Karnataka news paper

ಜ.3ರಿಂದ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ: ಪೂರ್ವಸಿದ್ಧತೆಗೆ ಸರಕಾರದ ಸೂಚನೆ!


ಹೈಲೈಟ್ಸ್‌:

  • ಜ.3ರಿಂದ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ
  • 15-18 ವಯೋಮಿತಿಯ ವಿದ್ಯಾರ್ಥಿಗಳಿಗೆ ಲಸಿಕೆ
  • ಸಿದ್ಧತೆಗೆ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆ

ಹಾಸನ: ರಾಜ್ಯಾದ್ಯಂತ ಮುಂಬರುವ ಜ.3ರಿಂದ 15-18 ವಯೋಮಿತಿಯ ವಿದ್ಯಾರ್ಥಿಗಳಿಗೆ ಕೋವಿಡ್‌-19 ಲಸಿಕೆ ನೀಡಲಾಗುತ್ತಿದ್ದು, ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಡಿಎಚ್‌ಒ, ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

ಲಸಿಕೆ ಹಾಕುವ ಕುರಿತು ಜಿಲ್ಲಾಮಟ್ಟದಲ್ಲಿವ್ಯವಸ್ಥಿತ ಪೂರ್ವ ತಯಾರಿ ನಡೆಸಿ, ಪ್ರತ್ಯೇಕ ಲಸಿಕಾ ತಂಡಗಳನ್ನು ರಚಿಸಿ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಿ ಎಂದು ವಂದಿತಾ ಶರ್ಮಾ ಹೇಳಿದರು.

ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಬೇಕು. ಹಾಲಿ ಲಭ್ಯ ಇರುವ ಲಸಿಕೆ ಬಳಸಿಕೊಳ್ಳಬೇಕು, ಪ್ರತಿ ಶಾಲೆ ಹಾಗೂ ಪೋಷಕರಿಗೆ ಮಾಹಿತಿ ನೀಡಬೇಕು ಎಂದರು.

2007ರ ಜನವರಿ 1ರ ನಂತರ ಜನಿಸಿದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕಿದೆ. ದಾಖಲೆಗಾಗಿ ಆಧಾರ್‌ ಕಾರ್ಡ್‌ ಅಥವಾ ಶಾಲಾ ಗುರುತಿನ ಚೀಟಿ ಬಳಸಬಹುದು. ಒಟಿಪಿ ಇಲ್ಲದೆಯೂ ನೋಂದಣಿಗೆ ಅವಕಾಶ ಇದೆ. ಆದರೆ, ಮೊಬೈಲ್‌ ಸಂಖ್ಯೆ ನಮೂದಿಸುವುದು ಅಗತ್ಯ. ಆನ್‌ಲೈನ್‌ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಈ ಬಗ್ಗೆ ಸೂಕ್ತ ಹಾಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು.

ಜ.3ರಂದು ಸಾಂಕೇತಿಕವಾಗಿ ಸಮಾರಂಭ ನಡೆಸಿ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿ ಎಂದರು. ಇದೇ ರೀತಿ ಕೋವಿಡ್‌ ಲಸಿಕೆ ಪಡೆದ 9 ತಿಂಗಳು ತುಂಬಿರುವ ಮುಂಚೂಣಿ ಕೋವಿಡ್‌ ಕಾರ್ಯಕರ್ತರು ಹಾಗೂ 60 ವರ್ಷ ತುಂಬಿರುವ ಕೋಮಾರ್ಬಿಡಿಟಿ ಇರುವವರನ್ನು ಗುರುತಿಸಿ ಜ.10 ರಿಂದ ಬೂಸ್ಟರ್‌ ಡೋಸ್‌ ನೀಡಬೇಕಿದೆ. ಅದಕ್ಕೂ ಸಿದ್ಧತೆ ಕೈಗೊಳ್ಳಿ ಎಂದರು.

ಆರೋಗ್ಯ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಅರುಂಧತಿ, ಶಿಕ್ಷಣ ಇಲಾಖೆ ಆಯುಕ್ತರಾದ ವಿಶಾಲ್‌ ಮತ್ತಿತರರು ಹಾಜರಿದ್ದರು.

ಜಿಲ್ಲಾ ಮಟ್ಟದಲ್ಲಿ ಸಿದ್ಧತೆ:
ವಿಡಿಯೋ ಸಂವಾದದ ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಜಿಲ್ಲೆಯಲ್ಲಿ 15-18 ವರ್ಷದೊಳಗಿನ 76,172 ವಿದ್ಯಾರ್ಥಿಗಳಿಗೆ ಜ.3ರಿಂದ ಲಸಿಕೆ ನೀಡಬೇಕಾಗಿದೆ. ಇದನ್ನು ಆಂದೋಲನದ ರೂಪದಲ್ಲಿ ಯಶಸ್ವಿಗೊಳಿಸಿ ಎಂದರು.

ಎಲ್ಲಾ ಶಾಲೆಗಳಿಗೆ ಮೊದಲೇ ಲಸಿಕಾ ದಿನಾಂಕ ಮತ್ತು ಸಮಯ ನಿಗದಿಪಡಿಸಿ ಮಾಹಿತಿ ನೀಡಿ, ಪ್ರತಿ ಶಾಲೆಗಳಿಗೆ ಸಿಆರ್‌ಪಿ, ಬಿಆರ್‌ಪಿ ಹಾಗೂ ಶಿಕ್ಷಕರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈವರೆಗೆ ಶೇ. 98.38 ಮಂದಿ ಮೊದಲ ಡೋಸ್‌ ಹಾಗೂ ಶೇ.82ರಷ್ಟು ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಉಳಿದವರಿಗೆ ಆದಷ್ಟು ಶೀಘ್ರ ಲಸಿಕೆ ನೀಡಿ ಶೇ.100ರಷ್ಟು ಗುರಿ ಸಾಧನೆ ಮಾಡಿ ಎಂದು ಸೂಚನೆ ನೀಡಿದರು.

ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿ ಬಾಕಿ ಉಳಿದಿರುವ ಎಲ್ಲರಿಗೂ ಲಸಿಕೆ ನೀಡಲು ಸೂಚಿಸಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ಹಾಕಿ ಎಂದು ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸಬೇಕಿದೆ ಎಂದರು.

ಜಿಲ್ಲಾಹಾಗೂ ತಾಲೂಕು ಆಸ್ಪತ್ರೆ ಸಂಪರ್ಕ ಮಾಡಿ ಹೆಚ್ಚಿನ ಲಸಿಕಾ ಸಿಬ್ಬಂದಿ ಪಡೆದು. ಡಿ 29 ಹಾಗೂ 30 ರಂದು ವಿಶೇಷ ಅಭಿಯಾನ ನಡೆಸಿ 50 ಸಾವಿರ ಲಸಿಕಾ ಗುರಿ ತಲುಪಬೇಕು ಎಂದರು.

ಗ್ರಾಪಂ ಹಂತದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ನಡೆಸಿ ಗ್ರಾಮವಾರು ಲಸಿಕೆ ಪಡೆಯದೆ ಇರುವವರನ್ನು ಗುರುತಿಸಿ ವರದಿ ನೀಡಿ, ಅದೇ ರೀತಿ ಜ.3ರಿಂದ ನಡೆಯುವ 15-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ನೀಡುವ ಲಸಿಕೆಗೂ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದರು.

ಜಿಪಂ ಸಿಇಒ ಕಾಂತರಾಜ್‌, ಎಸಿ ಬಿ.ಎ.ಜಗದೀಶ್‌, ಡಿಎಚ್‌ಒ ಡಾ.ಸತೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಕಾಶ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹದೇವಯ್ಯ, ಆರ್‌.ಸಿ.ಎಚ್‌ ಅಧಿಕಾರಿ ಡಾ.ಕಾಂತರಾಜ್‌, ತಹಸೀಲ್ದಾರ್‌ ನಟೇಶ್‌ ಮತ್ತಿತರರು ಹಾಜರಿದ್ದರು.



Read more