
ಸಾಂದರ್ಭಿಕ ಚಿತ್ರ
ನವದೆಹಲಿ: ಮೊದಲ ಡೋಸ್ ಗೆ ಅರ್ಹರಾಗಿರುವ ಎಲ್ಲಾ ಜನರಿಗೆ ತ್ವರಿತಗತಿಯಲ್ಲಿ ಕೋವಿಡ್ -19 ಲಸಿಕೆ ನೀಡಿಕೆಯನ್ನು ವೇಗಗೊಳಿಸುವಂತೆ ಹಾಗೂ ಎರಡನೇ ಡೋಸ್ ಹಾಕಿಸಿಕೊಳ್ಳದೆ ಬಾಕಿ ಇರುವವರಿಗೆ ಎರಡನೇ ಡೋಸ್ ಗೆ ಖಾತ್ರಿಪಡಿಸುವಂತೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ.
ಸಾರ್ವಜನಿಕ ಆರೋಗ್ಯ ಮುಂಜಾಗ್ರತಾ ಕ್ರಮವಾಗಿ ಸೋಂಕಿತ ಪ್ರಕರಣಗಳನ್ನು ಪ್ರಾಮಾಣಿಕ ರೀತಿಯಲ್ಲಿ ಗುರುತಿಸಲು ಪರೀಕ್ಷೆ ಹೆಚ್ಚಿಸುವಂತೆ, ಕಡಿಮೆ ಪರೀಕ್ಷೆಯಿಂದಾಗಿ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ ಕಂಡುಬರದಂತೆ ಖಾತ್ರಿಪಡಿಸುವಂತೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಸಲಹೆ ನೀಡಿದೆ.
ಇದನ್ನೂ ಓದಿ: 15-18 ವರ್ಷದವರಿಗೆ ಸದ್ಯ ಕೋವಾಕ್ಸಿನ್ ಮಾತ್ರ, 2ನೇ ಡೋಸ್ ಆಗಿ 39 ವಾರದ ನಂತರ ಬೂಸ್ಟರ್ ಡೋಸ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಹೇಳಿಕೆ ಪ್ರಕಾರ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಪರಿಣಾಮಕಾರಿ ಜಾರಿಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಚುನಾವಣೆ ನಡೆಯಲಿರುವ ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ಮತ್ತು ಪಂಜಾಬ್ ನ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕೋವಿಡ್ ಹಾಗೂ ಲಸಿಕೆ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ.
ಉತ್ತರಾಖಂಡ್ ಮತ್ತು ಗೋವಾದಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕಾಕರಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದರೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಮಣಿಪುರದಲ್ಲಿ ಕೋವಿಡ್ 19 ಲಸಿಕಾಕರಣದ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ.