ಹೈಲೈಟ್ಸ್:
- ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್.
- ಪ್ರಥಮ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಿತ್ತು ಟೆಸ್ಟ್ ವೃತ್ತಿಬದುನಿನಲ್ಲಿ 200ರ ಗಡಿ ದಾಟಿದ ಶಮಿ.
ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ 5 ವಿಕೆಟ್‌ಗಳನ್ನು ಕಿತ್ತು ಆತಿಥೇಯರು 197 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್ ಆಗುವಂತೆ ಮಾಡಿದ ಮೊಹಮ್ಮದ್ ಶಮಿ, ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಮೈಲುಗಲ್ಲು ದಾಟಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 200 ವಿಕೆಟ್‌ಗಳನ್ನು ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡರು.
2018ರಲ್ಲಿ ಇದೇ ಕ್ರೀಡಾಂಗಣದಲ್ಲಿ 100ನೇ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ್ದ ಶಮಿ, ಈಗ ವಿಕೆಟ್‌ಗಳ ದ್ವಿಶತವನ್ನು ಅದೇ ಕ್ರೀಡಾಂಗಣದಲ್ಲಿ ಮಾಡಿದ್ದಾರೆ ಎಂಬುದು ವಿಶೇಷ. ಈ ಸಾಧನೆ ಮಾಡಿದ 5ನೇ ಭಾರತೀಯ ವೇಗಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.
ಇಂಥಾ ಕೆಟ್ಟ ಪ್ರದರ್ಶನದ ತಂಡವನ್ನು ನೋಡಿಯೇ ಇಲ್ಲವೆಂದ ಪಾಂಟಿಂಗ್!
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್, ಬಲಗೈ ವೇಗದ ಬೌಲರ್ ಬೆಳೆದುಬಂದ ಕಠಿಣ ಹಾದಿಯನ್ನು ವಿವರಿಸಿದ್ದಾರೆ. ಫಿಟ್ನೆಸ್ ಒಂದೇ ಕಾರಣಕ್ಕೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡ ಶಮಿ, ಫಿಟ್ನೆಸ್ ಸುಧಾರಿಸಲು ಪಣ ತೊಟ್ಟಿದ್ದರು. ಈ ಸಲುವಾಗಿ ಉತ್ತರ ಪ್ರದೇಶದಲ್ಲಿನ ತಮ್ಮ ಹುಟ್ಟೂರಿನಲ್ಲಿ ಕೃಷಿ ಭೂಮಿಯಲ್ಲಿ ಓಟದ ಟ್ರ್ಯಾಕ್ ನಿರ್ಮಾಣ ಮಾಡಿದ್ದರು. ಕೃಷಿ ಭೂಮಿಯಲ್ಲಿ ಅಭ್ಯಾಸ ಮಾಡಿ, ತಮ್ಮ ಫಿಟ್ನೆಸ್ ಸುಧಾರಿಸುವ ಮೂಲಕ ಇಂದು ಈ ರೀತಿಯ ಅದ್ಭುತ ಬೌಲರ್ ಆಗಿ ಬೆಳೆದುನಿಂತಿದ್ದಾರೆ ಎಂದು ಬಾಂಗರ್ ಹೇಳಿದ್ದಾರೆ.
“2016 ಮತ್ತು 207ರಲ್ಲಿ ಶಮಿ ಅವರ ಫಿಟ್ನೆಸ್‌ನಲ್ಲಿ ಗಣನೀಯ ಕುಸಿತವಾಗಿತ್ತು. ತಮ್ಮ ವೈಯಕ್ತಿಕ ಜೀವನದಲ್ಲೂ ಶಮಿ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ, ಫಿಟ್ನೆಸ್ ಸುಧಾರಣೆಯನ್ನು ಗಂಭೀರವಾಗಿ ತೆಗೆದುಕೊಂಡು ಸ್ಥಿತಿಗತಿಗಳನ್ನು ಬದಲಾಯಿಸಿಕೊಂಡರು,” ಎಂದು ಬಾಂಗರ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
‘ಈತ ವಿಶ್ವದರ್ಜೆಯ ಬೌಲರ್’ ಟೀಮ್ ಇಂಡಿಯಾ ವೇಗಿಗೆ ಬವೂಮ ಮೆಚ್ಚುಗೆ!
“ನನಗೆ ನೆನಪಿದೆ. ಆ ಸಮಯದಲ್ಲಿ ತಮ್ಮ ಊರಿಗೆ ತೆರಳಿದ್ದ ಶಮಿ, ಕೃಷಿ ಭೂಮಿಯಲ್ಲಿ ರನ್ನಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿದ್ದರು. ಅಲ್ಲಿ ದೂರದ ಓಟ ಮತ್ತು ವೇಗ ಎಲ್ಲದರ ಅಭ್ಯಾಸ ನಡೆಸಿ, ತೂಕ ಇಳಿಸಿಕೊಳ್ಳುವ ಮೂಲಕ ತಮ್ಮ ಶ್ರೇಷ್ಠ ಫಿಟ್ನೆಸ್ ಮರಳಿ ಸಂಪಾದಿಸಿದ್ದರು,” ಎಂದಿದ್ದಾರೆ.
“ಶಮಿ ಬೌಲಿಂಗ್‌ನಲ್ಲಿ ಅವರ ರನ್ನಿಂಗ್ ಗಮನಿಸಿ. ಅವರು ಶ್ರೇಷ್ಠ ಫಿಟ್ನೆಸ್‌ನಲ್ಲಿ ಇಲ್ಲದೇ ಇದ್ದರೆ ಅವರ ರನ್‌ಅಪ್‌ನಲ್ಲೇ ಸ್ಪಷ್ಟವಾಗಿ ಕಾಣಿಸಿಬಿಡುತ್ತದೆ. ಸದ್ಯಕ್ಕೆ ಅವರು ಶ್ರೇಷ್ಠ ಫಿಟ್ನೆಸ್ ಹೊಂದಿದ್ದಾರೆ. ರನ್ನಪ್, ಬೌಲಿಂಗ್ ಎಲ್ಲವೂ ಅದ್ಭುತವಾಗಿ ಮೂಡಿಬರುತ್ತಿದೆ,” ಎಂದು ಹೇಳಿದ್ದಾರೆ.
ಭಾರತದ ಹಿಡಿತದಲ್ಲಿ ಪ್ರಥಮ ಟೆಸ್ಟ್
ಮೊದಲ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ (123) ಬಾರಿಸಿದ ಶತಕದ ಬಲದಿಂದ 327 ರನ್ ಕಲೆಹಾಕಿದ ಭಾರತ ತಂಡ, ಬಳಿಕ ಎದುರಾಳಿಯನ್ನು 197 ರನ್‌ಗಳಿಗೆ ಆಲ್‌ಔಟ್ ಮಾಡಿ ಭಾರಿ ಮುನ್ನಡೆ ಗಳಿಸಿತು. ನಂತರ 2ನೇ ಇನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲ್‌ಔಟ್ ಆದರೂ, ಎದುರಾಳಿಗೆ 305 ರನ್‌ಗಳ ಕಠಿಣ ಗುರಿ ನೀಡಿದೆ.