Karnataka news paper

ಸೆಂಚೂರಿಯನ್‌ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಜಸ್‌ಪ್ರಿತ್‌ ಬುಮ್ರಾ!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಜಸ್‌ಪ್ರಿತ್‌ ಬುಮ್ರಾ.
  • ಸೆಂಚೂರಿಯನ್‌ ಟೆಸ್ಟ್‌ ಗೆಲ್ಲಲು ಭಾರತಕ್ಕೆ ಆರು ವಿಕೆಟ್‌ ಪಡೆಯುವ ಅಗತ್ಯವಿದೆ.

ಸೆಂಚೂರಿಯನ್‌: ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಎರಡು ವಿಕೆಟ್‌ ಕಬಳಿಸುವ ಟೀಮ್‌ ಇಂಡಿಯಾ ವೇಗಿ ಜಸ್‌ಪ್ರಿತ್‌ ಬುಮ್ರಾ ವಿಶ್ವ ದಾಖಲೆ ಬರೆದಿದ್ದಾರೆ. ಆ ಮೂಲಕ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್‌ ಆಮೀರ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 305 ರನ್ ಕಠಿಣ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ವಿಕೆಟ್‌ ಬಹುಬೇಗ ಕಳೆದುಕೊಂಡರೂ ನಂತರ ನಿಧಾನಗವಾಗಿ ಕಮ್‌ಬ್ಯಾಕ್‌ ಮಾಡುವ ಪ್ರಯತ್ನದಲ್ಲಿತ್ತು. ಆದರೆ, ಜಸ್‌ಪ್ರಿತ್‌ ಬುಮ್ರಾ, ರಾಸಿ ವ್ಯಾನ್‌ ಡೆರ್ ಡುಸೆನ್‌ ಹಾಗೂ ಕೇಶವ್‌ ಮಹರಾಜ್‌ ಅವರನ್ನು ಅದ್ಭುತವಾಗಿ ಕ್ಲೀನ್‌ ಬೌಲ್ಡ್ ಮಾಡಿ ಭಾರತ ತಂಡದ ಕಮ್‌ಬ್ಯಾಕ್‌ಗೆ ನೆರವಾದರು.

ರಾಸಿ ವ್ಯಾನ್‌ ಡೆರ್‌ ಡುಸೆನ್‌ ಅವರ ವಿಕೆಟ್‌ ಕಬಳಿಸುತ್ತಿದ್ದಂತೆ ಜಸ್‌ಪ್ರಿತ್‌ ವಿದೇಶಿ ನೆಲದಲ್ಲಿ 100 ಟೆಸ್ಟ್‌ ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿರುವ ಕಪಿಲ್ ದೇವ್‌, ಜಹೀರ್‌ ಖಾನ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ ಹಾಗೂ ಜಾವಗಲ್‌ ಶ್ರೀನಾಥ್‌ ಅವರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಬುಮ್ರಾ ಸೇರ್ಪಡೆಯಾಗಿದ್ದಾರೆ.

ಸೆಂಚೂರಿಯನ್‌ನಲ್ಲಿ ಇತಿಹಾಸ ಸೃಷ್ಟಿಸಲು ಭಾರತಕ್ಕೆ ಆರೇ ಮೆಟ್ಟಿಲು!

ತವರು ನೆಲದಲ್ಲಿ ಅತ್ಯಂತ ಕಡಿಮೆ ವಿಕೆಟ್‌ಗಳೊಂದಿಗೆ ವಿದೇಶಿ ನೆಲದಲ್ಲಿ ವೇಗವಾಗಿ 100 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಮೊದಲ ವೇಗಿ ಎಂಬ ಸಾಧನೆಗೆ ಜಸ್‌ಪ್ರಿತ್‌ ಬುಮ್ರಾ ಭಾಜನರಾಗಿದ್ದಾರೆ. ಆ ಮೂಲಕ ಪಾಕ್‌ ಮಾಜಿ ವೇಗಿ ಮೊಹಮ್ಮದ್‌ ಆಮೀರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಕೇವಲ 22 ಪಂದ್ಯಗಳಿಂದ ಜಸ್‌ಪ್ರಿತ್‌ ಬುಮ್ರಾ 101 ವಿದೇಶಿ ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಟೆಸ್ಟ್‌ ವೃತ್ತಿ ಜೀವನದ 25 ಪಂದ್ಯಗಳಿಂದ ಬುಮ್ರಾ 105 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೇವಲ 4 ವಿಕೆಟ್‌ ಮಾತ್ರ ಅವರು ತವರು ಮಣ್ಣಿನಲ್ಲಿ ಪಡೆದಿದ್ದಾರೆ.

ನಾಲ್ಕನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಕೋಚ್‌ ವಿಕ್ರಮ್ ರಾಥೋಡ್‌ ವೇಗಿ ಜಸ್‌ಪ್ರಿತ್‌ ಬುಮ್ರಾ ಬೌಲಿಂಗ್‌ ಪ್ರದರ್ಶನವನ್ನು ಗುಣಗಾನ ಮಾಡಿದ್ದಾರೆ.

ಸೆಂಚೂರಿಯನ್‌ನಲ್ಲಿ ಯಶಸ್ವಿ ರನ್‌ ಚೇಸ್‌ ಎಷ್ಟು ಗೊತ್ತೆ? ಇಲ್ಲಿದೆ ದಾಖಲೆ..

“ಜಸ್‌ಪ್ರಿತ್‌ ಬುಮ್ರಾ ಅವರ ಗುಣಮಟ್ಟದ ಬೌಲಿಂಗ್‌ ಇದಾಗಿದೆ. ನಾಲ್ಕನೇ ದಿನ ಕಮ್‌ಬ್ಯಾಕ್‌ ಮಾಡಲು ಅವರು ನಮಗೆ ನೆರವಾಗಿದ್ದಾರೆ. ನಾವು ಇತರೆ ಆಟಗಾರರಿಂದ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತೇವೆ. ಆದರೆ ನಮ್ಮ ಎಲ್ಲಾ ಬೌಲರ್‌ಗಳು ಕೂಡ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದಾರೆ,” ಎಂದು ಬ್ಯಾಟಿಂಗ್ ಕೋಚ್‌ ಗುಣಗಾನ ಮಾಡಿದ್ದಾರೆ.

ಭಾರತ Vs ದಕ್ಷಿಣ ಆಫ್ರಿಕಾ ಪಂದ್ಯದ ಸ್ಕೋರ್‌ಕಾರ್ಡ್

ನಾಲ್ಕನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್‌ ನಷ್ಟಕ್ಕೆ 94 ರನ್‌ ಗಳಿಸಿದ್ದು, ಗೆಲ್ಲಲು ಇನ್ನೂ 211 ರನ್‌ಗಳ ಅಗತ್ಯವಿದೆ. ಅರ್ಧಶತಕ ಗಳಿಸಿರುವ ನಾಯಕ ಹಾಗೂ ಆರಂಭಿಕ ಡೀನ್‌ ಎಲ್ಗರ್‌ ಕ್ರೀಸ್‌ನಲ್ಲಿದ್ದು, ಅವರ ಜೊತೆಗೆ ಅಂತಿಮ ದಿನ ತೆಂಬ ಬವೂಮ ಜೊತೆಯಾಗಲಿದ್ದಾರೆ.

‘ಕೃಷಿ ಭೂಮಿಯಲ್ಲೇ ಅಭ್ಯಾಸ’, ಶಮಿ ಬೆಳೆದು ಬಂದ ಹಾದಿ ಸ್ಮರಿಸಿದ ಬಾಂಗರ್‌!



Read more