Karnataka news paper

ಹಾರ್ದಿಕ್‌ಗೆ ಏಷ್ಯಾ ಕಪ್‌ ವೇಳೆ ಹೇಳಿದ್ದ ಬುದ್ಧಿಮಾತನ್ನು ಸ್ಮರಿಸಿದ ಅಖ್ತರ್‌!


ಹೈಲೈಟ್ಸ್‌:

  • 2018ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನಡೆದ ಘಟನೆ ಸ್ಮರಿಸಿದ ಅಖ್ತರ್‌.
  • ಗಾಯದ ಸಮಸ್ಯೆ ಎದುರಿಸುವ ಬಗ್ಗೆ ಹಾರ್ದಿಕ್‌ಗೆ ಎಚ್ಚರಿಕೆ ನೀಡಿದ್ದ ಪಾಕ್‌ ದಿಗ್ಗಜ.
  • ಅದೇ ಟೂರ್ನಿಯಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದ ಆಲ್‌ರೌಂಡರ್‌ ಪಾಂಡ್ಯ.

ಹೊಸದಿಲ್ಲಿ: ಹಾರ್ದಿಕ್‌ ಪಾಂಡ್ಯ, 2016ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುತ್ತಿದ್ದಂತೆಯೇ ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ ಸಲುವಾಗಿ ಭಾರತ ತಂಡದ ಸುದೀರ್ಘಾವಧಿಯ ಹುಡುಕಾಟಕ್ಕೆ ಕೊನೆ ಬಿದ್ದಂತ್ತಾಗಿತ್ತು. ಆದರೆ, ದುರದೃಷ್ಟವಶಾತ್‌ ಹಾರ್ದಿಕ್‌ ಈಗ ಭಾರತ ತಂಡದಿಂದ ಹೊರ ಬೀಳುವಂತ್ತಾಗಿದೆ.

ಬರೋಡಾ ಆಲ್‌ರೌಂಡರ್‌ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಎಲ್ಲದರಲ್ಲೂ ಪಂದ್ಯ ಗೆದ್ದುಕೊಡಬಲ್ಲ ಚಾಂಪಿಯನ್‌ ಆಟಗಾರನಾಗಿ ಗುರುತಿಸಿಕೊಂಡವರು. ಆದರೆ, 2018ರಲ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ಬಳಿಕ ಹಾರ್ದಿಕ್‌ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದಾರೆ.

ಬೆನ್ನು ನೋವಿನ ಸಮಸ್ಯೆ ನಿವಾರಣೆ ಸಲುವಾಗಿ 2019ರಲ್ಲಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಆದರೆ, ಇದಾದ ನಂತರ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ. ಬ್ಯಾಟಿಂಗ್‌ನಲ್ಲೂ ಕೂಡ ಕಳಪೆ ಲಯ ಹೊಂದಿರುವ ಕಾರಣ ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

‘ವಿರಾಟ್‌ ಇಲ್ಲದೇ ಇದ್ದರೂ ರೋಹಿತ್‌ ಏಷ್ಯಾ ಕಪ್‌ ಗೆದ್ದುಕೊಟ್ಟಿದ್ದಾರೆ’ ಎಂದ ಗಂಗೂಲಿ!

ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌, 2018ರ ಏಷ್ಯಾ ಕಪ್‌ ಟೂರ್ನಿಯಲ್ಲಿ ನಡೆದ ಘಟನೆ ಒಂದನ್ನು ಸ್ಮರಿಸಿದ್ದಾರೆ. ಅಂದು ಹಾರ್ದಿಕ್‌ ಪಾಂಡ್ಯ ಅವರಿಗೆ ಗಾಯದ ಸಮಸ್ಯೆ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದ ಬಗ್ಗೆ ಇದೀಗ ಹೇಳಿಕೊಂಡಿದ್ದಾರೆ.

“2018ರ ಏಷ್ಯಾ ಕಪ್‌ ಟೂರ್ನಿ ವೇಳೆ ಜಸ್‌ಪ್ರೀತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ ಇಬ್ಬರಿಗೂ ಎಚ್ಚರಿಕೆ ನೀಡಿದ್ದೆ. ಇಬ್ಬರೂ ಕೂಡ ಬಹಳಾ ಸಣ್ಣಗಿದ್ದಾರೆ. ಅವರ ಬೆನ್ನಿನಲ್ಲಿ ಹೆಚ್ಚಿನ ಮಾಂಸಖಂಡಗಳೇ ಇಲ್ಲ. ಇದು ಗಾಯದ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದೆ. ನನ್ನನ್ನು ಗಮನಿಸಿ ನನ್ನ ಭುಜಗಳ ಕೆಳಗೆ ಹೆಚ್ಚಿನ ಮಾಂಸಖಂಡಗಳಿವೆ. ವೇಗದ ಬೌಲರ್‌ಗಳಿಗೆ ಇದರ ಅಗತ್ಯವಿದೆ,” ಎಂದು ಅಖ್ತರ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

“ನಾನು ಹಾರ್ದಿಕ್‌ ಅವರ ಬೆನ್ನು ಮುಟ್ಟಿದೆ. ಅಲ್ಲಿ ಮಾಂಸಖಂಡಗಳು ಬಹಳಾ ಕಡಿಮೆ ಇವೆ. ತೀರಾ ಸಣ್ಣನೆಯ ಶರೀರ ಅವರದ್ದು. ವೇಗದ ಬೌಲರ್‌ ಆಗಿ ಇದು ಗಾಯದ ಸಮಸ್ಯೆ ತಂದೊಡ್ಡುತ್ತದೆ ಎಂದು ಅವರಿಗೆ ಆಗಲೇ ಎಚ್ಚರಿಸಿದ್ದೆ. ಆದರೆ, ನಾನು ಬಹಳಷ್ಟು ಕ್ರಿಕೆಟ್‌ ಆಡಿದ್ದೇನೆ. ಆ ರೀತಿ ಏನೂ ಆಗುವುದಿಲ್ಲ ಎಂದಿದ್ದರು. ದುರದೃಷ್ಟವಶಾತ್‌ ಈ ಮಾತುಕತೆ ನಡೆದ ಕೆಲವೇ ಗಂಡೆಗಳ ಬಳಿಕ ಅವರು ಗಾಯಗೊಂಡರು,” ಎಂದು ಏಷ್ಯಾ ಕಪ್‌ ವೇಳೆ ನಡೆದ ಘಟನೆಯನ್ನು ಸ್ಮರಿಸಿದ್ದಾರೆ.

‘ದ್ರಾವಿಡ್‌ ಅಪ್ಪಟ ಜಂಟಲ್ಮನ್‌’, ಇದಕ್ಕೆ ಇತ್ತೀಚಿನ ಉದಾಹರಣೆ ಕೊಟ್ಟ ಗಂಗೂಲಿ!

2018ರಲ್ಲಿ ನಡೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಗ್ರೂಪ್‌ ಹಂತದ ಪಂದ್ಯದಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಸ್ಟ್ರೆಚರ್‌ ಮೂಲಕ ಫೀಲ್ಡ್‌ ಆಚೆಗೆ ಕರೆದೊಯ್ಯಲಾಗಿತ್ತು. ಬಳಿಕ ಬೆನ್ನು ನೋವಿನಿಂದ ಚೇತರಿಸಿ ಅವರು ತಮ್ಮ ಶ್ರೇಷ್ಠ ಲಯಕ್ಕೆ ಮರಳಲು ಸಾಧ್ಯವಾಗಲೇ ಇಲ್ಲ.

ಇತ್ತೇಚೆಗೆ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲೂ ಹಾರ್ದಿಕ್‌ ಬೌಲಿಂಗ್‌ ಮಾಡದೇ ಇರುವುದು ತಂಡಕ್ಕೆ ಭಾರಿ ನಷ್ಟ ತಂದೊಡ್ಡಿತು. ಇದರಿಂದ 6ನೇ ಬೌಲರ್‌ ಕೊರತೆ ಎದುರಿಸಿದ ಭಾರತ ತಂಡ ಸೂಒರ್‌ 12 ಹಂತದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋತು ನಾಕ್‌ಔಟ್‌ ಹಂತಕ್ಕೇರುವಲ್ಲಿ ವಿಫಲವಾಯಿತು.

‘ಭಾರತದ ಡ್ರೆಸ್ಸಿಂಗ್‌ ರೂಮ್‌ ಇಬ್ಭಾಗವಾಗದಿರಲಿ’, ಎಚ್ಚರಿಸಿದ ಬ್ರಾಡ್‌ ಹಾಗ್!

ತಂಡಕ್ಕೆ ಆಯ್ಕೆ ಮಾಡದಂತೆ ಮನವಿ!
ಕಳೆದ ತಿಂಗಳು ನಡೆದ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಟೀಮ್ ಇಂಡಿಯಾ ಸೆಲೆಕ್ಟರ್ಸ್‌ ಆಯ್ಕೆ ಮಾಡಿರಲಿಲ್ಲ. ವರದಿಗಳ ಪ್ರಕಾರ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಒಡಿಐ ಸರಣಿಗೂ ತಮ್ಮನ್ನು ಆಯ್ಕೆ ಮಾಡದೇ ಇರುವಂತೆ ಖುದ್ದಾಗಿ ಹಾರ್ದಿಕ್‌ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಬೆನ್ನು ನೋವಿನಿಂದ ಚೇತರಿಸಿ ಸಂಪೂರ್ಣವಾಗಿ ಚೇತರಿಸುವುದರ ಕಡೆಗೆ ಎದುರು ನೋಡುತ್ತಿರುವ ಹಾರ್ದಿಕ್‌, ಮುಂಬೈನಲ್ಲಿ ಪುನಶ್ಚೇತನ ಶಿಬಿರಕ್ಕೆ ಒಳಪಡಲಿದ್ದಾರೆ. ಇದೇ ಕಾರಣಕ್ಕೆ ಪ್ರಸ್ತುತ ಚಾಲ್ತಿಯಲ್ಲಿರುವ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡದೇ ಇರಲಿ ನಿರ್ಧರಿಸಿದ್ದಾರೆ. ಪುನಶ್ಚೇತನ ಶಿಬಿರ ಬಳಿಕ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ತಮ್ಮ ಫಿಟ್ನೆಸ್‌ ಸಾಬೀತು ಪಡಿಸಿ ಪ್ರಮಾಣ ಪತ್ರ ಪಡೆದ ಬಳಿಕವಷ್ಟೇ ವೃತ್ತಿಪರ ಕ್ರಿಕೆಟ್‌ಗೆ ಹಿಂದಿರುಗುವುದು ಸಾಧ್ಯ.



Read more