ಬೆಳಗ್ಗೆ ಅರುಣ್ ಸಿಂಗ್ ನೇತೃತ್ವದಲ್ಲಿ ಪಕ್ಷದ ಪ್ರಭಾರಿಗಳು, ಸಹಪ್ರಭಾರಿಗಳ ಸಭೆಯಲ್ಲಿ 2023ರ ವಿಧಾನಸಭೆ ಮಿಷನ್- 150 ಘೋಷಣೆಯೊಂದಿಗೆ ಚುನಾವಣೆಗೆ ಸಜ್ಜುಗೊಳಿಸಲು ಯೋಜನೆ, ತಂತ್ರಗಳ ಬಗೆಗೆ ಕಾರ್ಯಕರ್ತರಿಗೆ ಸಲಹೆ, ಸೂಚನೆ ನೀಡಲಾಯಿತು. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸಲು ಮತ್ತು ಜನರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವಂತೆ ನಾಯಕರು ನಿರ್ದೇಶನ ನೀಡಿದರು.
ಗೈರು ಚರ್ಚೆಗೆ ಗ್ರಾಸ
ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಾತಿ ಎದ್ದು ಕಾಣುತ್ತಿತ್ತು. ಪರಿಷತ್ ಕ್ಷೇತ್ರದ ಫಲಿತಾಂಶ ಕುರಿತು ಪ್ರಮುಖ ಚರ್ಚೆ ನಡೆಯಲಿದೆ ಎಂದು ಪಕ್ಷದ ಪ್ರಮುಖರು ಹೇಳಿಕೊಂಡಿದ್ದರು. ಏತನ್ಮಧ್ಯೆ ಜಾರಕಿಹೊಳಿ ಬ್ರದರ್ಸ್ ಹಾಗೂ ಮಾಜಿ ಸಿಎಂ ಬಿಎಸ್‌ವೈ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರರ ಗೈರು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಪರಿಷತ್ ಚುನಾವಣೆಯಲ್ಲಿ ಪರಾಜಿತಗೊಂಡ ಮಹಾಂತೇಶ ಕವಟಗಿಮಠ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ರನ್ನು ವೈಯಕ್ತಿಕವಾಗಿ ಭೇಟಿಯಾಗಿ ಚರ್ಚಿಸಿದ್ದು, ಪಕ್ಷದ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆನ್ನಲಾಗಿದೆ. ವ್ಯಾಪಕ ಚರ್ಚೆಗೊಳಗಾಗುತ್ತಿರುವ ಸಿಎಂ ಬದಲಾವಣೆ ಮತ್ತು ಸಂಪುಟ ವಿಸ್ತರಣೆ ಬಗೆಗೆ ಕಾರ‍್ಯಕಾರಿಣಿಯಲ್ಲಿ ನಾಯಕರು ಸ್ಪಷ್ಟನೆ ನೀಡುವಂತೆ ಕೆಲವು ಮುಖಂಡರು ಪ್ರಸ್ತಾಪಿಸಲು ಸಜ್ಜಗೊಂಡಿದ್ದರು. ಇದನ್ನು ಅರಿತ ಸ್ಥಳೀಯ ನಾಯಕರು, ಅಂಥವರನ್ನು ಕರೆದು, ಅನಗತ್ಯ ವಿಷಯ ಪ್ರಸ್ತಾಪಿಸದಂತೆ ತಾಕೀತು ಮಾಡಿದರು ಎನ್ನಲಾಗಿದೆ.
ಕಾರ‍್ಯಕಾರಿಣಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮೋದಿ ಸರಕಾರದ ಸಾಧನೆಗಳ ದೊಡ್ಡ ಪಟ್ಟಿಯನ್ನೇ ಬಿಚ್ಚಿಟ್ಟರು. ಕೊರೊನಾ ನಿಯಂತ್ರಣ ಮತ್ತು ಲಸಿಕೆ ವಿತರಣೆಯಲ್ಲಿ ಮೋದಿಯವರ ದಿಟ್ಟ ನಿರ್ಧಾರಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ತಕ್ತಪಡಿಸಿದೆ ಎಂದು ಬಣ್ಣಿಸಿದರು. ಮತಾಂತರ ನಿಷೇಧ ವಿಧೇಯಕ ಮಂಡಿಸಿದ್ದಕ್ಕೆ ಪಕ್ಷವು ರಾಜ್ಯ ಸರಕಾರಕ್ಕೆ ಅಭಿನಂದಿಸುವ ನಿರ್ಣಯ ಕೈಗೊಂಡಿತು.
ಸದಸ್ಯತ್ವ ಇದೆ.. ಇಲ್ಲ..!
ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಕಾರ‍್ಯಕಾರಿಣಿ ಸದಸ್ಯತ್ವ ಹೊಂದಿಲ್ಲ. ಹಾಗಾಗಿ ಸಭೆಗೆ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರೆ, ಅವರಿಬ್ಬರೂ ಕಾರ‍್ಯಕಾರಿಣಿ ಸದಸ್ಯರಿದ್ದು, ರಾಜ್ಯಾಧ್ಯಕ್ಷರ ಅನುಮತಿ ಪಡೆದು ಸಭೆಗೆ ಗೈರಾಗಿದ್ದಾರೆ ಎಂದು ಪಕ್ಷದ ವಕ್ತಾರ ಪಿ.ರಾಜೀವ್ ಸ್ಪಷ್ಟನೆ ನೀಡಿದರು. ತದ್ವಿರುದ್ಧದ ಈ ಹೇಳಿಕೆಗಳು ಕಾರ್ಯಕರ್ತರಲ್ಲಿ ಚರ್ಚೆಗೆ ಗ್ರಾಸವಾದವು.