The New Indian Express
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೊಂದಿಗೆ ಮೂರನೇ ಸುತ್ತಿನ ಸಭೆ ನಡೆಸಿದ ನಂತರವೂ ಕಸದ ಗುತ್ತಿಗೆದಾರರು ಜನವರಿ 1 ರಿಂದ ಮುಷ್ಕರ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ.
ಈ ಕುರಿತು ಕಸ ಗುತ್ತಿಗೆದಾರರ ಸಂಘದ ಮುಖ್ಯಸ್ಥ ಎಸ್.ಎನ್.ಬಾಲಸುಬ್ರಹ್ಮಣ್ಯ ಮಾತನಾಡಿ, ‘ಸಭೆಯಲ್ಲಿ ಮುಖ್ಯ ಆಯುಕ್ತರು ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಹಣಕಾಸಿನ ವಿಚಾರದಲ್ಲಿ ಮಹಾನಗರ ಪಾಲಿಕೆಯಿಂದ ಲೋಪ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ಸಮಸ್ಯೆಯನ್ನು ಪರಿಹರಿಸಲು ಸಮಯ ಕೇಳಿದರು, ಆದರೆ ಜನವರಿ 1 ರಿಂದ ಜಿಎಸ್‌ಟಿ ಜಾರಿಗೆ ಬರಲಿದೆ ಮತ್ತು ಅದು ನಮಗೂ ಅನ್ವಯಿಸುತ್ತದೆ ಎಂದು ನಾವು ಸೂಚಿಸಿದ್ದೇವೆ. ಸಮಸ್ಯೆ ಬಗೆಹರಿಯದಿದ್ದರೆ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದೇವೆ ಎಂದರು.
ಅವರು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರೊಂದಿಗೆ ಸಭೆ ನಡೆಸಿದರಾದರೂ ಯಾವುದೇ ರೀತಿಯ ನಿರ್ಣಯ ಮೂಡಿ ಬರಲಿಲ್ಲ. ಕಳೆದ ಕೆಲವು ತಿಂಗಳುಗಳಿಂದ, ಸೇವಾ ತೆರಿಗೆ ಸಮಸ್ಯೆಯಿಂದಾಗಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗ ನಾವು ಯಾವುದೇ ಸಮಸ್ಯೆಗಳನ್ನು ಎದುರಿಸಲು ಬಯಸುವುದಿಲ್ಲ. ಬಿಬಿಎಂಪಿ ಸಮಸ್ಯೆ ಅರ್ಥ ಮಾಡಿಕೊಂಡಿದ್ದರೆ ಅದನ್ನು ಸರಿಪಡಿಸಲು ಯಾವುದೇ ತೊಂದರೆಯಾಗಬಾರದು ಎಂದರು.
ಇದನ್ನೂ ಓದಿ: ಪ್ರತಿಭಟನೆಗೆ ಮುಂದಾದ ಗುತ್ತಿಗೆದಾರರು: ಡಿ.31ರಿಂದ ಸಿಲಿಕಾನ್ ಸಿಟಿಯಲ್ಲಿ ತಲೆದೋರಲಿದೆ ಕಸದ ಸಮಸ್ಯೆ!
ಅಂತೆಯೇ ನಾವು ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದೇವೆ. ಬಿಬಿಎಂಪಿ ನಿರ್ಧಾರ ಕೈಗೊಳ್ಳಲು ಎರಡು ದಿನಗಳ ಕಾಲಾವಕಾಶವಿದೆ ಎಂದು ಅವರು ಹೇಳಿದರು.
ಗುತ್ತಿಗೆದಾರರ ಸಂಘವು ಡಿ.24ರಂದು ಬಿಬಿಎಂಪಿಗೆ ಜ್ಞಾಪನಾ ಪತ್ರ ಸಲ್ಲಿಸಿದ್ದು, ಡಿಸೆಂಬರ್ 28ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ಅದು ಅನಿಶ್ಚಿತವಾದ ಕಾರಣ ಡಿ.29ರಂದು ಮತ್ತೊಂದು ಸಭೆ ನಡೆಸಲಾಗಿದೆ. ಗುತ್ತಿಗೆದಾರರ ಕಲ್ಯಾಣಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.