Karnataka news paper

ಹೊಸ ವರ್ಷಕ್ಕೂ ಮುನ್ನ ರಜಾ ಮಜಾ..! ಮುರುಡೇಶ್ವರಕ್ಕೆ ಪ್ರವಾಸಿಗರ ದಾಂಗುಡಿ..


ಹೈಲೈಟ್ಸ್‌:

  • ಕಡಲ ತೀರದಲ್ಲಿ ಜನ, ವಾಹನ ದಟ್ಟಣೆ
  • ಜೀವ ರಕ್ಷಕ ಸಿಬ್ಬಂದಿ ಕಟ್ಟೆಚ್ಚರ
  • ವ್ಯಾಪಾರ ವಹಿವಾಟು ಜೋರು, ಜಲ ಕ್ರೀಡೆಗೂ ರಂಗು

ವಿಷ್ಣು ದೇವಡಿಗ
ಭಟ್ಕಳ (ಉತ್ತರ ಕನ್ನಡ):
ಹೊಸ ವರ್ಷ ಸಂಭ್ರಮಾಚರಣೆಗೆ 2 ದಿನ ಬಾಕಿ ಇರುವಾಗಲೇ ಪ್ರವಾಸಿ ತಾಣ ಮುರುಡೇಶ್ವರಕ್ಕೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಮುರುಡೇಶ್ವರ ಕಡಲ ತೀರದಲ್ಲಿ ಜನ ಹಾಗೂ ವಾಹನ ದಟ್ಟಣೆ ನಿರ್ಮಾಣವಾಗಿದೆ.

ಮುರುಡೇಶ್ವರ ಎಷ್ಟೆಲ್ಲ ಅಭಿವೃದ್ಧಿ ಹೊಂದುತ್ತಿದ್ದರೂ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಾಗಿದೆ. ಪ್ರವಾಸಿಗರು ಬೇರೆ ದಾರಿ ಇಲ್ಲದೇ ಮುರುಡೇಶ್ವರ ಕಡಲ ತೀರಕ್ಕೆ ವಾಹನಗಳನ್ನು ಕೊಂಡೊಯ್ಯುತ್ತಿದ್ದಾರೆ. ಪರಿಣಾಮವಾಗಿ ಕಡಲ ತೀರದಲ್ಲಿ ಸ್ಥಳದಲ್ಲಿ ದಟ್ಟಣೆ ನಿರ್ಮಾಣವಾಗಿದೆ. ದೇವಸ್ಥಾನದಲ್ಲಿಯೂ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಅಂಗಡಿ, ಹೋಟೆಲ್‌ಗಳ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಜಲ ಕ್ರೀಡೆಗಳಿಗೂ ವಿಶೇಷ ರಂಗು ಬಂದಿದೆ. ವಸತಿ ಗೃಹಗಳು ಹೆಚ್ಚು ಕಡಿಮೆ ಎಲ್ಲವೂ ಭರ್ತಿಯಾಗಿದೆ. ಇನ್ನು 5 – 6 ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದ್ದು, ಮೂಲ ಸೌಕರ್ಯ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಅಲ್ಲದೇ ಸಮುದ್ರದ ನೀರನ್ನು ಕಂಡು ಪ್ರವಾಸಿಗರು ನುಗ್ಗುತ್ತಲೇ ಇದ್ದು, ಇಲ್ಲಿನ ಜೀವ ರಕ್ಷಕ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಲಾಡ್ಜ್‌ ಭರ್ತಿ, ಕೊಠಡಿಗೆ ಬಾಡಿಗೆ ಏರಿಕೆ; ಹೋಟೆಲ್‌ ವ್ಯಾಪಾರ ಜೋರು!
ಕಟ್ಟುನಿಟ್ಟಿನ ಕ್ರಮ ಅಗತ್ಯ

ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಜನ ಜಂಗುಳಿಯ ನಡುವೆ ಕಳ್ಳರು ನುಸುಳಿಕೊಂಡಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಹೊರಗಿನಿಂದ ಬಂದ ಕೆಲ ಮಹಿಳೆಯರೇ ಕಳ್ಳತನಕ್ಕೆ ಇಳಿದಿದ್ದು, ಈಗಾಗಲೇ ಪೊಲೀಸರು ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈಕೆಯೊಂದಿಗೆ ಇದ್ದ ಕೆಲವರು ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಕಳ್ಳರ ಕಸರತ್ತು ಪುನರಾವರ್ತನೆಯಾದರೂ ಅಚ್ಚರಿಪಡಬೇಕಾಗಿಲ್ಲ.

ಮುರುಡೇಶ್ವರ: ಮೂವರ ರಕ್ಷಣೆ, ಒಬ್ಬ ಸಮುದ್ರಪಾಲು
ಈ ಬಗ್ಗೆ ದೇವಸ್ಥಾನ ಹಾಗೂ ಕಡಲ ತೀರದಲ್ಲಿ ಜಮಾಯಿಸುವ ಪ್ರವಾಸಿಗರಿಗೆ ಆಗಾಗ್ಗೆ ಎಚ್ಚರಿಕೆ ರವಾನಿಸುವ ಅಗತ್ಯ ಕಂಡು ಬಂದಿದೆ. ಸಾಲದೆಂಬಂತೆ ಕೆಲವು ಕಿಡಿಗೇಡಿಗಳು ಪ್ರವಾಸಿಗರ ಮುಂದೆ ಕೀಟಲೆಯ ಪ್ರವೃತ್ತಿ ತೋರುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

‘ಮುರುಡೇಶ್ವರ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಹೊಂದುತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ಎಂದು ಮುರುಡೇಶ್ವರ ನಿವಾಸಿ ರವಿ ಹರಿಕಾಂತ ಹೇಳಿದ್ದಾರೆ.

ಮುರುಡೇಶ್ವರ ಶಿವನ ಮೂರ್ತಿ ಮೇಲೆ ಐಸಿಸ್ ಕಾಕದೃಷ್ಟಿ: ಪೊಲೀಸ್ ಭದ್ರತೆ ಹೆಚ್ಚಳ, ಸಮುದ್ರದಲ್ಲೂ ಕಣ್ಗಾವಲು



Read more