Karnataka news paper

ಬ್ಯಾಂಕ್‌ ಸಾಲ ಮರು ವಸೂಲಾತಿ ಚುರುಕು: ಬ್ಯಾಂಕ್‌ಗಳ ಆದಾಯ ಚೇತರಿಕೆ!


ಹೈಲೈಟ್ಸ್‌:

  • ಬ್ಯಾಂಕ್‌ಗಳಲ್ಲಿ ಸುಸ್ತಿ ಸಾಲಗಳ ಮರು ವಸೂಲಾತಿ ಪ್ರಕ್ರಿಯೆಗಳು 2021ರಲ್ಲಿ ಸುಧಾರಣೆ
  • 2020ರ ಮಾರ್ಚ್ ಅಂತ್ಯಕ್ಕೆ: 8.99 ಲಕ್ಷ ಕೋಟಿ ರೂ.
  • 2021ರ ಮಾರ್ಚ್ ಅಂತ್ಯಕ್ಕೆ 8.37 ಲಕ್ಷ ಕೋಟಿ ರೂ.

ಹೊಸದಿಲ್ಲಿ: ಬ್ಯಾಂಕ್‌ಗಳಲ್ಲಿ ಸುಸ್ತಿ ಸಾಲಗಳ ಮರು ವಸೂಲಾತಿ ಪ್ರಕ್ರಿಯೆಗಳು 2021ರಲ್ಲಿ ಸುಧಾರಣೆಯಾಗಿದೆ. ಇದರ ಪರಿಣಾಮ ಬ್ಯಾಂಕ್‌ಗಳ ಆದಾಯ ಮತ್ತು ಲಾಭಾಂಶ ಚೇತರಿಸಿದೆ. ಈ ಕುರಿತ ವಿವರ ಇಲ್ಲಿದೆ.
ಆರ್‌ಬಿಐ ಪ್ರಕಾರ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲ

  • 2020ರ ಮಾರ್ಚ್ ಅಂತ್ಯಕ್ಕೆ: 8.99 ಲಕ್ಷ ಕೋಟಿ ರೂ.
  • 2021ರ ಮಾರ್ಚ್ ಅಂತ್ಯಕ್ಕೆ 8.37 ಲಕ್ಷ ಕೋಟಿ ರೂ.

ಎನ್‌ಪಿಎ ಇಳಿಮುಖ
ಆರ್‌ಬಿಐ ಪ್ರಕಾರ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ 2021ರ ಸೆಪ್ಟೆಂಬರ್‌ನಲ್ಲಿ ಶೇ.7.3ಕ್ಕೆ ಇಳಿಕೆಯಾಗಿದೆ. 2020ರ ಮಾರ್ಚ್‌ನಲ್ಲಿ ಇದು ಶೇ.8.2 ಇತ್ತು. ಬ್ಯಾಂಕ್‌ಗಳು ವಸೂಲಾಗದಿರುವ ಸಾಲಗಳ ನಿರ್ವಹಣೆಗೆ ಪ್ರತ್ಯೇಕವಾಗಿ ಇಡುತ್ತಿರುವ ಹಣದ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ. ಇದರಿಂದ ಬ್ಯಾಂಕ್‌ಗಳ ಲಾಭ ವೃದ್ಧಿಸತೊಡಗಿದೆ. ಕೋವಿಡ್‌ ಸಂದರ್ಭ ಸಾಲದ ವಿತರಣೆ ಮಂದಗತಿಯಲ್ಲಿ ಇರುವುದು, ಹೆಚ್ಚುವರಿ ನಗದು ಲಭ್ಯತೆಯ ಪರಿಣಾಮ ಬ್ಯಾಂಕ್‌ಗಳ ಲಾಭಾಂಶದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಿದ್ದರೂ 2022ರಲ್ಲಿ ಕೂಡ ಸಾಲ ಮರು ವಸೂಲಾತಿಯಲ್ಲಿ ಬ್ಯಾಂಕ್‌ಗಳು ಸುಧಾರಿಸುವ ನಿರೀಕ್ಷೆ ಇದೆ ಎಂದು ರೇಟಿಂಗ್‌ ಏಜೆನ್ಸಿ ಐಸಿಆರ್‌ಎ ತಿಳಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮನವಿ ತಿರಸ್ಕರಿಸಿದ ಆರ್‌ಬಿಐ: ನಿಯಮ ಸಡಿಲಿಕೆ ಆಗದು!

ಎನ್‌ಪಿಎ ಇಳಿಕೆ ಸಂಭವ:
ಬ್ಯಾಂಕ್‌ಗಳಲ್ಲಿ 2022ರ ಮಾರ್ಚ್ ವೇಳೆಗೆ ಒಟ್ಟಾರೆ ವಸೂಲಾಗದಿರುವ ಸಾಲ (ಎನ್‌ಪಿಎ) ಪ್ರಮಾಣ ಶೇ.6.9 ಅಥವಾ ಶೇ.7ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಬ್ಯಾಂಕ್‌ ಗಳ ನಿವ್ವಳ ಎನ್‌ಪಿಎ ಶೇ.2.2-3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ರೇಟಿಂಗ್‌ ಏಜೆನ್ಸಿ ತಿಳಿಸಿದೆ. ಇದು ಸಕಾರಾತ್ಮಕವಾಗಿದ್ದರೂ, 2020ರಲ್ಲಿ ಮೋರಟೋರಿಯಂ ಇದ್ದುದರಿಂದ ಹಾಗೂ ಕೋವಿಡ್‌-19 ಬಿಕ್ಕಟ್ಟು ಕುರಿತ ಅನಿಶ್ಚಿತತೆಗಳು ಮುಂದುವರಿದಿರುವುದರಿಂದ ಎಚ್ಚರ ವಹಿಸಬೇಕಾಗಿದೆ.

2.02 ಲಕ್ಷ ಕೋಟಿ ರೂ. ರೈಟ್‌ ಆಫ್‌:
ಬ್ಯಾಂಕ್‌ಗಳು 2020-21ರಲ್ಲಿಒಟ್ಟು 2.02 ಲಕ್ಷ ಕೋಟಿ ರೂ.ಗಳನ್ನು ರೈಟ್‌ ಆಫ್‌ ಮಾಡಿವೆ. ಇದರೊಂದಿಗೆ ಕಳೆದ 10 ವರ್ಷಗಳಲ್ಲಿ ಒಟ್ಟು 11,68,095 ಕೋಟಿ ರೂ.ಗಳನ್ನು ರೈಟ್‌ ಆಫ್‌ ಮಾಡಿದಂತಾಗಿದೆ. ರೈಟ್‌ ಆಫ್‌ ಎಂದರೆ ಬ್ಯಾಂಕ್‌ಗಳು ಸಾಲ ಮರು ವಸೂಲಾತಿಗೆ ಕಷ್ಟವಾಗುವ ಸುಸ್ತಿ ಸಾಲವನ್ನು ಬ್ಯಾಲೆನ್ಸ್‌ ಶೀಟ್‌ನಿಂದ ಪ್ರತ್ರತ್ಯೇಕವಾಗಿ ಇಡುವುದು. ರೈಟ್‌ ಆಫ್‌ ಎಂದರೆ ಸಾಲ ಮನ್ನಾ ಅಲ್ಲ. ಸಾಲ ಮರು ವಸೂಲಾತಿ ಮುಂದುವರಿಯುತ್ತದೆ. ಆದರೆ ಬ್ಯಾಲೆನ್ಸ್‌ ಶೀಟ್‌ನಿಂದ ಇದು ಹೊರಗುಳಿಯುತ್ತದೆ. ಹೀಗಿದ್ದರೂ ರೈಟ್‌ ಆಫ್‌ಗಳು ದೊಡ್ಡ ಸಾಲಗಳಿಗೆ ಅನ್ವಯಿಸುತ್ತವೆ. ಸಣ್ಣ ಸಾಲಗಾರರಿಗೆ ಈ ಸೌಲಭ್ಯ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು.



Read more