Karnataka news paper

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಅಭಿಯಾನ; ಸುಂಕ ಪಾವತಿಸದಿದ್ದರೆ 6 ತಿಂಗಳ ಸೆರೆಮನೆ ಶಿಕ್ಷೆ, ದಂಡ!


ಹೈಲೈಟ್ಸ್‌:

  • ಸ್ಥಳೀಯ ಆಡಳಿತಗಳಲ್ಲಿ ಸುಂಕ ಅಭಿಯಾನದ ಮೂಲಕ ಆರ್ಥಿಕ ಭದ್ರತೆ; ಕಟ್ಟಡ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದ ಶೇ.1ರಷ್ಟು ಸುಂಕ ಪಾವತಿ ಕಡ್ಡಾಯ
  • ಸುಂಕ ಪಾವತಿಸದ 62 ಮಂದಿ ಖಾಸಾಗಿಯವರಿಗೆ ತಿಳಿವಳಿಕೆ ನೋಟಿಸ್‌, ಉದ್ದೇಶ ಪೂರ್ವಕವಾಗಿ ಸುಂಕ ಪಾವತಿಸದಿದ್ದರೆ 6 ತಿಂಗಳ ಸೆರೆಮನೆ ಶಿಕ್ಷೆ, ದಂಡ
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರ ಕಲಂ2(ಡಿ)ರಡಿ ಬರುವ ಕಾಮಗಾರಿ ನಡೆಸುವ ನಿಯೋಜಕರು, ಗುತ್ತಿಗೆದಾರರು, ನಿರ್ಮಾಣದಾರರು ಕಡ್ಡಾಯವಾಗಿ ಸುಂಕ ಪಾವತಿಸಬೇಕು

ಎಂ. ಪ್ರಶಾಂತ್‌ ಸೂಲಿಬೆಲೆ
ಬೆಂಗಳೂರು ಗ್ರಾಮಾಂತರ: ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ದುಡಿಯುವ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸ್ಥಳೀಯ ಆಡಳಿತಗಳು ಕಾರ್ಮಿಕ ಇಲಾಖೆಗೆ ಪಾವತಿಸಬೇಕಿರುವ ಶೇ. 1ರಷ್ಟು ಸುಂಕವನ್ನು ವಸೂಲು ಮಾಡಲು ಕಾರ್ಮಿಕ ಇಲಾಖೆ ಸುಂಕ ಅಭಿಯಾನದ ಮೂಲಕ ಹೆಜ್ಜೆಯಿಟ್ಟಿದ್ದು, ಗ್ರಾಮಾಂತರ ಜಿಲ್ಲೆಯಾದ್ಯಂತ ಸುಂಕ ಪಾವತಿಸದ 62 ಮಂದಿಗೆ ತಿಳಿವಳಿಕೆ ನೋಟಿಸ್‌ ಮೂಲಕ ಬಿಸಿ ಮುಟ್ಟಿಸಿದೆ.

ಕಾರ್ಮಿಕರ ಹಿತ ರಕ್ಷಣೆಗಾಗಿ ರಚಿಸಲಾಗಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸುವ ಸಲುವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣಗಾರರು ಹಾಗೂ ನಿಯೋಜಕರಿಂದ ನಿರ್ಮಾಣದ ಒಟ್ಟು ವೆಚ್ಚದ ಶೇ 1ರಷ್ಟು ಸುಂಕವನ್ನು ನೀಡಬೇಕು. ಸ್ಥಳೀಯ ಗ್ರಾಪಂ, ನಗರಸಭೆ, ಪುರಸಭೆಗಳಲ್ಲಿ ಈ ಸುಂಕ ಸಂಗ್ರಹಿಸಿ ಕಾರ್ಮಿಕ ಇಲಾಖೆಗೆ ಸಲ್ಲಿಸಬೇಕು. ಈ ಸಂಬಂಧ ಕೇಂದ್ರ ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ-1996 ಜಾರಿ ಮಾಡಿ ನಿಯಮಗಳನ್ನು ರೂಪಿಸಿದೆ. ಭೂಮಿಯ ಬೆಲೆ ಹಾಗೂ ನೌಕರರ ಪರಿಹಾರ ಕಾಯ್ದೆ 1923ರಡಿ ನೌಕರರ ಅಥವಾ ಅವರ ಅವಲಂಬಿತರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೊರತುಪಡಿಸಿ ಕಟ್ಟಡ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದ ಶೇ.1ರಷ್ಟು ದರವನ್ನು ಸುಂಕವೆಂದು ಕೇಂದ್ರ ನಿಗದಿಪಡಿಸಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ, ಬೆಂಗಳೂರಿನ ಕೈಗಾರಿಕೋದ್ಯಮಿಗಳು ಕಂಗಾಲು; ಲಕ್ಷಾಂತರ ಉದ್ಯೋಗ ನಷ್ಟ ಭೀತಿ!
ಯಾರು ಸುಂಕು ಪಾವತಿಸಬೇಕು
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರ ಕಲಂ2(ಡಿ)ರಡಿ ಬರುವ ಕಾಮಗಾರಿ ನಡೆಸುವ ನಿಯೋಜಕರು, ಗುತ್ತಿಗೆದಾರರು, ನಿರ್ಮಾಣದಾರರು ಕಡ್ಡಾಯವಾಗಿ ಸುಂಕ ಪಾವತಿಸಬೇಕು. ನಿರ್ವಹಣೆ, ಕಟ್ಟಡ ಕೆಡವುವಿಕೆ ಸಂಬಂಧಿಸಿದ ಕಾಮಗಾರಿ, ರಿಪೇರಿ, ಮಾರ್ಪಾಡು, ನಿರ್ಮಾಣ, ಕಟ್ಟಡ, ಬೀದಿಗಳು, ರಸ್ತೆಗಳು, ರೈಲ್ವೆಗಳು, ಟ್ರಾಮ್‌ ವೇಗಳು, ಏರ್‌ ಪೀಲ್ಡ್‌, ನೀರಾವರಿ ಚರಂಡಿ, ಪ್ರವಾಹ ನಿಯಂತ್ರಣ ಕಾಮಗಾರಿ, ವಿದ್ಯುತ್‌ ಉತ್ಪಾದನೆ, ಪ್ರಸರಣ ಮತ್ತು ವಿತರಣೆ, ಜಲ ಕಾಮಗಾರಿ, ತೈಲ ಮತ್ತು ಅನಿಲ ಸ್ಥಾವರ, ಚಪ್ಪಡಿ, ಟೈಲ್ಸ್‌ ಆಳವಡಿಕೆ, ಪ್ಲಂಬಿಂಗ್‌ ಕೆಲಸ, ವೈರಿಂಗ್‌ ಸೇರಿದಂತೆ ಸುಮಾರು 53 ವಿಧದ ಕಾಮಗಾರಿಗಳ ನಿರ್ಮಾಣದಾರರು ಸುಂಕ ಪಾವತಿಸಬೇಕು. ಕಟ್ಟಡ ನಿಯೋಜಕರು, ಗುತ್ತಿಗೆದಾರರು, ನಿರ್ಮಾಣದಾರರು ಕಟ್ಟಡ ಮತ್ತು ಇತರೆ ನಿರ್ಮಾಣಕ್ಕಾಗಿ ಕಟ್ಟಡ ನಕ್ಷೆ ಅನುಮೋದನೆಯೊಂದಿಗೆ ಅನುಮತಿ ಪಡೆಯುವಾಗ ಕಟ್ಟಡ ನಿರ್ಮಾಣದ ಒಟ್ಟು ವೆಚ್ಚದ ಶೆ.1 ರಷ್ಟು ಕಾರ್ಮಿಕ ಕಲ್ಯಾಣ ಸುಂಕ ಸಂಗ್ರಹಿಸಬೇಕು.
ಕಾರ್ಮಿಕ ಇಲಾಖೆಯಿಂದ ಮಹತ್ವಾಕಾಂಕ್ಷಿ ಯೋಜನೆ: ಕಾರ್ಮಿಕರಿಗಾಗಿ ‘ಶ್ರಮಿಕ ಸಂಜೀವಿನಿ’ ಜಾರಿ
ಸುಂಕ ಸಂಗ್ರಹಣೆ ಅಭಿಯಾನ

ನ.2ರಿಂದ ಡಿ.1ರವರೆಗೂ ಒಂದು ತಿಂಗಳ ಕಾಲ ಕಾರ್ಮಿಕ ಇಲಾಖೆ ಜಿಲ್ಲೆಯ ಎಲ್ಲ ಗ್ರಾಪಂಗಳು,ನಗರಸಭೆ, ಪುರಸಭೆಗಳಲ್ಲಿ ಸುಂಕ ಸಂಗ್ರಹಣ ಅಭಿಯಾನದ ಮೂಲಕ ಕಾರ್ಮಿಕ ಕಲ್ಯಾಣಕ್ಕೆ ಆರ್ಥಿಕ ಸಂಪನ್ಮೂಲ ಜತೆಗೆ ಸುಂಕದಿಂದ ತಪ್ಪಿಸಿಕೊಳ್ಳುತ್ತಿರುವ ನಿರ್ಮಾಣದಾರರಿಗೆ, ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸಿದೆ. ಸಾಕಷ್ಟು ಗ್ರಾಪಂ, ನಗರಸಭೆ, ಪುರುಸಭೆ ಹಾಗೂ ಖಾಸಗಿ ನಿರ್ಮಾಣದಾರರಿಗೆ ಸುಂಕ ಪಾವತಿ ಬಗ್ಗೆ ಖಡಕ್‌ ಮಾಹಿತಿ ರವಾನಿಸಲಾಗಿದೆ. ಸ್ಥಳೀಯ ಆಡಳಿತದಲ್ಲಿ ಲೇಔಟ್‌ ನಕ್ಷೆ ಅನುಮೋದನೆ ಪಡೆಯುವಾಗಲೇ ಸುಂಕ ಪಡೆಯಬೇಕು. ಇದಾಗಿದೆಯೋ ಇಲ್ವೊ? ಅಂತ ಕಾರ್ಮಿಕ ಇಲಾಖೆ ಅಧಿಕಾರಿಗಳು ಅಭಿಯಾನದಲ್ಲಿ ಜಿಲ್ಲೆಯ 101 ಗ್ರಾಪಂಗಳಲ್ಲಿ ಸಮಗ್ರವಾಗಿ ಪರಿಶೀಲನೆ ನಡೆಸಿದ್ದಾರೆ.
ಜನವರಿಯಿಂದ ಜಿಎಸ್‌ಟಿ ಏರಿಕೆ ಸಾಧ್ಯತೆ: ದುಬಾರಿಯಾಗಲಿವೆ ಬಟ್ಟೆ, ಚಪ್ಪಲಿಗಳು
6 ತಿಂಗಳು ಜೈಲು ಶಿಕ್ಷೆ, ದಂಡ
ನಿರ್ಮಾಣದಾರರು ಸ್ವ-ಇಚ್ಚೆಯಿಂದ ಅಥವಾ ಉದ್ದೇಶಪೂರ್ವಕವಾಗಿ ಸುಂಕ ಪಾವತಿಸಲು ತಪ್ಪಿಸಿಕೊಂಡಲ್ಲಿ ಸುಂಕ ಕಾಯ್ದೆ-1996 ಕಲಂ12(2)ರಡಿ 6 ತಿಂಗಳವರೆಗೂ ಸೆರೆಮನೆ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.

62 ಮಂದಿಗೆ ನೋಟಿಸ್‌

ಗ್ರಾಮಾಂತರ ಜಿಲ್ಲೆಯಲ್ಲಿ ಸುಂಕ ಪಾವತಿಸದ 62 ಮಂದಿ ಖಾಸಾಗಿ ನಿರ್ಮಾಣದಾರರಿಗೆ ತಿಳಿವಳಿಕೆ ನೋಟಿಸ್‌ ನೀಡಿ ಸುಂಕದ ಮಹತ್ವವನ್ನು ಸಾರಲಾಗಿದೆ.

ಅಭಿಯಾನದಲ್ಲಿ ಜಿಲ್ಲೆಯ 101 ಗ್ರಾಪಂ, ಪುರಸಭೆ, ನಗರಸಭೆಗಳಿಗೆ ಭೇಟಿ ನೀಡಿ ಸುಂಕ ಸಂಗ್ರಹದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ 62 ಮಂದಿ ಖಾಸಗಿದಾರರಿಗೆ ನೋಟಿಸ್‌ ಮೂಲಕ ತಿಳಿವಳಿಕೆ ನೀಡಲಾಗಿದೆ.
ನಾಗೇಂದ್ರ, ಜಿಲ್ಲಾಕಾರ್ಮಿಕ ಕಲ್ಯಾಣಾಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ



Read more