Karnataka news paper

7 ವರ್ಷಗಳಲ್ಲಿ ಬಡಜನತೆಗೆ ನೆರವಾಗುವ ಹಲವು ಆರ್ಥಿಕ ಸುಧಾರಣೆ ತಂದಿದೆ ಕೇಂದ್ರ: ಪ್ರಧಾನಿ ಮೋದಿ


ಹೈಲೈಟ್ಸ್‌:

  • ಬ್ಯಾಂಕಿಂಗ್ ಬಿಕ್ಕಟ್ಟಿನಿಂದ ಪದೇ ಪದೇ ಬಳಲುತ್ತಿರುವ ಬಡ ಜನತೆ
  • ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸಿರುವ ಕೇಂದ್ರ ಸರಕಾರ
  • ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ಹೊಸದಿಲ್ಲಿ: ದೇಶದ ಮಧ್ಯಮ ಮತ್ತು ಬಡ ವರ್ಗದ ಜನತೆ ಬ್ಯಾಂಕಿಂಗ್ ಬಿಕ್ಕಟ್ಟಿನಿಂದ ಪದೇ ಪದೇ ಬಳಲುತ್ತಿದ್ದಾರೆ. ಆದರೆ, ಪ್ರಸ್ತುತ ಭಾರತವು ಈ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ (ಡಿ.12) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ಡೆಪಾಸಿಟರ್ಸ್ ಫಸ್ಟ್: ಗ್ಯಾರಂಟೀಡ್ ಟೈಮ್- ಬೌಂಡ್ ಡೆಪಾಸಿಟ್ ಇನ್ಷೂರೆನ್ಸ್ ಪೇಮೆಂಟ್ ಅಪ್ ಟು ರುಪೀಸ್ 5 ಲ್ಯಾಕ್ಸ್’ (Depositors First: Guaranteed Time-bound Deposit Insurance Payment up to Rs 5 Lakh) ವಿಷಯದ ಕುರಿತು ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಣಕಾಸು ವ್ಯವಸ್ಥೆಯ ಬಲವರ್ಧನೆ ಮಾಡಿದೆ. ಜತೆಗೆ ಬಡ ಮತ್ತು ಮಧ್ಯಮ ವರ್ಗದ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಕಳೆದ 7 ವರ್ಷಗಳಲ್ಲಿ ವಿವಿಧ ಸುಧಾರಣೆಗಳನ್ನು ಪರಿಚಯಿಸಿದೆ. 1 ಲಕ್ಷಕ್ಕೂ ಹೆಚ್ಚು ಠೇವಣಿದಾರ ಹಣ ಹಲವು ವರ್ಷಗಳಿಂದ ಸಿಲುಕಿಕೊಂಡಿತ್ತು. ಇವರೆಲ್ಲರೂ ಕಳೆದ ಕೆಲವೇ ದಿನಗಳಲ್ಲಿ 1300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ವಾಪಸ್ ಪಡೆದಿದ್ದಾರೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.

‘ಬ್ಯಾಂಕ್‌ ಠೇವಣಿ ವಿಮೆ’ ಬಗ್ಗೆ ಇಂದು (ಡಿ.12) ಮಧ್ಯಾಹ್ನ 12ಕ್ಕೆ ಪ್ರಧಾನಿ ಮೋದಿ ಮಾತು!

‘ನಮ್ಮ ದೇಶದಲ್ಲಿ ಸಮಸ್ಯೆಗಳನ್ನು ಚಾಪೆ ಕೆಳಗೆ ಹಾಕಿಕೊಳ್ಳುವ ಮನೋಭಾವ ಹಲವು ವರ್ಷಗಳಿಂದಲೂ ಇದೆ. ನಮ್ಮ ಮಧ್ಯಮ ಮತ್ತು ಬಡ ವರ್ಗವು ಬ್ಯಾಂಕಿಂಗ್ ಬಿಕ್ಕಟ್ಟಿನಿಂದ ಪದೇ ಪದೇ ಬಳಲುತ್ತಿದೆ. ಆದರೆ, ಇಂದಿನ ನವ ಭಾರತವು ಈ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

“ಬ್ಯಾಂಕಿಂಗ್ ವಲಯ ಮತ್ತು ಖಾತೆದಾರರಿಗೆ ಇಂದು ಮಹತ್ವದ ದಿನವಾಗಿದೆ. ಸರ್ಕಾರವು ಯಾವಾಗಲೂ ‘ಠೇವಣಿದಾರರಿಗೆ ಪ್ರಥಮ ಪ್ರಾಶಸ್ತ್ಯ’ ನೀಡಿದೆ ಎಂಬ ಅಂಶವನ್ನು ಇಂದು ಸಂಕೇತಿಸುತ್ತದೆ. ಈ ಕಾರ್ಯಕ್ರಮದ ಹೆಸರೇ ‘ಡೆಪಾಸಿಟರ್ಸ್‌ ಫಸ್ಟ್‌’ ಎಂದು. ಠೇವಣಿದಾರರ ಅಗತ್ಯಗಳಿಗೆ ನಮ್ಮ ಆದ್ಯತೆ ಮತ್ತು ಜವಾಬ್ದಾರಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬ್ಯಾಂಕ್‌ ಠೇವಣಿಗೆ ವಿಮೆ ವ್ಯಾಪ್ತಿ ಏರಿಕೆ : ಚಳಿಗಾಲದ ಅಧಿವೇಶನದಲ್ಲಿ ವಿದೇಯಕ ಮಂಡನೆ

ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವರಾದ ಭಾಗ್ವತ್ ಕೆ. ಕರಡ್ ಮತ್ತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇದ್ದರು.

ಠೇವಣಿ ವಿಮೆಯು ಠೇವಣಿದಾರರ ಎಲ್ಲ ಠೇವಣಿಗಳಾದ ಉಳಿತಾಯ, ನಿಶ್ಚಿತ, ಚಾಲ್ತಿ, ರೆಕರಿಂಗ್ ಡೆಪಾಸಿಟ್ಸ್ ಇವೆಲ್ಲವನ್ನೂ ಕವರ್ ಮಾಡುತ್ತದೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವಾಣಿಜ್ಯ ಬ್ಯಾಂಕ್ಗಳು ಒಳಗೊಳ್ಳುತ್ತವೆ. ಅಷ್ಟೇ ಅಲ್ಲ, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಕೋ-ಆಪರೇಟಿವ್ ಬ್ಯಾಂಕ್ಗಳು ಸಹ ಸೇರುತ್ತವೆ. ಪ್ರಮುಖ ಸುಧಾರಣೆ ಕ್ರಮದಲ್ಲಿ ಬ್ಯಾಂಕ್ ಠೇವಣಿ ಇನ್ಷೂರೆನ್ಸ್ ಕವರ್ ಅನ್ನು ರೂ.1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.



Read more…