ಹೈಲೈಟ್ಸ್:
- ವಿರಾಟ್ ಕೊಹ್ಲಿ ಅವರಿಂದ ಒಡಿಐ ತಂಡದ ನಾಯಕತ್ವ ಕಸಿದ ಬಿಸಿಸಿಐ.
- ರೋಹಿತ್ ಶರ್ಮಾಗೆ ಟಿ20 ಮತ್ತು ಒಡಿಐ ತಂಡದ ನಾಯಕತ್ವ ಕೊಡಲಾಗಿದೆ.
- ಆಯ್ಕೆ ಸಮಿತಿ ತೆಗೆದುಕೊಂಡ ಮಹತ್ವದ ನಿರ್ಧಾರವನ್ನು ಸಮರ್ಥಿಸಿದ ಸೌರವ್.
ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದ, ಟಿ20 ಮತ್ತು ಒಡಿಐ ತಂಡಗಳಿಗೆ ರೋಹಿತ್ ನೂತನ ಕ್ಯಾಪ್ಟನ್ ಆಗಿದ್ದಾರೆ. ಟೀಮ್ ಇಂಡಿಯಾ ನಾಯಕತ್ವದ ಹಂಚಿಕೆ ಆಗಿರುವ ಬಗ್ಗೆ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೌರವ್ ಗಂಗೂಲಿ ಈ ನಿರ್ಧಾರ ಅತ್ಯುತ್ತಮವಾಗಿದೆ ಎಂದಿದ್ದಾರೆ. ಅಂದಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ಅಜಿಂಕ್ಯ ರಹಾನೆ ಸ್ಥಾನದಲ್ಲಿ ರೋಹಿತ್‌ಗೆ ಉಪನಾಯಕನ ಪಟ್ಟ ಸಿಕ್ಕಿದೆ.
ಈ ನಡುವೆ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ಈ ನಿರ್ಧಾರದ ಬಗ್ಗೆ ಕಿಡಿ ಕಾರಿದ್ದರು. ಕೊಹ್ಲಿಯನ್ನು ಒಡಿಐ ಕ್ಯಾಪ್ಟನ್ಸಿ ಬಿಡುವಂತೆ ಮಾಡಿರುವುದರಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ದ್ರಾವಿಡ್ ಅಪ್ಪಟ ಜಂಟಲ್ಮನ್’, ಇದಕ್ಕೆ ಇತ್ತೀಚಿನ ಉದಾಹರಣೆ ಕೊಟ್ಟ ಗಂಗೂಲಿ!
“ಖಂಡಿತಾ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಅತ್ಯುತ್ತಮ ನಾಯಕ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಸೆಲೆಕ್ಟರ್ಸ್ ರೋಹಿತ್‌ಗೆ ಬೆಂಬಲ ಸೂಚಿಸಿದ್ದಾರೆ. ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಮಾರ್ಗವನ್ನು ರೋಹಿತ್ ಕಂಡುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ,” ಎಂದು ನ್ಯೂಸ್ 18 ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸೌರವ್ ಹೇಳಿದ್ದಾರೆ.
“ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ 5 ಬಾರಿ ಟ್ರೋಫಿ ಗೆದ್ದುಕೊಟ್ಟ ಅನುಭವ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಇಲ್ಲದೇ ಇದ್ದರೂ ಕೂಡ ಭಾರತ ತಂಡವನ್ನು ಮುನ್ನಡೆಸಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಕೊಹ್ಲಿ ಇಲ್ಲದೇ ಇದ್ದರು ಭಾರತ ತಂಡ ಟ್ರೋಫಿ ಗೆದ್ದಿರುವುದು ತಂಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ದೊಡ್ಡ ಟೂರ್ನಿಗಳಲ್ಲಿ ಯಶಸ್ಸು ಗಳಿಸಿದ ಅನುಭವ ರೋಹಿತ್ ಅವರಲ್ಲಿದೆ. ಜೊತೆಗೆ ಅತ್ಯುತ್ತಮ ತಂಡ ಅವರೊಟ್ಟಿಗಿದೆ. ಹೀಗಾಗಿ ಐಸಿಸಿ ಆಯೋಜನೆಯ ದೊಡ್ಡ ಟೂರ್ನಿಗಳಲ್ಲಿ ತಂಡಕ್ಕೆ ಜಯ ತಂದುಕೊಡುತ್ತಾರೆ ಎಂಬ ಆಶಯವಿದೆ,” ಎಂದು ಸೌರವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಭಾರತದ ಡ್ರೆಸ್ಸಿಂಗ್ ರೂಮ್ ಇಬ್ಭಾಗವಾಗದಿರಲಿ’, ಎಚ್ಚರಿಸಿದ ಬ್ರಾಡ್ ಹಾಗ್!
ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಮೂಲಕ ಟೀಮ್ ಇಂಡಿಯಾದ ಒಡಿಐ ನಾಯಕತ್ವವನ್ನು ರೋಹಿತ್ ಪೂರ್ಣ ಪ್ರಮಾಣದಲ್ಲಿ ವಹಿಸಿಕೊಳ್ಳಲಿದ್ದಾರೆ. ಭಾರತದ ಈ ಪ್ರವಾಸಕ್ಕೆ ಒಡಿಐ ತಂಡ ಪ್ರಕಟವಾಗುವುದು ಬಾಕಿಯಿದೆ. ಇನ್ನು ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್ 3-0 ಅಂತರದ ವೈಟ್‌ವಾಷ್ ಜಯ ತಂದುಕೊಟ್ಟಿದ್ದರು.
ಭಾರತ-ದಕ್ಷಿಣ ಆಫ್ರಿಕಾ ನಡುವಣ ಏಕದಿನ ಕ್ರಿಕೆಟ್ ಸರಣಿ ವೇಳಾಪಟ್ಟಿ.
- ಪ್ರಥಮ ಒಡಿಐ: ಜನವರಿ 19, ಪಾರ್ಲ್
- ದ್ವಿತೀಯ ಒಡಿಐ: ಜನವರಿ 21, ಪಾರ್ಲ್
- ತೃತೀಯ ಒಡಿಐ: ಜನವರಿ 23, ಕೇಪ್ ಟೌನ್