Karnataka news paper

ಕರ್ನಾಟಕ ಬಂದ್ ವಾಟಾಳ್ ಅವರ ಏಕಪಕ್ಷೀಯ ನಿಲುವು, ನಮ್ಮ ಬೆಂಬಲವಿಲ್ಲ: ಅಶೋಕ‌ ಚಂದರಗಿ



ಕರ್ನಾಟಕ ಬಂದ್ ವಾಟಾಳ್ ಅವರ ಏಕಪಕ್ಷೀಯ ನಿಲುವು, ನಮ್ಮ ಬೆಂಬಲವಿಲ್ಲ: ಅಶೋಕ‌ ಚಂದರಗಿ

: ಜಿಲ್ಲೆಯಾದ್ಯಂತ ಹಾಗೂ ಬೆಳಗಾವಿ ಗಡಿ ಭಾಗ ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಮೇಲೆ ಪುಂಡಾಟಿಕೆ ನಡೆಸುತ್ತಿರುವ ಸಂಘಟ‌ನೆ ನಿಷೇಧ ಮಾಡಲು ನಮ್ಮ ಆಗ್ರಹವಿದೆ. ಆದರೆ ಕರ್ನಾಟಕ ಬಂದ್‌ಗೆ ಡಿಸೆಂಬರ್ 31 ರಂದು ಕರೆ ನೀಡಿರುವುದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ‌ಅಶೋಕ‌ ಚಂದರಗಿ ಹೇಳಿದರು.

ಮಂಗಳವಾರ ಬೆಳಗಾವಿ ನಗರದ ಪ್ರವಾಸಿ‌ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ಮತ್ತು ಕನ್ನಡಿಗರ ಭಾಷೆ, ನೆಲಕ್ಕೆ ಅವಮಾನ ಮಾಡುತ್ತಾ ಪುಂಡಾಟ ಮೆರೆಯುತ್ತಿರುವ ಬೆಳಗಾವಿಯ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧ ಮಾಡಬೇಕು. ಡಿಸೆಂಬರ್ 31 ರ ಒಳಗಾಗಿ ನಿಷೇಧಿಸಬೇಕೆಂದು ಬೆಂಗಳೂರಿನ ಕೆಲ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ‌.

ಆದರೆ ಇದಕ್ಕೆ ಬೆಳಗಾವಿಯಲ್ಲಿರುವ ಕನ್ನಡ ಪರ ಸಂಘಟ‌ನೆಗಳು ಬೆಂಬಲಿಸುವುದಿಲ್ಲ ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅದಕ್ಕಾಗಿ ಮಂಗಳವಾರ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳು ಸೇರಿದಂತೆ ನಗರದ ಇನ್ನಿತರ ಸಂಘಟನೆಗಳ ಕೂಡಿ ಈ ಬಗ್ಗೆ ‌ನಾವೆಲ್ಲರೂ ಚರ್ಚೆ ಮಾಡಿದ್ದೇವೆ ಎಂದರು ಚಂದರಗಿ ಹೇಳಿದರು.

ಡಿಸೆಂಬರ್ 31ರ ಕರ್ನಾಟಕ ಬಂದ್‌ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು. ಇದೇ ವೇಳೆ ಬೆಂಗಳೂರಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ‌ಕುಳಿತುಕೊಂಡು ತೆಗೆದುಕೊಂಡ ನಿರ್ಧಾರ ಸರಿಯಲ್ಲ. ಈ ನಿರ್ಧಾರವನ್ನು ಕರ್ನಾಟಕದ ಯಾವುದೇ ಕನ್ನಡ ಪರ ಸಂಘಟನೆಯ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದು ಅವರು ಕೈಗೊಂಡ ನಿರ್ಣಯ. ವಾಟಾಳ್ ಅವರ ಬಗ್ಗೆ ಗೌರವ ಇದೆ. ಆದರೆ ಇತ್ತೀಚೆಗೆ ಅವರ ವರ್ತನೆ ಸರಿ ಎನ್ನಿಸುತ್ತಿಲ್ಲ. ಅವರು ಹೇಳಿದ ಹಾಗೆ ಕರ್ನಾಟಕದ ಜನ ಇರಬೇಕು. ಅವರು ಹೇಳಿದ್ದೇ ವೇದ ವಾಕ್ಯ ಎನ್ನುತ್ತಿರುವುದು ದುರ್ದೈವದ ಸಂಗತಿ ಎಂದು ಅಶೋಕ‌ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಚಳವಳಿಯ ವಾಟಾಳ್ ನಾಗರಾಜ‌ ಅವರು, ತಾವು ಕರೆ ನೀಡಿರುವ ಕರ್ನಾಟಕ‌ ಬಂದ್‌ಗೆ ಬೆಳಗಾವಿಯ 60 ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು. ಇದು ಸರಿಯಲ್ಲ. ವಾಟಾಳ್ ಅವರು ಸುಳ್ಳು ಹೇಳಿದ್ದಾರೆ. ಬೆಳಗಾವಿ ಜನರ ವಿಶ್ವಾಸ ತೆಗೆದುಕೊಳ್ಳಲಾರದೆ ಕರ್ನಾಟಕ ‌ಬಂದ್ ಎಂದರೆ ಹೇಗೆ ಎಂದು ಚಂದರಗಿ ಪ್ರಶ್ನಿಸಿದರು.

ಕನ್ನಡಿಗರ ಬೇಡಿಕೆ ಇರುವುದು ಎಂಇಎಸ್ ನಿಷೇಧ ಮಾಡಬೇಕೆಂದು. ಈಗಾಗಲೇ ಸರಕಾರ ಪುಂಡಾಟಿಕೆ ನಡೆಸಿದವರ ಮೇಲೆ ದೇಶದ್ರೋಹ ಕಾಯ್ದೆ ಹಾಕಿರುವುದು ಸ್ವಾಗತ. ಸಿಎಂ ಕಠೋರ ನಿಲುವಿನಿಂದ ಪೊಲೀಸರು ಈ ಕಾಯ್ದೆ ಹಾಕಿದ್ದಾರೆ. ಕಾ‌ನೂನು ಪ್ರಕಾರ ಈ ಸಂಘಟನೆಯನ್ನು ಬೆಳಗಾವಿಯಿಂದ ನಿಷೇಧ ಮಾಡಬೇಕೇ ವಿನಃ ಕರ್ನಾಟಕ ಬಂದ್‌ನಿಂದ ಇದು ಸಾಧ್ಯವಿಲ್ಲ. ಆದ್ದರಿಂದ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದು ಚಂದರಗಿ ಸ್ಪಷ್ಟಪಡಿಸಿದರು.

ಕನ್ನಡ ಹೋರಾಟಗಾರರಾದ ದೀಪಕ ಗುಡಗನಟ್ಟಿ, ಬಾಬು ಸಂಗೋಡಿ, ಮಹಾದೇವ ತಳವಾರ, ಗಣೇಶ ರೋಕಡೆ, ಭಾರತೀಯ ಕೃಷಿಕ ಸಮಾಜದ ಸಿದ್ದಗೌಡ ಮೋದಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Read more