Source : PTI
ಮುಂಬಯಿ: ನವಿ ಮುಂಬೈನ ಟುರ್ಬೆ ಎಂಐಡಿಸಿ ಏರಿಯಾದಲ್ಲಿರುವ ಶೋರೂಮ್ನಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಆಗಿದ್ದು, ಸುಮಾರು 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟುಕರಕಲಾಗಿವೆ.
ಅವಘಡದಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಈ ಶೋರೂಂನಲ್ಲಿಯೇ ಕಾರುಗಳನ್ನು ಪಾರ್ಕ್ ಮಾಡಲಾದ ಗೋಡೌನ್ ಕೂಡ ಇತ್ತು. ಇಂದು ಮುಂಜಾನೆ 5.30ರಹೊತ್ತಿಗೆ ಬೆಂಕಿ ಬಿದ್ದಿದೆ ಎಂದು ಎಂಐಡಿಸಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಕಿಯ ತೀವ್ರತೆ ಅತಿಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. . ಒಟ್ಟು 10 ಫೈರ್ ಫೈಟ್ ಟ್ರಕ್ಗಳನ್ನು ತರಲಾಗಿತ್ತು. ಎಲ್ಲ ಸೇರಿ ಹೋರಾಟ ಮಾಡಿದರೂ ಬೆಂಕಿ ನಂದಿಸಲು 6ಗಂಟೆಗಳ ಕಾಲ ಬೇಕಾಯಿತು ಎಂದು ವರದಿಯಾಗಿದೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ತುರ್ಭೆ ಪೊಲೀಸ್ ಠಾಣೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಬೆಂಕಿಯ ತೀವ್ರತೆಗೆ ಶೋರೂಂ ಒಳಗೆ ಇದ್ದ ಎಲ್ಲ ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ.