ಹೈಲೈಟ್ಸ್:
- ಓಮಿಕ್ರಾನ್ ಪತ್ತೆಯಾಗಿರುವ ಸ್ಥಳಗಳ ಸಂಪರ್ಕ ಹೆಚ್ಚಳ
- ಕೆಲ ದಿನ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸಲಹೆ
- ಹೊಸ ವರ್ಷ ಆಚರಣೆಗೆ ಹಲವು ನಿರ್ಬಂಧ
ದಾವಣಗೆರೆ: ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಸೋಂಕು ಹೆಚ್ಚಿರುವ ಬೆಂಗಳೂರು ಸೇರಿದಂತೆ ಇತರೆ ಸ್ಥಳಗಳಿಗೆ ದಾವಣಗೆರೆ ಜಿಲ್ಲೆಯ ಜನರ ಸಂಪರ್ಕ ಹೆಚ್ಚಿದ್ದು, ದಾವಣಗೆರೆ ಕೂಡ ಅಪಾಯದ ಅಂಚಿನಲ್ಲಿದೆ. ಕೆಲ ದಿನಗಳ ಕಾಲ ಜನ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸಲಹೆ ನೀಡಿದೆ. ಜತೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಂಭಾವ್ಯ ಮೂರನೆ ಅಲೆ ತಡೆಯಲು ಸರಕಾರದ ಸೂಚನೆಯಂತೆ ಕೆಲ ನಿರ್ಬಂಧ ಹೇರಲಾಗಿದೆ.
ಓಮಿಕ್ರಾನ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಅಪಾಯದ ಅಂಚಿನಲ್ಲಿರುವ ಜಿಲ್ಲೆಗಳ ಪಟ್ಟಿಯಲ್ಲಿ ದಾವಣಗೆರೆಯೂ ಇದೆ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಡಿಸಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು. ಜನತೆ ಎಚ್ಚರಿಕೆ ವಹಿಸಬೇಕು, ಎರಡು ಅಲೆಗಳಲ್ಲಿ ಜಿಲ್ಲೆ ಸಾಕಷ್ಟು ಸಾವು – ನೋವು ಕಂಡಿದ್ದು, ಈ ಬಾರಿಯಾದರೂ ಸೋಂಕು ಹೆಚ್ಚಳವಾಗದಂತೆ ತಡೆಯಲು ಜನತೆ ಸಹಕಾರ ನೀಡಬೇಕು. ಹೊಸ ವರ್ಷಾಚರಣೆ ವೇಳೆ ಗುಂಪುಗೂಡದೆ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ರೂಪಾಂತರಿ ಓಮಿಕ್ರಾನ್ ವೇಗವಾಗಿ ಹಬ್ಬುವ ವೈರಸ್ ಆಗಿದ್ದು, ರಾಜ್ಯದಲ್ಲಿ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರು, ಮಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಓಮಿಕ್ರಾನ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. ಜಿಲ್ಲೆಯ ಜನತೆಗೆ ರಾಜಧಾನಿ ಬೆಂಗಳೂರಿನ ಸಂಪರ್ಕ ಹೆಚ್ಚಿದೆ. ಒಮ್ಮೆ ಒಮಿಕ್ರಾನ್ ಒಂದು ಪ್ರಕರಣ ಕಂಡು ಬಂದರೂ ಆ ಸಂಖ್ಯೆ ಶೀಘ್ರ ದ್ವಿಗುಣ ಆಗುವ ಪರಿಸ್ಥಿತಿಯಿದೆ. ಹಾಗಾಗಿ ಕೆಲ ದಿನ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಆಚರಣೆ ನಿರ್ಬಂಧ: ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ವೈದ್ಯಕೀಯ ಸೇವೆ ಸೇರಿ ತುರ್ತು ಓಡಾಟಕ್ಕೆ ಮಾತ್ರ ಅವಕಾಶವಿದೆ. ಉಳಿದಂತೆ ಯಾವುದೇ ರೀತಿಯ ಓಡಾಟಕ್ಕೆ ಸರಕಾರ ಅವಕಾಶ ನೀಡಿಲ್ಲದ ಕಾರಣ, ದಾವಣಗೆರೆ ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಪಾಲನೆ ಆಗಲಿದೆ. ಸಾರ್ವಜನಿಕರಿಗೆ ಹೊಸ ವರ್ಷಾಚರಣೆ ನಿರ್ಬಂಧಿಸಲಾಗಿದೆ. ರಸ್ತೆ, ಪಾರ್ಕ್, ವೃತ್ತಗಳಲ್ಲಿ ಗುಂಪುಗೂಡಿ ಡಿಜೆ ಹಾಕಿಕೊಂಡು ವರ್ಷಾಚರಣೆ ಮಾಡುವುದನ್ನು ಸಂಪೂರ್ಣ ನಿಷೇಸಲಾಗಿದೆ. ರಾತ್ರಿ ವೇಳೆ ಓಡಾಟವೂ ನಿರ್ಬಂಧ ಇರುವುದರಿಂದ ಜನತೆ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿಕೊಳ್ಳಬೇಕು, ತಪ್ಪಿದರೆ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 12 ಕಡೆ ಚೆಕ್ ಪೋಸ್ಟ್
ದಾವಣಗೆರೆ ಜಿಲ್ಲೆಯಲ್ಲಿ 12 ಚೆಕ್‌ಪೋಸ್ಟ್ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಒಂದು ಚೆಕ್ ಪೋಸ್ಟ್‌ನಲ್ಲಿ 6 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ರಾತ್ರಿ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಸಂಪೂರ್ಣ ತಪಾಸಣೆ ನಡೆಯಲಿದೆ. ಸರಕಾರದ ನಿರ್ದೇಶನದಂತೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿದೆ. ಈ ಬಗ್ಗೆ ವಾಹನಗಳಲ್ಲಿ ಪ್ರಚಾರ ಕೂಡ ಮಾಡಲಾಗುತ್ತಿದೆ ಎಂದು ಎಸ್ಪಿ ಸಿ. ಬಿ. ರಿಷ್ಯಂತ್ ತಿಳಿಸಿದ್ದಾರೆ.
42 ಮಂದಿಗೆ ಕ್ವಾರಂಟೈನ್
ಓಮಿಕ್ರಾನ್ ಹೆಚ್ಚಿರುವ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡಿನಿಂದ ದಾವಣಗೆರೆ ಜಿಲ್ಲೆಗೆ ಆಗಮಿಸಿರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಅವರು ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯೊಂದಿಗೆ ಜಿಲ್ಲೆಗೆ ಆಗಮಿಸಬೇಕು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಚೆಕ್ ಪೋಸ್ಟ್‌ಗಳಲ್ಲಿ ಹೊರ ರಾಜ್ಯದವರ ತಪಾಸಣೆ ನಡೆಸಲಾಗುತ್ತಿದೆ. ಓಮಿಕ್ರಾನ್ ಪತ್ತೆ ನಂತರ ದಾವಣಗೆರೆಗೆ ಡಿಸೆಂಬರ್ 25 ರವರೆಗೆ 180 ಮಂದಿ ವಿದೇಶದಿಂದ ಬಂದಿದ್ದಾರೆ. ಇದರಲ್ಲಿ ಓಮಿಕ್ರಾನ್ ಹೆಚ್ಚಿರುವ ಅಪಾಯದ ಅಂಚಿನ ದೇಶಗಳಿಂದ 72 ಮಂದಿ ಇದ್ದಾರೆ. ಎಲ್ಲರ ಗಂಟಲು ಮಾದರಿ ಪರೀಕ್ಷಿಸಿದ್ದು ಸದ್ಯ ನೆಗೆಟಿವ್ ಇದೆ. ಇವರಲ್ಲಿ 30 ಮಂದಿ ಕ್ವಾರಂಟೈನ್ ಮುಗಿಸಿದ್ದು, ಅವರ ವರದಿಯೂ ನೆಗೆಟಿವ್ ಇದೆ. ಇನ್ನೂ 42 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್ ತಿಳಿಸಿದ್ದಾರೆ.