Karnataka news paper

ರಾಮು ಫಿಲಂಸ್‌ಗಾಗಿ ಒಂದಾದ ತಾರೆಯರು: ಕಾಲ್‌ಶೀಟ್ ಕೊಡಲು ಶಿವಣ್ಣ, ಉಪ್ಪಿ, ರವಿಚಂದ್ರನ್ ರೆಡಿ!


ಹರೀಶ್‌ ಬಸವರಾಜ್‌
ಕೋಟಿ ನಿರ್ಮಾಪಕ ರಾಮು ನಿರ್ಮಾಣದ ‘ಅರ್ಜುನ್‌ ಗೌಡ’ ಸಿನಿಮಾಗಾಗಿ ಅವರ ಬ್ಯಾನರ್‌ನಲ್ಲಿ ನಟಿಸಿದ್ದ ಎಲ್ಲ ನಟರು ಒಂದಾಗಿ ಸಾಥ್‌ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಕೋಟಿಗಳ ಲೆಕ್ಕದಲ್ಲಿ ಸಿನಿಮಾಗೆ ಬಂಡವಾಳ ಹೂಡಿ, ಅದ್ಧೂರಿಯಾಗಿ ಸಿನಿಮಾ ಮಾಡುವ ಖ್ಯಾತಿ ಹೊಂದಿದ್ದ ‘ಕೋಟಿ ರಾಮು’ ತಾವು ನಿರ್ಮಾಣ ಮಾಡಿದ್ದ ‘ಅರ್ಜುನ್‌ ಗೌಡ’ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುನ್ನವೇ ಮಾರಣಾಂತಿಕ ಕೊರೊನಾಗೆ ಬಲಿಯಾದರು. ಈಗ ಅವರ ಈ ಸಿನಿಮಾಗಾಗಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರೆಲ್ಲರೂ ಜತೆಯಾಗಿದ್ದಾರೆ.

ಕಿಚ್ಚ ಸುದೀಪ್‌, ಶಿವರಾಜ್‌ಕುಮಾರ್‌, ಉಪೇಂದ್ರ, ಗಣೇಶ್‌, ದುನಿಯಾ ವಿಜಯ್‌, ರವಿಚಂದ್ರನ್‌ ಹೀಗೆ ರಾಮು ಅವರ ಬ್ಯಾನರ್‌ನಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲಾ ಸ್ಟಾರ್‌ ನಟರು ನಟಿಸಿದ್ದಾರೆ. ಇವರೆಲ್ಲರೂ ರಾಮು ಅವರ ಕನಸಾದ ‘ಅರ್ಜುನ್‌ ಗೌಡ’ಗಾಗಿ ಒಂದಾಗಿ ವೇದಿಕೆ ಮೇಲೆ ನಿಂತು ಸಿನಿಮಾ ಪ್ರಚಾರ ಮಾಡಿದ್ದಾರೆ. ಮಂಗಳವಾರ ನಡೆದ ಸಿನಿಮಾದ ಬಿಡುಗಡೆಪೂರ್ವ ಕಾರ್ಯಕ್ರಮದಲ್ಲಿ ಮೇಲಿನ ಎಲ್ಲಾ ಸ್ಟಾರ್‌ಗಳು ಭಾಗವಹಿಸಿ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ತಾವೂ ಜತೆಗಿದ್ದೇವೆ ಎಂದು ಮಾಲಾಶ್ರೀಗೆ ಧೈರ್ಯ ತುಂಬಿದ್ದಾರೆ.

ಸಿನಿಮಾ ಮುಂದುವರಿಯಲಿ

ರಾಮು ಅವರಿಲ್ಲ ಎಂದು ಅವರ ಬ್ಯಾನರ್‌ನ ಸಿನಿಮಾಗಳು ನಿಂತು ಹೋಗುವುದು ಬೇಡ, ಮಾಲಾಶ್ರೀಯವರು ಕೇಳಿದರೆ ನಾನು ಡೇಟ್ಸ್‌ ಕೊಡುತ್ತೇನೆ ಎಂದ ಶಿವರಾಜ್‌ಕುಮಾರ್‌, ‘ನಿಮ್ಮ ಬ್ಯಾನರ್‌ನಲ್ಲಿಯೆ ‘ಸಿಂಹ’ ಎಂಬ ಸಿನಿಮಾ ಮಾಡೋಣ’ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ರವಿಚಂದ್ರನ್‌ ಮತ್ತು ಉಪೇಂದ್ರ ಸಹ ತಾವೂ ಸಹ ಮತ್ತೊಮ್ಮೆ ರಾಮು ಬ್ಯಾನರ್‌ನಲ್ಲಿ ನಟಿಸಲು ಸಿದ್ಧ ಎಂದರು. ಇವರೆಲ್ಲರ ಜತೆಗೆ ನಟ ದೇವರಾಜ್‌, ಪ್ರಜ್ವಲ್‌ ದೇವರಾಜ್‌ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಅರ್ಜುನ್ ಗೌಡ ಬಳಿಕ ಮತ್ತೊಂದು ಸಿನಿಮಾ ಮಾಡೋಣ ಅಂತ ರಾಮು ಹೇಳಿದ್ರು’- ಪ್ರಜ್ವಲ್ ದೇವರಾಜ್

ಶಿವಣ್ಣ, ಉಪೇಂದ್ರ ಹೇಳಿದ್ದೇನು?

”ರಾಮು ಫಿಲಂಸ್‌ ಬ್ಯಾನರ್‌ನಲ್ಲಿ ಹಲವು ಕಲಾವಿದರು ನಟಿಸಿದ್ದಾರೆ. ನಾನು ಅವರ ನಿರ್ಮಾಣದ ಆರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಮಾಲಾಶ್ರೀಯವರು ನಿರ್ಮಾಣ ಮಾಡಿದರೆ ಮತ್ತೊಂದು ಚಿತ್ರದಲ್ಲಿಯೂ ನಟಿಸುತ್ತೇನೆ. ‘ಅರ್ಜುನ್‌ ಗೌಡ’ ಸಿನಿಮಾವನ್ನು ನಾನು ಚಿತ್ರಮಂದಿರದಲ್ಲಿಯೇ ನೋಡುತ್ತೇನೆ” ಎಂದಿದ್ದಾರೆ ನಟ ಶಿವರಾಜ್ ಕುಮಾರ್.

”ರಾಮು ಕೋಟಿ ನಿರ್ಮಾಪಕರಾಗಿದ್ದರು. ಮಾಲಾಶ್ರೀ ಶತಕೋಟಿ ನಿರ್ಮಾಪಕಿಯಾಗಲಿ. ಶಿವಣ್ಣನ ರೀತಿ ನಾನು ಸಹ ಡೇಟ್ಸ್‌ ಕೊಡಲು ಸಿದ್ಧನಾಗಿದ್ದೇನೆ” ಎಂದು ಉಪೇಂದ್ರ ಹೇಳಿದ್ದಾರೆ.

ನಿರ್ಮಾಪಕ ರಾಮು ಜನ್ಮದಿನ: ಪತಿಗೆ ಭಾವನಾತ್ಮಕ ಪತ್ರ ಬರೆದ ನಟಿ ಮಾಲಾಶ್ರೀ

ರಾಮು ಅವರ ಡ್ರೀಮ್‌ ಪ್ರಾಜೆಕ್ಟ್

‘ಅರ್ಜುನ್‌ ಗೌಡ’ ನಿರ್ಮಾಪಕ ರಾಮು ಅವರ ಕನಸಿನ ಯೋಜನೆ ಎಂದು ಹೇಳಿದರು ನಟ ಪ್ರಜ್ವಲ್‌ ದೇವರಾಜ್‌. ‘ರಾಮು ಸರ್‌ ಅವರ ಮೊದಲ ನಿರ್ಮಾಣದ ಸಿನಿಮಾಗೆ ನನ್ನ ತಂದೆಯವರು ನಾಯಕ ನಟ. ಅವರ ಕೊನೆ ಸಿನಿಮಾಗೆ ನಾನು ನಾಯಕ. ಅವರೊಂದು ರೀತಿಯಲ್ಲಿ ನಮ್ಮ ಕುಟುಂಬದವರು. ಈ ಸಿನಿಮಾದ ನಂತರ ಇನ್ನಷ್ಟು ಸಿನಿಮಾಗಳನ್ನು ಮಾಡೋಣ ಪ್ರಜ್ವಲ್‌ ಎಂದಿದ್ದರು. ಆದರೆ ವಿಧಿಲಿಖಿತ ಬೇರೆ ಇತ್ತು. ಮಾಲಾಶ್ರೀಯವರು ಅವರ ಹೆಜ್ಜೆಗುರುತುಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಅವರ ಜತೆ ನಮ್ಮ ಕುಟುಂಬ ಇರುತ್ತದೆ’ ಎಂದು ಹೇಳಿದರು ಪ್ರಜ್ವಲ್‌.

‘ಅರ್ಜುನ್‌ ಗೌಡ ಸಿನಿಮಾದಲ್ಲಿ ನಾನು ಒಬ್ಬ ನ್ಯೂಸ್‌ ಚಾನೆಲ್‌ ಒಡತಿಯ ಪುತ್ರನಾಗಿ ನಟಿಸಿದ್ದೇನೆ. ನನ್ನ ತಾಯಿಗೆ ಚಾನೆಲ್‌ ಅನ್ನು ನಾನು ಮುಂದುವರಿಸಿಕೊಂಡು ಹೋಗಬೇಕು ಎಂಬ ಆಸೆಯಿರುತ್ತದೆ. ಆದರೆ ನಾನು ಸಿಕ್ಕಾಪಟ್ಟೆ ನಿಷ್ಠುರವಾದಿಯಾಗಿರುತ್ತೇನೆ. ನನ್ನ ಆಲೋಚನೆ ಮತ್ತು ನನ್ನ ತಾಯಿಯ ಆಲೋಚನೆ ಮ್ಯಾಚ್‌ ಆಗುತ್ತಿರುವುದಿಲ್ಲ. ಇಂತಹ ಒಂದು ವಿಭಿನ್ನ ಕ್ಯಾರೆಕ್ಟರ್‌ನಲ್ಲಿ ನಾನು ನಟಿಸಿದ್ದೇನೆ. ಇದಕ್ಕಾಗಿ ಒಂದಷ್ಟು ತಯಾರಿಯನ್ನು ಮಾಡಿಕೊಂಡಿದ್ದೆ’ ಎಂದು ಮಾಹಿತಿ ನೀಡಿದರು ಪ್ರಜ್ವಲ್‌ ದೇವರಾಜ್‌.

ಮಾಲಾಶ್ರೀಗೆ ಫೋನ್ ಮಾಡಿ ಮಾತನಾಡೋಕೆ ಒಂಥರ ಬೇಜಾರು ಆಗತ್ತೆ: ನಟ ಶಿವರಾಜ್‌ಕುಮಾರ್

ಬೋಲ್ಡ್‌ ಹುಡುಗಿಯಾದ ಪ್ರಿಯಾಂಕಾ

ನಾಯಕಿ ಪ್ರಿಯಾಂಕಾ ತಿಮ್ಮೇಶ್‌ ಮಾತನಾಡಿ, ‘ಈ ಸಿನಿಮಾದಲ್ಲಿ ನನಗೆ ಬಹಳಷ್ಟು ಸ್ಕ್ರೀನ್‌ ಸ್ಪೇಸ್‌ ಇದೆ. ಇಡೀ ಸಿನಿಮಾದಲ್ಲಿ ನನ್ನ ಪಾತ್ರ ಕ್ಯಾರಿ ಆಗುತ್ತದೆ. ಜಾಹ್ನವಿ ಎಂಬ ವಿದ್ಯಾವಂತ ಬೋಲ್ಡ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ತಂದೆಯ ವಿರುದ್ಧವಾಗಿ ಪ್ರೀತಿಯಲ್ಲಿ ಬಿದ್ದು, ನಾಯಕನಿಗೆ ಸಪೋರ್ಟ್‌ ಮಾಡುವ ಕ್ಯಾರೆಕ್ಟರ್‌ ಇದು. ಸಿನಿಮಾ ನೋಡಿದರೆ ಜನರಿಗೆ ಖಂಡಿತಾ ಇಷ್ಟವಾಗುತ್ತದೆ’ ಎಂದರು. ಸಿನಿಮಾದಲ್ಲಿ ಸಾಧು ಕೋಕಿಲಾ, ಗಿರಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಪತಿ ರಾಮು ನಿಧನದ ಬಳಿಕ ಮೊದಲ ಬಾರಿ ಮನದಾಳದ ಮಾತು ಹಂಚಿಕೊಂಡ ನಟಿ ಮಾಲಾಶ್ರೀ



Read more