
ಬಿಜೆಪಿ ಕಾರ್ಯಕಾರಿಣಿ ಸಭೆ (ಫೋಟೋ ಡಿ.ಹೇಮಂತ್)
ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆ 2023 ರಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದಿರುವ 2 ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಮಿಷನ್ 150 ನ್ನು ಬಿಜೆಪಿಯ ಮುಖ್ಯಕಾರ್ಯಸೂಚಿಯನ್ನಾಗಿರಿಸಿಕೊಳ್ಳಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಿಲ್ಲಾ ಹಾಗೂ ರಾಜ್ಯವಾರು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮೂಲಗಳ ಪ್ರಕಾರ ಬಿಜೆಪಿ ಸಭೆಯಲ್ಲಿ ಇತ್ತೀಚೆಗೆ ಎಂಎಲ್ ಸಿ ಚುನಾವಣೆಯಲ್ಲಿ ಉಂಟಾಗಿರುವ ಹಿನ್ನೆಡೆ ಬಗ್ಗೆ ಚರ್ಚಿಸಲಾಯಿತು. ಕೆಲವು ನಾಯಕರು ಪಕ್ಷಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿದರು.
ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಮಟ್ಟದ ನಾಯಕತ್ವದಲ್ಲಿ ಬಿಜೆಪಿ ಉನ್ನತ ಮಟ್ಟದ ನಾಯಕರು ಬದಲಾವಣೆ ತರುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಅಸೆಂಬ್ಲಿ ಚುನಾವಣೆ: ಅರುಣ್ ಸಿಂಗ್
ಚುನಾವಣೆಗೆ ಇನ್ನು ಒಂದುವರೆ ವರ್ಷ ಮಾತ್ರ ಇದ್ದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದ್ದು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಕ್ಕೆ ಆಸಕ್ತಿ ತೋರಿದ್ದಾರೆ.
ಇಂಧನ ಸಚಿವ ವಿ ಸುನಿಲ್ ಕುಮಾರ್ ಮಾತನಾಡಿ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ, ಟಿಪ್ಪು ಜಯಂತಿ ಪುನಾರಂಭ ಮಾಡುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸಿಎಂ ಬೊಮ್ಮಾಯಿ ಕೂಡ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದು, 365 ದಿನವೂ ದಣಿವರಿಯದೇ ಕೆಲಸ ಮಾಡುವ ಸಾಮರ್ಥ್ಯ ತಮಗೆ ಇದೆ ಎಂದು ಹೇಳಿದ್ದು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು 15 ಗಂಟೆಗಳ ಕಾಲ ದಿನವೊಂದಕ್ಕೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.