ಹೈಲೈಟ್ಸ್:
- ಕೇಂದ್ರ ಜಲ ಆಯೋಗದಲ್ಲಿ ಈ ಡಿಪಿಆರ್ ಏಕೆ ಕೊಳೆಯುತ್ತಿದೆ ಎನ್ನುವುದಕ್ಕೆ ಕಾರಣವನ್ನು ಸಿದ್ದರಾಮಯ್ಯ ಅವರೇಕೆ ಹೇಳುತ್ತಿಲ್ಲ; ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನ
- ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದಾಗ ಮೇಕೆದಾಟು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ
- ದಿಲ್ಲಿಯಲ್ಲಿ ಕೊಳೆಬಿದ್ದಿರುವ ಡಿಪಿಆರ್ ಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್ ಏನು ಮಾಡಿದೆ?
ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು, ಪಾದಯಾತ್ರೆ ಮಾಡಿದರೆ ಡಿಪಿಆರ್’ಗೆ ಜಲ ಆಯೋಗ ಒಪ್ಪಿಗೆ ನೀಡುತ್ತಾ? ಈ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ ಎಂಬ ಅರಿವು ಪ್ರತಿಪಕ್ಷ ನಾಯಕರಿಗೆ ಇದೆಯಾ? ತಮಿಳುನಾಡು ಒಪ್ಪಿಗೆ ಪಡೆಯಿರಿ ಎಂದು ಸ್ವತಃ ಕೇಂದ್ರ ಸರಕಾರವೇ ರಾಜ್ಯಕ್ಕೆ ಸ್ಪಷ್ಟವಾಗಿ ಹೇಳಿದೆ. ಹಾಗಾದರೆ, ಪಾದಯಾತ್ರೆಯಿಂದ ಡಿಪಿಆರ್’ಗೆ ಒಪ್ಪಿಗೆ ಹೇಗೆ ಸಿಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಪಾದಯಾತ್ರೆ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಿ ತಮಿಳುನಾಡು ರಾಜ್ಯದ ಮನವೊಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸರಕಾರಕ್ಕೆ ಹೇಳಿ. ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆ ಒತ್ತಾಯ ಮಾಡಿ. ಜತೆಯಲ್ಲಿ ನಾವೂ ಬರುತ್ತೇವೆ.
ಐದು ವರ್ಷ ಸಿಎಂ ಆಗಿದ್ದರು. ಹಣಕಾಸು ಮಂತ್ರಿಯೂ ಆಗಿದ್ದರು. ಈಗ ಪ್ರತಿಪಕ್ಷ ನಾಯಕರು ಆಗಿದ್ದಾರೆ. ಆದರೆ, ಡಿಪಿಆರ್ ಗೆ ಜಲ ಆಯೋಗ ಒಪ್ಪಿಗೆ ಕೊಡುವ ಮಾನದಂಡ ಏನು ಎನ್ನುವ ತಿಳಿವಳಿಕೆ ಅವರಿಗೆ ಇಲ್ಲವೆ? ತಾಂತ್ರಿಕ, ಕಾನೂನಾತ್ಮಕ ಅಂಶಗಳಿಂದ ನೆನೆಗುದಿಗೆ ಬಿದ್ದ ಡಿಪಿಆರ್ ಗೆ ಪಾದಯಾತ್ರೆಯಿಂದ ಮೋಕ್ಷ ಸಿಗುತ್ತಾ? ಎಂದು ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದಾಗ ಮೇಕೆದಾಟು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಯಿತು. ಕೂಡಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು. ಆಗ ಕೇಂದ್ರ ಸರಕಾರವು ತಮಿಳುನಾಡಿನ ಒತ್ತಾಯಕ್ಕೆ ಮಣಿದು, ನೆರೆ ರಾಜ್ಯದ ಸಹಮತ ಪಡೆಯುವಂತೆ ನಮ್ಮ ರಾಜ್ಯಕ್ಕೆ ಸೂಚಿಸಿತ್ತು. ಈ ಅಡೆತಡೆಗಳನ್ನು ನಿವಾರಿಸಲು ಹಲವು ಬಾರಿ ಪ್ರಧಾನಿಗಳನ್ನು, ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಆದರೆ, ದಿಲ್ಲಿಯಲ್ಲಿ ಕೊಳೆಬಿದ್ದಿರುವ ಡಿಪಿಆರ್ ಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್ ಏನು ಮಾಡಿದೆ? ಎಲ್ಲಿ ಹೋರಾಟ ಎನ್ನುವುದನ್ನು ಪ್ರತಿಪಕ್ಷ ನಾಯಕರು ಜನರಿಗೆ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರು ನಿರಾಕರಿಸಿದ್ದ ಕಾಂಗ್ರೆಸ್, ಈಗ ಅದೇ ನಗರದಲ್ಲಿ 4 ದಿನ ಪಾದಯಾತ್ರೆ ಮಾಡುತ್ತಿದೆ. ಕೋವಿಡ್ ವೇಳೆ ಜನರಿಗೆ ತೊಂದರೆ ಕೊಡಲು ಈ ಹೊಸ ನಾಟಕ ಏಕೆ? ಮೊದಲು ನಾನು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಿ. ಆಮೇಲೆ ಪಾದಯಾತ್ರೆ ಮಾಡಿ, ನನ್ನದೇನೂ ತಕರಾರಿಲ್ಲ ಎಂದಿದ್ದಾರೆ.