Karnataka news paper

ನಿಯಂತ್ರಣ ಕ್ರಮ ಕಠಿಣಗೊಳಿಸಿ: ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ಕೇಂದ್ರ ಪತ್ರ


ಹೈಲೈಟ್ಸ್‌:

  • ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಎಂಟು ರಾಜ್ಯಗಳಿಗೆ ಕೇಂದ್ರ ಸರ್ಕಾರದ ಪತ್ರ
  • ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು, ಲಸಿಕೆಗಳನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚನೆ
  • ಪರೀಕ್ಷೆ ಹೆಚ್ಚಳ, ಕೋವಿಡ್ ಶಿಷ್ಟಾಚಾರಗಳ ಪಾಲನೆಗೆ ಒತ್ತು ನೀಡುವಂತೆ ಸಲಹೆ
  • ದೇಶಾದ್ಯಂತ 961 ಓಮಿಕ್ರಾನ್ ಪ್ರಕರಣಗಳು ಪತ್ತೆ, 320 ಸೋಂಕಿತರು ಗುಣಮುಖ

ಹೊಸದಿಲ್ಲಿ: ಬೆಂಗಳೂರು ಸೇರಿದಂತೆ 14 ನಗರಗಳಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಕೂಡಲೇ ಕ್ರಮಗಳನ್ನು ಕೈಗೊಳ್ಳುವಂತೆ ಎಂಟು ರಾಜ್ಯಗಳಿಗೆ ಪತ್ರ ಬರೆದಿದೆ. ಅಧಿಕ ಸೋಂಕುಕಾರಕ ಓಮಿಕ್ರಾನ್ ತಳಿ ವೈರಸ್ ಪ್ರಕರಣಗಳು ಕೂಡ ದೊಡ್ಡ ನಗರಗಳಲ್ಲಿ ಬಹಳ ವೇಗವಾಗಿ ಹೆಚ್ಚುತ್ತಿದೆ. ಹೀಗಾಗಿ ಇದರ ಮೇಲೆ ತಕ್ಷಣದ ಗಮನ ಹರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ದಿಲ್ಲಿ ಮತ್ತು ಮುಂಬಯಿ ನಗರಗಳಲ್ಲಿ ಓಮಿಕ್ರಾನ್ ಹಾಗೂ ಇತರೆ ತಳಿಯ ಕೋವಿಡ್ 19 ಪ್ರಕರಣಗಳಲ್ಲಿ ಗರಿಷ್ಠ ಮಟ್ಟದ ಏರಿಕೆಯಾಗಿದೆ. ಬೆಂಗಳೂರು, ಚೆನ್ನೈ, ಕೋಲ್ಕತಾ, ಗುರ್‌ಗಾಂವ್ ಮತ್ತು ಅಹಮದಾಬಾದ್‌ಗಳಲ್ಲಿಯೂ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಾಣುತ್ತಿದೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಳವಾಗದಂತೆ ನೋಡಿಕೊಳ್ಳಲು ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದೆ.
Omicron: ಬರಲಿದೆ ಕೋವಿಡ್ ‘ಸುನಾಮಿ’, ನೆಲಕಚ್ಚಲಿದೆ ಆರೋಗ್ಯ ವ್ಯವಸ್ಥೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಕರ್ನಾಟಕ, ಹರ್ಯಾಣ, ದಿಲ್ಲಿ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರಿಂದ ಮತ್ತು ಅವುಗಳ ಸಂಖ್ಯೆ ದ್ವಿಗುಣಗೊಳ್ಳುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಪರೀಕ್ಷೆಗಳನ್ನು ಹೆಚ್ಚಿಸುವುದು, ಆಸ್ಪತ್ರೆ ಮಟ್ಟದ ಸಿದ್ಧತೆಗಳನ್ನು ಬಲಪಡಿಸುವುದು, ಲಸಿಕೆಯ ಕಾರ್ಯಕ್ರಮವನ್ನು ತ್ವರಿತಗೊಳಿಸುವುದು ಮುಂತಾದ ಕ್ರಮಗಳಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ.

ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆ (ಆರ್‌ಎಟಿ) ನಡುವಿನ ಅನುಪಾತವನ್ನು ನಿಭಾಯಿಸುವುದರೊಂದಿಗೆ ಪರೀಕ್ಷೆಯನ್ನು ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವುದು ಮತ್ತು ಪಾಸಿಟಿವ್ ಪ್ರಕರಣಗಳ ಸಂಪರ್ಕಿತರನ್ನು ಕ್ವಾರೆಂಟೈನ್ ಮಾಡುವುದು, ಅವರ ಪರೀಕ್ಷೆ ಹಾಗೂ ವಿಚಾರಣೆಗೆ ಗಮನ ನೀಡಬೇಕು ಎಂದೂ ಸಲಹೆ ನೀಡಿದೆ.
ಸೋಂಕಿತರ ಸಂಖ್ಯೆಯನ್ನಷ್ಟೇ ನೋಡಬೇಡಿ: ಕೋವಿಡ್ ನಿರ್ಬಂಧದ ವಿರುದ್ಧ ರಾಜ್ಯಗಳಿಗೆ ವರ್ತಕರ ಮನವಿ
ದೇಶದಲ್ಲಿ ಗುರುವಾರ ಬೆಳಗಿನ ವೇಳೆಗೆ ಕಳೆದ 24 ಗಂಟೆಗಳಲ್ಲಿ 13,154 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 268 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಹಲವು ದಿನಗಳಿಂದ 10 ಸಾವಿರಕ್ಕಿಂತ ಕಡಿಮೆ ಪ್ರಕರಣಗಳನ್ನು ಹೊಂದಿದ್ದ ದೇಶದಲ್ಲಿ ಇದು ಎಚ್ಚರಿಕೆಯ ಏರಿಕೆಯಾಗಿದೆ. ದೇಶಾದ್ಯಂತ 961 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 320 ಸೋಂಕಿತರು ಗುಣಮುಖರಾಗಿದ್ದಾರೆ.



Read more