ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (ಕೆಎಸ್‌ಸಿಎ) ಕನ್ನಡ ಅನುಷ್ಠಾನದ ಬಗ್ಗೆ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ‘ಕಚೇರಿ ವ್ಯವಹಾರ ಸೇರಿದಂತೆ ಎಲ್ಲ ಹಂತದಲ್ಲಿಯೂ ಸಂಸ್ಥೆಯು ಕನ್ನಡ ಅನುಷ್ಠಾನ ಮಾಡಬೇಕು’ ಎಂದು ಸೂಚಿಸಿದೆ.
ಸಂಸ್ಥೆಯು ಕನ್ನಡ ಅನುಷ್ಠಾನಗೊಳಿಸದ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿದ್ದವು. ಹೀಗಾಗಿ, ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ನೇತೃತ್ವದ ನಿಯೋಗ ಸಂಸ್ಥೆಗೆ ಭೇಟಿ ನೀಡಿ, ಕೆಎಸ್‌ಸಿಎ ಪದಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.
‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆಡಳಿತ ಭಾಷೆಯಾದ ಕನ್ನಡದಲ್ಲಿಯೇ ಸಂಪೂರ್ಣ ವ್ಯವಹಾರ ನಡೆಯಬೇಕು. ಕಚೇರಿ ವ್ಯವಹಾರ, ಸಂಸ್ಥೆಯ ವೆಬ್‌ಸೈಟ್, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಕನ್ನಡವನ್ನು ಅನುಷ್ಠಾನ ಮಾಡಬೇಕು. ಇಲ್ಲವಾದರೆ ನೋಟಿಸ್ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಕೆಎಸ್‌ಸಿಎ ಬೈಲಾ ಹಾಗೂ ವಾರ್ಷಿಕ ಮಹಾಸಭೆಗಳ ನಿಯಮಾವಳಿಗಳೂ ಸಂಪೂರ್ಣ ಕನ್ನಡದಲ್ಲಿ ಇರಬೇಕು’ ಎಂದು ಸೂಚಿಸಿದರು.
‘ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಅನುಷ್ಠಾನಗೊಳಿಸಲಾಗುವುದು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ’ ಎಂದು ಕೆಎಸ್‌ಸಿಎ ಪದಾಧಿಕಾರಿಗಳು ಭರವಸೆ ನೀಡಿದರು.