ಹೈಲೈಟ್ಸ್:
- ಕೋವಿಡ್ ವೇಳೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಳವಳ ವ್ಯಕ್ತ ಪಡಿಸಿದ ಎಚ್‌ಡಿಕೆ
- ಇದು ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದ ಮಾಜಿ ಸಿಎಂ ಎಚ್‌ಡಿಕೆ
- ವಿದ್ಯಾರ್ಥಿಗಳ ನೆರವಿಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿದ ಮಾಜಿ ಸಿಎಂ
28-12-2021ನೇ ಮಂಗಳವಾರದ ದಿನ ಪತ್ರಿಕೆಯಲ್ಲಿ, ಮಂಗಳೂರಿನ ಹಿರಿಯ ವರದಿಗಾರ ಮುಹಮ್ಮದ್ ಆರಿಫ್ ಪಡುಬಿದ್ರೆ ಅವರ ವಿಶೇಷ ವರದಿ, ‘12,500 ವಿದ್ಯಾರ್ಥಿಗಳ ಆತ್ಮಹತ್ಯೆ‘ ಎನ್ನುವ ಶೀರ್ಷಿಕೆಯಡಿ ಪ್ರಕಟವಾಗಿತ್ತು. ಇದರಲ್ಲಿ ಶಿಕ್ಷಣಕ್ಕಾಗಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಉಲ್ಲೇಖಿಸಿ, ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ವಿವರಿಸಲಾಗಿತ್ತು.
ಈ ವರದಿಯನ್ನು ಲಗ್ಗತ್ತಿಸಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ‘ಇಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇಂದು ಪ್ರಕಟವಾಗಿರುವ ಈ ವರದಿ ಅತ್ಯಂತ ಕಳವಳಕಾರಿ. ಕರ್ನಾಟಕವೂ ಸೇರಿ ದೇಶಾದ್ಯಂತ 12,500 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಓದಿ ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ.
ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಕೆಲ ಶಿಕ್ಷಣಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶಕ್ಕೆ ಶೋಭೆ ತರುವ ವಿಚಾರವಲ್ಲ. ಕೋವಿಡ್ ಮತ್ತಿತರೆ ಸಮಸ್ಯೆಗಳಿಂದ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮೃತ್ಯುಪಾಶಕ್ಕೆ ತುತ್ತಾಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟ ವಿದ್ಯಾರ್ಥಿಗಳು ಸಕಾಲಕ್ಕೆ ನೆರವು ಸಿಗದೇ ನೊಂದು-ಬೆಂದು ಜೀವವನ್ನು ಕೊನೆ ಮಾಡಿಕೊಳ್ಳುವ ಅಪಾಯಕಾರಿ ನಿರ್ಧಾರಕ್ಕೆ ಬರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ವಿದ್ಯಾರ್ಥಿಗಳ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದೆಡೆ ಭಾರತವು ವಿಶ್ವಗುರುವಾಗಬೇಕು ಎನ್ನುವವರು, ಇನ್ನೊಂದೆಡೆ ಉನ್ನತ ಶಿಕ್ಷಣವನ್ನು ಉಳ್ಳವರ ಪಾಲು ಮಾಡುತ್ತಿದ್ದಾರೆ. ಇವತ್ತಿನ ವ್ಯವಸ್ಥೆ ಮತ್ತು ಸರಕಾರಗಳ ನೀತಿಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಉನ್ನತ ಶಿಕ್ಷಣ ಹಣವಂತರ ಕಪಿಮುಷ್ಟಿಯಲ್ಲಿ ಸಿಲುಕಿದ್ದರೆ, ಪೋಷಕರು ಮತ್ತು ವಿದ್ಯಾರ್ಥಿಗಳು ಅಂತಹ ಶಿಕ್ಷಣಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ನನ್ನ ಕಳಕಳಿಯ ಮನವಿ ಇಷ್ಟೇ, ಸಮಸ್ಯೆಗಳಿವೆ ಎಂದು ಜೀವ ತೆಗೆದುಕೊಳ್ಳುವುದು ಬೇಡ. ಅಂತ ತಪ್ಪು ನಿರ್ಧಾರಕ್ಕೆ ಮುನ್ನ ನಿಮಗೆ ಜನ್ಮ ಕೊಟ್ಟವರನ್ನು ಮರೆಯಬಾರದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಇಂಥ ದುಡುಕಿನ ನಿರ್ಧಾರಕ್ಕೆ ಬರಬಾರದು ಎಂದು ವಿದ್ಯಾರ್ಥಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.