Source : UNI
ಮುಂಬೈ: ಒಮಿಕ್ರಾನ್ ಭೀತಿಯಿಂದಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಪ್ರವಾಸವನ್ನು ಒಂದು ವಾರಗಳ ಕಾಲ ಮುಂದೂಡುವ ಚಿಂತನೆಯಲ್ಲಿ ಬಿಸಿಸಿಐ ಇದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಡಿಸೆಂಬರ್ 9 ರಂದು ಭಾರತ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿದ್ದು, 3 ಟೆಸ್ಟ್, 3 ಒಡಿಐ ಮತ್ತು 4 ಟಿ-20 ಪಂದ್ಯಗಳನ್ನು ಆಡಲಿದೆ.
ಈ ಮದ್ಯೆ, ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿ ಕಂಡುಬಂದಿರುವ ಹೊಸ ರೂಪಾಂತರಿಯಿಂದಾಗಿ ವಿಶ್ವದ 24 ದೇಶಗಳಿಗೆ ವ್ಯಾಪಿಸಿದೆ. ಅನೇಕ ದೇಶಗಳು ಆಫ್ರಿಕನ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಿವೆ.
ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ!
ಆಟಗಾರರ ಸುರಕ್ಷತೆ ಮತ್ತು ಆರೋಗ್ಯ ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದಿರುವ ಬಿಸಿಸಿಐ, ಪ್ರಸ್ತುತ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಅಲ್ಲದೆ, ಈ ಬಗ್ಗೆ ನಾವು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೊಂದಿಗೂ ನಿರಂತರ ಸಂಪರ್ಕದಲ್ಲಿದೆ ಅಂತಾ ಬಿಸಿಸಿಐ ಹೇಳಿಕೆ ಹೊರತಾಗ್ಯೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡದ ಆಯ್ಕೆಯನ್ನೂ ಸಹ ಬಿಸಿಸಿಐ ತಡೆಹಿಡಿದಿದೆ.
ದಕ್ಷಿಣ ಆಫ್ರಿಕಾದ ಪ್ರವಾಸದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?
“ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಚರ್ಚೆ ನಡೆಯುತ್ತಿದೆ. ಆದರೆ ಶುಕ್ರವಾರದಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಬಗ್ಗೆ ತಂಡ ಹೆಚ್ಚು ಗಮನಹರಿಸಿದೆ. ಇನ್ನು ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಈ ಕುರಿತು ಬಿಸಿಸಿಐ ಜತೆ ಮಾತುಕತೆ ನಡೆಸುತ್ತಿದ್ದೇವೆ. ಒಂದು ಅಥವಾ ಎರಡು ದಿನಗಳಲ್ಲಿ ಅಥವಾ ಶೀಘ್ರದಲ್ಲೇ ಎಲ್ಲವೂ ಅಂತಿಮ ನಿರ್ಧಾರವಾಗಲಿದೆ ಅಂತಾ ತಿಳಿಸಿದರು.
“ಬಿಸಿಸಿಐ ಸರ್ಕಾರದ ಜೊತೆ ಮಾತನಾಡಬೇಕು” ಎಂದಿದ್ದ ಕೇಂದ್ರ ಕ್ರೀಡಾ ಸಚಿವ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಈ ಮೊದಲು ನೀಡಿದ್ದ ಹೇಳಿಕೆ ಪ್ರಕಾರ, ಬಿಸಿಸಿಐ ತಂಡವನ್ನು ಕಳುಹಿಸುವ ಮೊದಲು ಸರ್ಕಾರದೊಂದಿಗೆ ಮಾತನಾಡಬೇಕು. ಬಿಸಿಸಿಐ ಮಾತ್ರವಲ್ಲ, ಎಲ್ಲಾ ಮಂಡಳಿಗಳು ತಮ್ಮ ತಂಡವನ್ನು ಅಪಾಯವಿರುವ ದೇಶಕ್ಕೆ ಕಳುಹಿಸುವ ಮೊದಲು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಟೀಮ್ ಇಂಡಿಯಾವನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸುವ ಮೊದಲು ಆಟಗಾರರ ಆರೋಗ್ಯದ ದೃಷ್ಟಿಯಿಂದ ಸರ್ಕಾರದೊಂದಿಗೆ ಚರ್ಚಿಸಬೇಕಾಗಿದೆ.
3 ಟೆಸ್ಟ್ ಪಂದ್ಯಗಳ ಬದಲಿಗೆ 2 ಟೆಸ್ಟ್ ಮಾತ್ರ?
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಆದ್ರೆ, ಓಮಿಕ್ರಾನ್ ಭೀತಿಯಿಂದಾಗಿ 3 ಟೆಸ್ಟ್ ಪಂದ್ಯಗಳ ಬದಲಾಗಿ 2 ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ ಅಂತಾ ಮೂಲಗಳು ತಿಳಿಸಿವೆ. ಇದರಿಂದ ಭಾರತದಲ್ಲೇ ಹೆಚ್ಚಿನ ಸಮಯ ಸಿಗೋದ್ರಿಂದ ಹೊಸ ರೂಪಾಂತರಿಯಿಂದಾಗುವ ಪರಿಣಾಮಗಳ ಬಗ್ಗೆ ಚರ್ಚಿಸಲು ಹೆಚ್ಚಿನ ಸಮಯಾವಕಾಶ ಬಿಸಿಸಿಐಗೆ ದೊರೆಯಲಿದೆ.
ಹೊಸ ರೂಪಾಂತರದ ದೃಷ್ಟಿಯಿಂದ, ಆಟಗಾರರು ಕಟ್ಟುನಿಟ್ಟಾದ ಬಯೋಬಬಲ್‌ನಲ್ಲಿ ಇರುತ್ತಾರೆ ಎಂದು BCCI ಮತ್ತು CSA ಹೇಳಿಕೆ ನೀಡಿವೆ. ಇದಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಆಟಗಾರರ ವಿಮಾನ ಪ್ರಯಾಣವೂ ತುಂಬಾ ಕಡಿಮೆ ಅವಧಿಯದ್ದಾಗಿರುತ್ತದೆ. ಇದರಿಂದ ಹೊರಗಿನವ್ರ ಜೊತೆ ಹೆಚ್ಚು ಸಂಪರ್ಕ ಬೆಳಸಲು ಸಾಧ್ಯವಾಗುವುದಿಲ್ಲ ಅನ್ನೋ ಮಾತುಗಳನ್ನು ಎರಡೂ ತಂಡದ ಬೋರ್ಡ್ ಗಳು ಚರ್ಚಿಸಿವೆ.