ್ ಉತ್ತರಿಸಿದ್ದಾರೆ.

“ಮೋದಿಜಿ ಗುಜರಾತ್ ಸಿಎಂ ಆಗಿದ್ದಾಗ ನಾನು ಕೇಂದ್ರದಲ್ಲಿದ್ದೆ. ಪ್ರಧಾನಿಯವರು ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯುತ್ತಿದ್ದಾಗ ಮೋದಿಜಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳ ಗುಂಪನ್ನು ಮುನ್ನಡೆಸುತ್ತಿದ್ದರು ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು” ಎಂದರು.



Read more