Karnataka news paper

ಕೊರಗ ಜನಾಂಗದ ಮೇಲೆ ಪೊಲೀಸರ ದೌರ್ಜನ್ಯ; ಪಿಎಸ್‌ಐ ಅಮಾನತು, ಐದು ಸಿಬ್ಬಂದಿ ಎತ್ತಂಗಡಿ


ಉಡುಪಿ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕೆರೆಯಲ್ಲಿ ಕೊರಗ ಸಮುದಾಯದ ಮೆಹಂದಿ ಶಾಸ್ತ್ರ ನಡೆಯುತ್ತಿದ್ದ ಮನೆಗೆ ದಾಳಿ ನಡೆಸಿ ಲಾಠಿಚಾರ್ಜ್‌ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪನಿರೀಕ್ಷಕ ಬಿ.ಪಿ. ಸಂತೋಷ್‌ ಎಂಬಾತನನ್ನು ಅಮಾನತುಗೊಳಿಸಿದ್ದು, ಐವರು‌ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.

ಮದುಮಗ, ಮಹಿಳೆಯರು, ಹಿರಿಯರು ಸೇರಿದಂತೆ ಯಾವುದನ್ನು ಲೆಕ್ಕಿಸದೇ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಮಾನೀಯತೆ ಮರೆದಿದ್ದರು. ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ. ದಾಳಿಯಲ್ಲಿ ಭಾಗವಹಿಸಿದ್ದ ಕೋಟ ಠಾಣೆ ಸಿಬ್ಬಂದಿ ಜೈರಾಮ್, ವಿಕ್ರಮ್, ಮುಂಜುನಾಥ, ಅಶೋಕ್ ಶೆಟ್ಟಿ ಹಾಗೂ ಗಣೇಶ ಎಂಬುವವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸಚಿವ ಪೂಜಾರಿ ತವರಲ್ಲಿ ಇದೆಂಥಾ ಅನ್ಯಾಯ?; ಮೆಹಂದಿ ಮನೆಗೆ ರಾಕ್ಷಸರಂತೆ ನುಗ್ಗಿ ಪೊಲೀಸ್‌ ದೌರ್ಜನ್ಯ!
ಸೋಮವಾರ ರಾತ್ರಿ ಕೊರಗ ಸಮುದಾಯದ ರಾಜೇಶ್ ಎಂಬುವವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು. ಮನೆಯಲ್ಲಿ ಡಿಜೆ ಬಳಕೆಯ ಬಗ್ಗೆ ಸ್ಥಳೀಯನೊಬ್ಬ ದೂರು‌ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. ನೇತೃತ್ವದಲ್ಲಿ ದಾಳಿ ಮಾಡಿ ಅಲ್ಲಿದ್ದ ಕೊರಗ ಸಮುದಾಯದವರ ಮೇಲೆ ಲಾಠಿ ಚಾಜ್೯ ನಡೆಸಲಾಗಿತ್ತು. ಪೊಲೀಸರ ರಾಕ್ಷಸೀ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಸಮುದಾಯದ ಮುಖಂಡರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆಯ ಎಚ್ಚರಿಕೆ‌ಯನ್ನು ನೀಡಿದ್ದರು.



Read more