Karnataka news paper

ಲಾಡ್ಜ್‌ ವಾಸ್ತವ್ಯಕ್ಕೆ ಶೇ.50ರ ನಿರ್ಬಂಧ ಇಲ್ಲ: ಹೋಟೆಲ್ ಸರ್ವೀಸ್ ಏರಿಯಾಗೆ ಮಾತ್ರ ನಿಯಮ ಅನ್ವಯ..


ಹೈಲೈಟ್ಸ್‌:

  • ರಾಜ್ಯ ಸರಕಾರದಿಂದ ಸ್ಪಷ್ಟೀಕರಣ ಆದೇಶ
  • ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರಿಂದ ಸ್ಪಷ್ಟೀಕರಣ
  • ಡಿಸೆಂಬರ್‌ 30 ರಿಂದ 2022ರ ಜನವರಿ 2 ರ ವರೆಗೆ ನಿಯಮ ಅನ್ವಯ

ಬೆಂಗಳೂರು: ಕೋವಿಡ್‌ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಹೊರಡಿಸಿರುವ ನಿರ್ಬಂಧ ಕ್ರಮಗಳಡಿ 2021 ಡಿಸೆಂಬರ್‌ 30 ರಿಂದ 2022ರ ಜನವರಿ 2 ರ ವರೆಗೆ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಬಳಕೆ ನಿಯಮ ಅನ್ವಯಿಸುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಮಂಗಳವಾರ ಸ್ಪಷ್ಟೀಕರಣ ನೀಡಿದ್ದಾರೆ. ಡಿಸೆಂಬರ್ 30 ರಿಂದ ಜನವರಿ 2ರ ವರಗೆ ರೆಸ್ಟೋರೆಂಟ್‌, ಹೋಟೆಲ್‌, ಪಬ್‌, ಕ್ಲಬ್‌ಗಳು ಕೋವಿಡ್‌ ನಿಯಂತ್ರಣಕ್ಕೆ ಪೂರಕವಾದ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟಂತೆ ಆಸನ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ ಹೋಟೆಲ್‌ಗಳ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಯಾವುದೇ ನಿರ್ಬಂಧವಿಲ್ಲದ ಕಾರಣ ಇದು ಅನ್ವಯಿಸುವುದಿಲ್ಲ.

ನೈಟ್‌ ಕರ್ಫ್ಯೂ: ಸರ್ಕಾರದ ಆದೇಶಕ್ಕೆ ವ್ಯಕ್ತವಾಗುತ್ತಿದೆ ವಿರೋಧ!
ಹೋಟೆಲ್‌ಗಳು ಅನುಮೋದಿತ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಠಡಿಗಳಲ್ಲಿ ಆತಿಥ್ಯ ಕಲ್ಪಿಸಬಹುದು. ಹೋಟೆಲ್‌ಗಳಲ್ಲಿ ಗ್ರಾಹಕರು ಆಹಾರ, ಪಾನೀಯ ಬಡಿಸುವಂತಹ ಸ್ಥಳಗಳಿಗೆ ಮಾತ್ರ ಶೇ. 50ರಷ್ಟು ನಿರ್ಬಂಧ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಕೋವ್ಯಾಕ್ಸಿನ ಬಳಕೆ ಬಗ್ಗೆ ಸೂಚನೆ: ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ ಬಾಟಲಿ ತೆರೆದು ನಾಲ್ಕು ಗಂಟೆಯೊಳಗೆ ಬಳಸಬೇಕೆಂದು ರಾಜ್ಯ ಸರಕಾರ ಸೂಚನೆ ನೀಡಿದೆ.

ಸರಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ತೆರೆದ ವಯಲ್‌ ನಾಲ್ಕು ಗಂಟೆಗೂ ಹೆಚ್ಚಿನ ಅವಧಿಯಾಗಿದ್ದರೆ ಅದನ್ನು ಬಳಸುವುದರಿಂದ ಲಸಿಕೆ ಪರಿಣಾಮ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಒಮ್ಮೆ ತೆರೆದ ಲಸಿಕೆಯ ವಯಲ್‌ ಮರು ಬಳಕೆ ಮಾಡಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನೈಟ್ ಕರ್ಫ್ಯೂ ಹೇರಿಕೆಗೆ ಕ್ಷಣಗಣನೆ..! ನಿರ್ಬಂಧ ಸಡಿಲಿಕೆಗೆ ಉದ್ಯಮಿಗಳಿಂದ ತೀವ್ರಗೊಂಡ ಒತ್ತಡ..!
ಈ ಹಿಂದೆ ಕೋವ್ಯಾಕ್ಸಿನ್‌ ತಯಾರಕ ಭಾರತ್‌ ಬಯೋಟೆಕ್‌, ಓಪನ್‌ ಬಾಟಲ್‌ ಸ್ಥಿರತೆ ಹಾಗೂ ಬಳಕೆ ಕುರಿತು ಮಾರ್ಗಸೂಚಿ ಪ್ರಕಟಿಸಿತ್ತು. ಆ ಪ್ರಕಾರ, ಒಮ್ಮೆ ತೆರೆದ ಕೋವ್ಯಾಕ್ಸಿನ್‌ ಬಾಟಲಿಗಳನ್ನು 2 ರಿಂದ 8 ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹಿಸಿದರೆ, 28 ದಿನಗಳವರೆಗೆ ಬಳಸಬಹುದು ಎಂಬ ಮಾಹಿತಿ ಇತ್ತು. ಭಾರತ್‌ ಬಯೋಟೆಕ್‌ ನೀಡಿದ್ದ ಮಾರ್ಗದರ್ಶಿ ಸೂತ್ರದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಇಲಾಖೆಯ ಸ್ಪಷ್ಟನೆ ಕೇಳಿತ್ತು. ಲಸಿಕೆಯ ಸೀಸೆಯ ಮೇಲೆ ನಿಗಾ ವಹಿಸದಿದ್ದರೆ ಗುಣಮಟ್ಟ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ರಾಜ್ಯ ಸರಕಾರ ಸುತ್ತೋಲೆಯಲ್ಲಿ ಸೂಚನೆ ನೀಡಿದೆ.

ಸಚಿವ ಆನಂದ್‌ ಸಿಂಗ್‌ಗೆ ನೈಟ್‌ ಕರ್ಫ್ಯೂ ಬಗ್ಗೆ ಗೊತ್ತೇ ಇಲ್ಲ..!

ನೈಟ್‌ ಕರ್ಫ್ಯೂ ಜಾರಿಯಾಗಿದೆಯಾ ಎಂಬುದು ನನಗೆ ಗೊತ್ತೇ ಇಲ್ಲ. ನಾನು ರಾತ್ರಿ 8 ಗಂಟೆಯ ಮೇಲೆ ಹೊರಗೆ ಹೋಗುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಬಿ. ಎಸ್‌. ಆನಂದ್‌ಸಿಂಗ್‌ ಹೇಳಿದರು.

ಕೊಪ್ಪಳ ಜಿಲ್ಲೆ ಮುನಿರಾಬಾದಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಓಮಿಕ್ರಾನ್‌, ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕೈಗೊಳ್ಳದಿದ್ದರೆ ಸಾವು, ನೋವು ಸಂಭವಿಸುತ್ತವೆ. ನಂತರದಲ್ಲಿ ಜನರೇ ಕೇಳುತ್ತಾರೆ. ಜೀವಕ್ಕಿಂತ ಯಾವುದು ಹೆಚ್ಚಲ್ಲ. ಎಲ್ಲರೂ ಸಹಕಾರ ನೀಡಬೇಕು. ಮುಂಜಾಗ್ರತೆ ಕ್ರಮದಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬಹುದಾಗಿದೆ’ ಎಂದರು.

ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ, ಸಾರ್ವಜನಿಕರು ಸಹಕರಿಸಬೇಕು: ಆರಗ ಜ್ಞಾನೇಂದ್ರ



Read more