Karnataka news paper

ಓಮಿಕ್ರಾನ್‌ ವೈರಸ್‌ ಆರ್ಥಿಕತೆ ಮೇಲೆ ಪರಿಣಾಮ ಬೀರದು: ವಿತ್ತ ಸಚಿವಾಲಯ


ಹೈಲೈಟ್ಸ್‌:

  • ಕೋವಿಡ್‌ ರೂಪಾಂತರಿ ತಳಿ ‘ಓಮಿಕ್ರಾನ್’ ವೈರಸ್‌ ಹೆಚ್ಚು ಅಪಾಯಕರಿ ಅಲ್ಲ
  • ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರದು
  • ವಿತ್ತ ಸಚಿವಾಯದ ನವೆಂಬರ್‌ನ ಮಾಸಿಕ ವರದಿಯಲ್ಲಿ ಮಾಹಿತಿ

ಹೊಸದಿಲ್ಲಿ: ಕೋವಿಡ್‌ ರೂಪಾಂತರಿ ತಳಿ ‘ಓಮಿಕ್ರಾನ್’ ವೈರಸ್‌ ಅಷ್ಟೇನೂ ಅಪಾಯಕಾರಿಯಲ್ಲ. ಅಲ್ಲದೆ, ಭಾರತದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಿರುವುದರಿಂದ ದೇಶದ ಆರ್ಥಿಕತೆ ಮೇಲೂ ಹೆಚ್ಚು ಪರಿಣಾಮ ಬೀರದು ಎಂದು ವಿತ್ತ ಸಚಿವಾಲಯ ವರದಿಯಲ್ಲಿ ತಿಳಿಸಿದೆ.

ಪ್ರಾಥಮಿಕ ವರದಿಗಳ ಆಧಾರದಲ್ಲಿ ಹೇಳುವುದಾದರೆ, ಓಮಿಕ್ರಾನ್‌ ಸೋಂಕು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ. ಜತೆಗೆ ಲಸಿಕಾಕರಣವೂ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಮೇಲೆ ಈ ಸೋಂಕು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇಲ್ಲ ಎಂದು ವಿತ್ತ ಸಚಿವಾಲಯದ ನವೆಂಬರ್‌ನ ಮಾಸಿಕ ಆರ್ಥಿಕ ವರದಿಯಲ್ಲಿ ತಿಳಿಸಿದೆ.

Omicron Variant: ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ!

“ಮಾರುಕಟ್ಟೆಯ ವಾತಾವರಣ, ಲಸಿಕಾಕರಣದ ವೇಗ, ಬಲವಾದ ಬಾಹ್ಯ ಬೇಡಿಕೆ ಹಾಗೂ ಸರ್ಕಾರ ಮತ್ತು ಆರ್‌ಬಿಐನ ನಿರಂತರ ನೆರವಿನೊಂದಿಗೆ, ಆರ್ಥಿಕ ವರ್ಷದ ಉಳಿದ ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆಗೆ ಇನ್ನಷ್ಟು ಚೈತನ್ಯ ಬರುವ ನಿರೀಕ್ಷೆ ಇದೆ. ಆದರೂ, ಕೋವಿಡ್‌-19 ರೂಪಾಂತರಿ ತಳಿ ಓಮಿಕ್ರಾನ್‌ ಸುಸ್ಥಿರ ಚೇತರಿಕೆಗೆ ಸವಾಲಾಗಿದ್ದು, ಕೋವಿಡ್‌-19ನಿಂದ ರಕ್ಷಿಸಿಕೊಳ್ಳಲು ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಸೂಕ್ತ,” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು ಶೇ.8.4ರಷ್ಟು ಬೆಳವಣಿಗೆ (ವರ್ಷದಿಂದ ವರ್ಷಕ್ಕೆ) ಕಂಡಿದೆ ಎಂದು ವರದಿಯಿಂದ ತಿಳಿದುಬಂದಿದೆ. ಪ್ರಸ್ತುತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರವು ಶೇ.20.1ರಷ್ಟಿತ್ತು.

ಕೋವಿಡ್ ಉಪಟಳದ ನಡುವೆಯೂ ಸತತ ನಾಲ್ಕು ತ್ರೈಮಾಸಿಕಗಳಲ್ಲಿ ಸಕಾರಾತ್ಮಕ ಬೆಳವಣಿಗೆ ತೋರುತ್ತಿರುವ ಕೆಲವೇ ಆರ್ಥಿಕ ಶಕ್ತಿಗಳಲ್ಲಿ ಭಾರತವೂ ಒಂದಾಗಿದೆ.

ದೇಶದಲ್ಲಿ 25 ಓಮಿಕ್ರಾನ್‌ ಕೇಸ್‌ ಪತ್ತೆ, ಎಲ್ಲರಲ್ಲೂ ಸೌಮ್ಯ ರೋಗ ಲಕ್ಷಣ – ಕೇಂದ್ರ ಮಾಹಿತಿ

ಕರ್ನಾಟಕದಲ್ಲಿ 3ನೇ ಓಮಿಕ್ರಾನ್‌ ಪ್ರಕರಣ ಪತ್ತೆ
ಕರ್ನಾಟಕದಲ್ಲಿ ಓಮಿಕ್ರಾನ್ ಮೂರನೇ ಪ್ರಕರಣ ಭಾನುವಾರ ಪತ್ತೆಯಾಗಿದೆ. ಖುದ್ದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೇ ಅದನ್ನು ದೃಢಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ 5 ಮಂದಿ ಹಾಗೂ ದ್ವಿತೀಯ ಮಟ್ಟದಲ್ಲಿ 15 ಮಂದಿ ಸಂಪರ್ಕಕ್ಕೆ ಬಂದಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರ ತಳಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಸಹ ಆಂಧ್ರಪ್ರದೇಶ ಮತ್ತು ಚಂಡೀಗಢ ರಾಜ್ಯಗಳಲ್ಲಿ ಮೊದಲ ಬಾರಿಗೆ ತಲಾ ಒಂದು ಪ್ರಕರಣ ವರದಿಯಾಗಿದೆ.

ಈಗಾಗಲೇ ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 7 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ವಿಶ್ವದಲ್ಲಿ ಸುಮಾರು 59 ದೇಶಗಳಿಗೆ ಓಮಿಕ್ರಾನ್ ಸೋಂಕು ಹರಡಿದೆ.



Read more