Karnataka news paper

ರಣಜಿ ಟ್ರೋಫಿ: ಮುಂಬೈ ತಂಡಕ್ಕೆ ಮೊದಲ ಬಾರಿ ಮರಿ ತೆಂಡೂಲ್ಕರ್‌ ಎಂಟ್ರಿ!


ಹೈಲೈಟ್ಸ್‌:

  • 2022ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಮುಂಬೈ ತಂಡ ಪ್ರಕಟ.
  • ಪೃಥ್ವಿ ಶಾ ಸಾರಥ್ಯದ ಮುಂಬೈ ಬಳಗದಲ್ಲಿ ಸ್ಋಆನ ಪಡೆದ ಅರ್ಜುನ್‌ ತೆಂಡೂಲ್ಕರ್.
  • ಮೊತ್ತ ಮೊದಲ ಬಾರಿ ಪ್ರಥಮ ದರ್ಜೆ ಕ್ರಿಕೆಟ್‌ ಆಡಲು ಸಜ್ಜಾದ ಸಚಿನ್‌ ಪುತ್ರ.

ಮುಂಬೈ: ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಇದೀಗ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. 2022ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ 20 ಸದಸ್ಯರ ಮುಂಬೈ ತಂಡವನ್ನು ಪ್ರಕಟ ಮಾಡಲಾಗಿದ್ದು, ಆಲ್‌ರೌಂಡರ್‌ ಅರ್ಜುನ್‌ ಸ್ಥಾನ ಗಿಟ್ಟಿಸಿದ್ದಾರೆ.

ಟೂರ್ನಿಯ ಮೊದಲ ಎರಡು ಪಂದ್ಯಗಳಿಗೆ ಪೃಥ್ವಿ ಶಾ ಸಾರಥ್ಯದ 20 ಸದಸ್ಯರ ತಂಡವನ್ನು ಪ್ರಕಟ ಮಾಡಲಾಗಿದೆ. ತಂಡದಲ್ಲಿ ಯಶಸ್ವಿ ಜೈಸ್ವಾಲ್‌, ಶಿವಂ ದುಬೇ ಮತ್ತು ಶಾಮ್ಸ್‌ ಮುಲಾನಿ ಅವರಂತಹ ಸ್ಟಾರ್‌ ಯುವ ಆಟಗಾರರಿದ್ದು, ಆದಿತ್ಯ ತಾರೆ ಮತ್ತು ಧವಳ್‌ ಕುಲಕರ್ಣಿ ಅವರಂತಹ ಅನುಭವಿಗಳೂ ಇದ್ದಾರೆ. ಮುಂಬೈ ತಂಡ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ದಿಲ್ಲಿ ವಿರುದ್ಧ ಪೈಪೋಟಿ ನಡೆಸಲಿದೆ.

ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇರುವ ಟೀಮ್ ಇಂಡಿಯಾ ಸೇವೆಯಲ್ಲಿ ನಿರತರಾಗಿರುವ ಕಾರಣ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ಬಳಿಕ ಅಜಿಂಕ್ಯ ರಹಾನೆ ಮುಂಬೈ ತಂಡಕ್ಕೆ ಹಿಂದಿರುಗಿ ನಾಯಕತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೇವಲ ಮೊದಲ 2 ಪಂದ್ಯಗಳಿಗೆ ಮಾತ್ರವೇ ತಂಡವನ್ನು ಪ್ರಕಟ ಮಾಡಲಾಗಿದೆ.

ಕೊಹ್ಲಿ ಕಳಪೆ ಬ್ಯಾಟಿಂಗ್‌ ಬಗ್ಗೆ ಅಸಮಾಧಾನ ಹೊರಹಾಕಿದ ಗವಾಸ್ಕರ್‌!

ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಆಯ್ಕೆ ಸಮಿತಿ ಮುಖ್ಯಸ್ಥ ಸಲಿಲ್‌ ಅಂಕೋಲ ಸಾರಥ್ಯದಲ್ಲಿ, ಆಯ್ಕೆ ಸಮಿತಿ ಸದಸ್ಯರಾದ ಗುಲಾಮ್‌ ಪಾರ್ಕರ್‌, ಸುನಿಲ್‌ ಮೋರೆ, ಪ್ರಸಾದ್‌ ದೇಸಾಯ್‌ ಮತ್ತು ಆನಂದ್‌ ಯಾಳ್ವಿಗಿ ತಂಡವನ್ನು ಆಯ್ಕೆ ಮಾಡಿದ್ದಾರೆ.

ಅರ್ಜುನ್‌ಗೆ ಗೋಲ್ಡನ್ ಚಾನ್ಸ್‌
2020/21ರ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡಿದ್ದ ಅರ್ಜುನ್‌ ತೆಂಡೂಲ್ಕರ್‌, ಈಗ ರೆಡ್‌ ಬಾಲ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದನ್ನು ಎದುರು ನೋಡುತ್ತಿದ್ದಾರೆ. ಮುಂಬೈ ಪರ ಆಡಿದ 2 ಟಿ20 ಪಂದ್ಯಗಳಲ್ಲಿ ಅರ್ಜುನ್‌ ಎರಡು ವಿಕೆಟ್‌ ಪಡೆದು ಗಮನ ಸೆಳೆದಿದ್ದರು.

ಎಡಗೈ ವೇಗಿ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆದರೆ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಿದೆ. ಇನ್ನು ಐಪಿಎಲ್‌ 2021 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮೂಲ ಬೆಲೆ 20 ಲಕ್ಷ ರೂ.ಗಳೊಂದಿಗೆ ಸೇರಿದ್ದ ಅರ್ಜುನ್‌, ಗಾಯದ ಸಮಸ್ಯೆ ಕಾರಣ ಒಂದು ಪಂದ್ಯದಲ್ಲೂ ಆಡಲು ಸಾಧ್ಯವಾಗಿರಲಿಲ್ಲ.

ಪೂಜಾರ ಸ್ಥಾನ ಕಸಿಯುವ ಸಾಮರ್ಥ್ಯ ಯುವ ಆಟಗಾರರಿಗಿದೆ: ಮದನ್ ಲಾಲ್!

ಮುಂಬೈ ತನ್ನ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ಎದುರು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಜ.13ರಿಂದ ಪೈಪೋಟಿ ನಡೆಸಲಿದ್ದು, ಬಳಿಕ ದಿಲ್ಲಿ ವಿರುದ್ಧ ಜ.20-23ರವರೆಗೆ ಕಾದಾಡಲಿದೆ.

ರಣಜಿ ಟ್ರೋಫಿಗೆ ಮುಂಬೈ ತಂಡ ಹೀಗಿದೆ
ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್‌, ಆಕರ್ಷಿತ್‌ ಗೋಮೆಲ್‌, ಅರ್ಮಾನ್‌ ಜಾಫರ್‌, ಸರ್ಫರಾಝ್‌ ಖಾನ್‌, ಸಚಿನ್‌ ಯಾದವ್‌, ಆದಿತ್ಯ ತಾರೆ (ವಿಕೆಟ್‌ಕೀಪರ್‌), ಹಾರ್ದಿಕ್‌ ತಾಮೊರ್‌ (ವಿಕೆಟ್‌ಕೀಪರ್‌), ಶಿವಂ ದುಬೇ, ಅಮನ್‌ ಖಾನ್‌, ಶಾಮ್ಸ್‌ ಮುಲಾನಿ, ತನುಶ್‌ ಕೋಟ್ಯಾನ್‌, ಪ್ರಶಾಂತ್‌ ಸೋಲಂಕಿ, ಶಶಾಂಕ್‌ ಅತ್ತಾರ್ದೆ, ಧವಳ್ ಕುಲಕರ್ಣಿ, ಮೋಹಿತ್‌ ಆವಸ್ಥಿ, ಪ್ರಿನ್ಸ್‌ ಬದಿಯಾನಿ, ಸಿದ್ಧಾರ್ಥ್‌ ರಾವತ್‌, ರಾಯ್‌ಸ್ಟನ್‌ ಡಿಯಾಸ್‌, ಅರ್ಜುನ್‌ ತೆಂಡೂಲ್ಕರ್‌.



Read more