Karnataka news paper

ಬಂಕಾಪುರ ಪುರಸಭೆ ‘ಕೈ’ ತೆಕ್ಕೆಗೆ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗ 


ಹಾವೇರಿ: ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ‘ಕೈ’ ವಶವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ–ಸವಣೂರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ‘ಬಂಕಾಪುರ ಪುರಸಭೆ’ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 14, ಬಿಜೆಪಿ 7 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನ ಗಳಿಸಿದ್ದಾರೆ. 

2014ರಿಂದ 2019ರವರೆಗಿನ ಅವಧಿಯಲ್ಲಿ ಕಾಂಗ್ರೆಸ್ 14, ಬಿಜೆಪಿ 8, ಪಕ್ಷೇತರ ಅಭ್ಯರ್ಥಿಗೆ 1 ಸ್ಥಾನ ದೊರಕಿತ್ತು. 
ಹೀಗಾಗಿ ಮೂರೂವರೆ ವರ್ಷ ಕಾಂಗ್ರೆಸ್ ಹಾಗೂ ಒಂದೂವರೆ ವರ್ಷ ಬಿಜೆಪಿ ಆಡಳಿತ ನಡೆಸಿತ್ತು. 

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಅಭಿವೃದ್ಧಿ ಕಾರ್ಯಗಳಿಗಾಗಿ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ಸ್ಪಷ್ಟ ಬಹುಮತ ದೊರೆತಿದ್ದು, ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯಲಿದೆ’ ಎಂದು ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ವೆಂಕೋಜಿ ಸಂತಸ ವ್ಯಕ್ತಪಡಿಸಿದರು. 

ಗುತ್ತಲ ಪಟ್ಟಣ ಪಂಚಾಯಿತಿ ‘ಕೈ’ ವಶ
ಹಾವೇರಿ ತಾಲ್ಲೂಕಿನ ಗುತ್ತಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದ್ದು, ಬಿಜೆಪಿಗೆ ನಿರಾಸೆಯಾಗಿದೆ. ಒಟ್ಟು 18 ಸ್ಥಾನಗಳಲ್ಲಿ ಕಾಂಗ್ರೆಸ್‌ 11, ಬಿಜೆಪಿ 6 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನವನ್ನು ಗೆದ್ದುಕೊಂಡಿದ್ದಾರೆ. 

2014ರಿಂದ 2019ರವರೆಗಿನ ಅವಧಿಯಲ್ಲಿ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಆಡಳಿತವಿತ್ತು. ಈ ಬಾರಿಯ ಚುನಾವಣೆಯಲ್ಲೂ ಸ್ಪಷ್ಟ ಬಹುಮತ ಗಳಿಸುವ ಮೂಲಕ ಮತ್ತೆ ಪಟ್ಟಣ ಪಂಚಾಯಿತಿ ‘ಕೈ’ ವಶವಾಗಿದೆ. 

ಹಾನಗಲ್‌ ಪುರಸಭೆ: ಪಕ್ಷೇತರ ಅಭ್ಯರ್ಥಿ ಗೆಲುವು
ಹಾನಗಲ್‌ ಪುರಸಭೆಯ 19ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಯನ್ನು ಮಣಿಸಿ, ಪಕ್ಷೇತರ ಅಭ್ಯರ್ಥಿ ಜಮೀರ್ ಕೆ. ಶೇಖ್‌ ಜಯ ಗಳಿಸಿದ್ದಾರೆ. 

19ನೇ ವಾರ್ಡ್‌ ಕಾಂಗ್ರೆಸ್‌ ಸದಸ್ಯರಾಗಿದ್ದ ನಜೀರ್‌ ಅಹಮದ್‌ ಸವಣೂರ ಇವರು ರಾಜೀನಾಮೆ ನೀಡಿ, ಹಾನಗಲ್‌ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದಾರೆ. ಈ ಕಾರಣದಿಂದ ತೆರವಾದ 19ನೇ ವಾರ್ಡ್‌ಗೆ ಚುನಾವಣೆ ನಡೆದಿತ್ತು. ಒಟ್ಟು 23 ಸ್ಥಾನಗಳಲ್ಲಿ ಪ್ರಸ್ತುತ ಕಾಂಗ್ರೆಸ್‌ 18, ಬಿಜೆಪಿ 4, ಹಾಗೂ ಪಕ್ಷೇತರ 1 ಸದಸ್ಯರ ಬಲಾಬಲವಿದೆ.



Read more from source