Karnataka news paper

ಕಾರ್ಯಕಾರಿಣಿಗೆ ಎಲ್ಲರೂ ಬರಲೇಬೇಕು ಎಂದೇನಿಲ್ಲ: ಸಚಿವ ಪ್ರಲ್ಹಾದ ಜೋಶಿ


ಹುಬ್ಬಳ್ಳಿ:  ಎಲ್ಲಾ ಸಚಿವರು, ಸಂಸದರು ಹಾಗೂ ಶಾಸಕರು ಪಕ್ಷದ ಕಾರ್ಯಕಾರಿಣಿಗೆ ಬರಲೇಬೇಕು ಎಂದೇನಿಲ್ಲ.  ಸೆಲೆಕ್ಟೆಡ್ ಸಚಿವರು ಹಾಗೂ ಪದಾಧಿಕಾರಿಗಳಷ್ಟೇ  ಪಾಲ್ಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಗೆ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಜಾರಕಿಹೊಳಿ ಸಹೋದರರು  ಸೇರಿದಂತೆ, ಅನೇಕ ಮಂದಿ ಗೈರಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ಅವರ ವಿದೇಶ ಪ್ರವಾಸ ಮುಂಚೆಯೇ ನಿಗದಿಯಾಗಿತ್ತು. ಉಳಿದವರು ಬರಲೇಬೇಕು ಅಂತೇನಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಗೂ ಕೇಂದ್ರ ಸಚಿವರು ಮತ್ತು ಸಂಸದರು ಗೈರಾಗುವುದು ಸಾಮಾನ್ಯ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದ ಕಾರ್ಯಕಾರಿಣಿಗೆ ಪ್ರಮುಖರು ಪಾಲ್ಗೊಂಡಿದ್ದಾರೆ. ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಕೆಲವರ ಗೈರು ಹಾಜರಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಮತ್ತು ವಿಧಾನಪರಿಷತ್ ಚುನಾವಣೆಯ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ,  ಮುಂದಿನ ವಿಧಾನಸಭಾ ಚುನಾವಣೆಗಾಗಿ ಪಕ್ಷ ಸಂಘಟನೆ ಜೊತೆಗೆ, ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಎಲ್ಲರಿಗೂ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಅನುಮತಿ ಪಡೆದುಕೊಂಡೇ ಗೈರು: ಪಿ. ರಾಜೀವ್

ಹುಬ್ಬಳ್ಳಿ: ಕಾರ್ಯಕಾರಿಣಿಗೆ ನಿಗದಿಪಡಿಸಲಾಗಿದ್ದ 300 ಜನರ ಪೈಕಿ 281 ಮಂದಿ ಮೊದಲ ದಿನದ ಸಭೆಗೆ ಹಾಜರಾಗಿದ್ದಾರೆ. ಉಳಿದ 19 ಮಂದಿ ಅನುಮತಿ ಪಡೆದುಕೊಂಡೇ  ಗೈರಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಪಿ. ರಾಜೀವ್ ಹೇಳಿದರು.

ಕಾರ್ಯಕಾರಿಣಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಗೈರಾದವರು ಮೊದಲ ದಿನ ಮಾತ್ರ ಅನುಮತಿ ಪಡೆದಿರುವುದಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ ಎಂದರು.

ವಿಧಾನಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಗೆ ಸೋಲಾಗಿರುವ ಕುರಿತು ಚರ್ಚೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಕೂಡ ರಚಿಸಲಾಗಿದ್ದು, ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.



Read more from source