Karnataka news paper

ಬ್ಯಾಂಕ್‌ ಠೇವಣಿ ಹಣಕ್ಕೆ ವಿಮೆ ಭದ್ರತೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಭಯ


ಹೈಲೈಟ್ಸ್‌:

  • ಮಧ್ಯಮ ವರ್ಗದವರ ಹಣ ಸುರಕ್ಷಿತ
  • ವಿಮೆಯ ಮೊತ್ತ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ
  • ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್

ದಾವಣಗೆರೆ: ಬ್ಯಾಂಕ್‌ಗಳ ನಿಜವಾದ ಆಸ್ತಿಯಾಗಿರುವ ಠೇವಣಿದಾರರು ಬ್ಯಾಂಕುಗಳಲ್ಲಿ ಇರಿಸಿರುವ ಠೇವಣಿ ಹಣಕ್ಕೆ ಸೂಕ್ತ ಭದ್ರತೆ ಒದಗಿಸಲು ಕೇಂದ್ರ ಸರಕಾರ ಠೇವಣಿ ವಿಮೆಯ ಮೊತ್ತವನ್ನು 5 ಲಕ್ಷ ರೂ. ಗೆ ಹೆಚ್ಚಿಸಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ – ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

ದಾವಣಗೆರೆ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚ್ಯುವಲ್‌ ವೇದಿಕೆ ಮೂಲಕ ನಡೆಸಿದ ‘ಡೆಪಾಸಿಟ್‌ ಇನ್ಸೂರೆನ್ಸ್ ಅಂಡ್‌ ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಷನ್‌ (ತಿದ್ದುಪಡಿ) ಕಾಯಿದೆ 2021’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಠೇವಣಿದಾರರ ಹಣದ ಸುರಕ್ಷತೆಗಾಗಿ 1993ರಲ್ಲಿ ವಿಮೆ ಯೋಜನೆ ಜಾರಿಗೆ ತಂದು ಒಂದು ಲಕ್ಷ ರೂ.ವರೆಗೆ ವಿಮಾ ಸುರಕ್ಷತೆ ಒದಗಿಸಲಾಗಿತ್ತು. 2020ರಲ್ಲಿ ವಿಮಾ ಭದ್ರತೆ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರಕಾರ, ವಿಮಾ ಮೊತ್ತವನ್ನು 5 ಲಕ್ಷ ರೂ.ವರೆಗೆ ವಿಸ್ತರಿಸಿದೆ. ಇದರಿಂದ ಮಧ್ಯಮ ವರ್ಗದ ಸಣ್ಣ ಠೇವಣಿದಾರರ ಹಣಕ್ಕೆ ಸಂಪೂರ್ಣ ಭದ್ರತೆ ಸಿಕ್ಕಂತಾಗಿದೆ ಎಂದರು.

ಈ ಮೊದಲು ಬ್ಯಾಂಕುಗಳಲ್ಲಿ ಗ್ರಾಹಕರು ಡೆಪಾಸಿಟ್‌ ಇರಿಸುವ ಹಣಕ್ಕೆ ಹೆಚ್ಚಿನ ಭದ್ರತೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ ದಿವಾಳಿಯಾದರೆ ಗ್ರಾಹಕರು ಕಷ್ಟಪಟ್ಟು ಗಳಿಸಿ ಉಳಿಸಿದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಬ್ಯಾಂಕ್‌ಗಳ ಪ್ರಗತಿಯಲ್ಲಿ ಠೇವಣಿದಾರರು ಮತ್ತು ಅವರು ಇರಿಸುವ ಹಣದ ಪ್ರಾಮುಖ್ಯತೆ ಅರಿತ ಕೇಂದ್ರ ಸರಕಾರ, ಠೇವಣಿ ವಿಮೆ ಮೊತ್ತವನ್ನು ಹೆಚ್ಚಿಸಿದೆ. ಇದರಿಂದಾಗಿ ಒಂದೊಮ್ಮೆ ಬ್ಯಾಂಕ್‌ ದಿವಾಳಿಯಾಗಿ ಬಾಗಿಲು ಮುಚ್ಚಿದರೆ ಗ್ರಾಹಕರ ಠೇವಣಿ ಹಣವನ್ನು ಕೇಂದ್ರ ಸರಕಾರವೇ ಭರಿಸುತ್ತದೆ ಎಂದು ಮಾಹಿತಿ ನೀಡಿದರು.

ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ನ 12,014 ಠೇವಣಿದಾರರಿಗೆ ₹401 ಕೋಟಿ ವಿಮಾ ಮೊತ್ತ ಸಂದಾಯ!
‘ಕೇಂದ್ರ ಸರಕಾರದ ಅಧೀನದ ಬ್ಯಾಂಕುಗಳು, ಖಾಸಗಿ ಸೇರಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಬ್ಯಾಂಕುಗಳು ಠೇವಣಿ ವಿಮೆ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಹಣ ಡೆಪಾಸಿಟ್‌ ಇರಿಸುವ ಗ್ರಾಹಕರಿಗೆ ವಿಮೆ ಪರಿಹಾರ ಸಿಗಲಿದೆ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಠೇವಣಿದಾರರಿಗೆ ಪರಿಹಾರ: ದಾವಣಗೆರೆಯ ಮಿಲ್ಲತ್‌ ಬ್ಯಾಂಕ್‌ ಆರ್ಥಿಕ ನಷ್ಟ ಅನುಭವಿಸಿದ ಕಾರಣ, ಅಲ್ಲಿ ಠೇವಣಿ ಇರಿಸಿದ್ದ ನೂರಾರು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಠೇವಣಿ ವಿಮೆ ಯೋಜನೆಯ ಮೂಲಕ ಬ್ಯಾಂಕ್‌ನ ಠೇವಣಿದಾರರಿಗೆ 3 ಕೋಟಿ ರೂ. ವಿಮೆ ಪರಿಹಾರ ಬಿಡುಗಡೆಯಾಗಿದ್ದು, ಈ ಹಣವನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಇನ್ನು 10 ಕೋಟಿ ರೂ. ವಿಮೆ ಪರಿಹಾರ ಬರಬೇಕಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು. ಇದೇ ವೇಳೆ ಮಿಲ್ಲತ್‌ ಬ್ಯಾಂಕ್‌ನ ಠೇವಣಿದಾರರಿಗೆ ವಿಮಾ ಪರಿಹಾರದ ಚೆಕ್‌ನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು.

ಡಿ.11 ಮತ್ತು 12ರಂದು ಈ ಸಮಯದಲ್ಲಿ ಎಸ್‌ಬಿಐ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ ಸ್ಥಗಿತ!
ಮಿಲ್ಲತ್‌ ಬ್ಯಾಂಕ್‌ ದಿವಾಳಿ: ಸಂಸದ ಜಿ. ಎಂ. ಸಿದ್ದೇಶ್ವರ್‌ ಮಾತನಾಡಿ, ಮಧ್ಯಮ ವರ್ಗದ ಜನತೆ ಮಕ್ಕಳ ಮದುವೆ, ಸಣ್ಣ ಪುಟ್ಟ ಕಾರ್ಯಕ್ರಮಗಳು, ಮನೆ ನಿರ್ಮಾಣ, ಹೆಚ್ಚುವರಿ ಕೊಠಡಿ ಕಟ್ಟುವುದು ಸೇರಿ ಹಲವಾರು ಉದ್ದೇಶಗಳ ಬಳಕೆಗಾಗಿ, ತಾವು ದುಡಿದು ಉಳಿತಾಯ ಮಾಡಿದ ಹಣವನ್ನು ನಾನಾ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುತ್ತಾರೆ. ಆದರೆ, ಬ್ಯಾಂಕುಗಳು ದಿವಾಳಿ ಹಂತ ತಲುಪಿದಾಗ ಇಂತಹ ಠೇವಣಿದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ದಾವಣಗೆರೆಯ ಮಿಲ್ಲತ್‌ ಬ್ಯಾಂಕ್‌ ದಿವಾಳಿಯಾಗಿರುವ ಕಾರಣ ಅಲ್ಲಿ ಠೇವಣಿ ಇರಿಸಿದ್ದ 643 ಗ್ರಾಹಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಅವರಿಗೆಲ್ಲಾ 90 ದಿನದೊಳಗೆ ಹಣ ಹಿಂದಿರುಗಿಸುವ ಹೊಣೆಯನ್ನು ಕೇಂದ್ರ ಸರಕಾರ ಹೊತ್ತಿದೆ ಎಂದು ಹೇಳಿದರು.

ಕೆನರಾ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ರಾಮನಾಯಕ್‌, ಸಹಾಯಕ ಮಹಾ ಪ್ರಬಂಧಕ ಎಚ್‌.ರಘುರಾಜ್‌, ಲೀಡ್‌ ಬ್ಯಾಂಕ್‌ ಪ್ರಬಂಧಕ ಸುಶ್ರುತ್‌ ಶಾಸ್ತ್ರಿ, ಜಿಪಂ ಸಿಇಒ ವಿಜಯ ಮಹಾಂತೇಶ್‌ ದಾನಮ್ಮನವರ್‌, ಎಸ್‌ಬಿಐ ಜಿಎಂ ರವಿ ರಾಜನ್‌, ಎಡಿಸಿ ಸದಾಶಿವ ಪ್ರಭು ಮತ್ತಿತರರು ಇದ್ದರು.

‘ಬ್ಯಾಂಕ್‌ ಠೇವಣಿ ವಿಮೆ’ ಬಗ್ಗೆ ಇಂದು (ಡಿ.12) ಮಧ್ಯಾಹ್ನ 12ಕ್ಕೆ ಪ್ರಧಾನಿ ಮೋದಿ ಮಾತು!



Read more…