Karnataka news paper

ರೋಹಿಂಗ್ಯಾ ನಿರಾಶ್ರಿತರ ದೋಣಿ ದಡಕ್ಕೆ ಸೇರಿಸಿಕೊಳ್ಳಲು ಇಂಡೊನೇಷ್ಯಾ ನಕಾರ


Prajavani

ಬಂದಾ ಅಸೆಹ್ (ಇಂಡೊನೇಷ್ಯಾ): ಇಂಡೊನೇಷ್ಯಾದ ಅತ್ಯಂತ ಉತ್ತರದ ಅಸೆಹ್‌ ಪ್ರಾಂತ್ಯದ ಸಮೀಪ 120 ಮಂದಿ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ದೋಣಿಯೊಂದು ಕಡಲಲ್ಲಿ ಅಪಾಯದ ಸ್ಥಿತಿಯಲ್ಲಿ ತೇಲುತ್ತಿದ್ದು, ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ಕೋರಿಕೆಯ ಹೊರತಾಗಿಯೂ ದೋಣಿಯನ್ನು ದಡಕ್ಕೆ ಸೇರಿಸಿಕೊಳ್ಳಲು ಇಂಡೊನೇಷ್ಯಾ ನಿರಾಕರಿಸಿದೆ.

ಮರದ ದೋಣಿ ತೂತಾಗಿದ್ದು, ನೀರು ಒಳಗೆ ಬರುತ್ತಿದೆ, ಎಂಜಿನ್‌ ಸಹ ಕೆಟ್ಟು ಹೋಗಿದೆ. ತೀವ್ರ ಚಳಿಯಲ್ಲೇ, ದೋಣಿ ಮುಳುಗುವ ಭೀತಿಯಲ್ಲಿ ನಿರಾಶ್ರಿತರಿದ್ದಾರೆ. ಹೀಗಾಗಿ ದೋಣಿಯನ್ನು ದಡಕ್ಕೆ ಬರಲು ಅವಕಾಶ ನೀಡಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿರುವ ಹೈಕಮಿಷನರ್‌ ಕಚೇರಿ (ಯುಎನ್ಎಚ್‌ಸಿಆರ್‌) ಕೋರಿಕೆ ಸಲ್ಲಿಸಿತ್ತು. ಆದರೆ ಇದನ್ನು ನಿರಾಕರಿಸಿರುವ ಇಂಡೊನೇಷ್ಯಾದ ಅಧಿಕಾರಿಗಳು, ನೌಕಾಪಡೆ ಮತ್ತು ಸ್ಥಳೀಯರ ನೆರವು ನೀಡಿ ದೋಣಿಯ ಎಂಜಿನ್‌ ಸರಿಪಡಿಸುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. 

ದೋಣಿಯಲ್ಲಿ 60 ಮಹಿಳೆಯರು, 51 ಮಕ್ಕಳು ಮತ್ತು 9 ಮಂದಿ ಪುರುಷರು ಇದ್ದಾರೆ.

ಮ್ಯಾನ್ಮಾರ್‌ನಿಂದ ಪಲಾಯನ ಮಾಡಿರುವ 7 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ನಿರಾಶ್ರಿತರು 2017ರಿಂದೀಚೆಗೆ ಬಾಂಗ್ಲಾದೇಶದಲ್ಲಿನ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಮುಸ್ಲಿಂ ಬಾಹುಳ್ಯದ ಇತರ ಕೆಲವು ದೇಶಗಳಲ್ಲಿ ಉತ್ತಮ ಜೀವನ ಸಾಗಿಸಬಹುದು ಎಂಬ ಆಸೆಯಿಂದ ದೋಣಿಗಳಲ್ಲಿ ಮಲೇಷ್ಯಾ, ಇಂಡೊನೇಷ್ಯಾಗಳಂತಹ ದೇಶಗಳತ್ತ ತೆರಳಲು ಪ್ರಯತ್ನಿಸುತ್ತಲೇ ಇದ್ದಾರೆ. ಇಂತಹ ಒಂದು ದೋಣಿ ಇದೀಗ ಇಂಡೊನೇಷ್ಯಾದ ಕರಾವಳಿ ತೀರದಿಂದ 60 ಕಿ.ಮೀ.ದೂರದಲ್ಲಿ ಸಮುದ್ರದಲ್ಲಿ ಸಿಲುಕಿಕೊಂಡಿದೆ.



Read more from source