Karnataka news paper

ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ನಿಲ್ಲದ ತಾಂತ್ರಿಕ ಅಡಚಣೆ: ಟ್ವಿಟ್ಟರ್‌ನಲ್ಲಿ ತೆರಿಗೆ ಪಾವತಿದಾರರ ಆಕ್ರೋಶ


ಹೈಲೈಟ್ಸ್‌:

  • ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ನಿರಂತರ ತಾಂತ್ರಿಕ ಅಡಚಣೆ
  • ಟ್ವಿಟ್ಟರ್‌ನಲ್ಲಿ #Extend_Due_Date_Immediately ಟ್ರೆಂಡಿಗ್‌
  • ಇನ್ಫೋಸಿಸ್‌ ಅಭಿವೃದ್ಧಿ ಪಡಿಸಿರುವ ವೆಬ್‌ಸೈಟ್‌ನಲ್ಲಿ ಸಮಸ್ಯೆಗಳ ಸರಮಾಲೆ

ಹೊಸ ದಿಲ್ಲಿ: 2020-21 ನೇ ಸಾಲಿನ ಆದಾಯ ತೆರಿಗೆ ಪಾವತಿಗೆ ಕೊನೆಯ ದಿನಾಂಕ ಸಮೀಪಿಸಿರುವಂತೆಯೇ ಐಟಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಮತ್ತೆ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಈಗಾಗಲೇ ನಿಗದಿ ಪಡಿಸಿರುವ ಕೊನೆ ದಿನವನ್ನು ಮುಂದೂಡಬೇಕು ಎಂದು ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರವನ್ನು ಕೋರಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ತೆರಿಗೆ ಪಾವತಿದಾರರು ತಮ್ಮ ಅಳಲನ್ನು ತೋಡಿಕೊಂಡಿದ್ದು, ರಿಟರ್ನ್ಸ್‌ ಫೈಲ್‌ ದಿನಾಂಕವನ್ನು ವಿಸ್ತರಣೆ ಮಾಡಿ ಎಂದು ಟ್ವಿಟ್ವರ್‌ ಅಭಿಯಾನದ ಮೂಲಕ ವಿನಂತಿಸಿಕೊಂಡಿದ್ದಾರೆ. #Extend_Due_Date_Immediately ಎನ್ನುವ ಹ್ಯಾಶ್‌ ಟ್ಯಾಗ್‌ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿದಾರರು ಮನವಿ ಮಾಡಿಕೊಂಡಿದ್ದಾರೆ.

ವೆಬ್‌ಸೈಟ್‌ನಲ್ಲಿ ದೋಷ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ ಸಾಧ್ಯತೆ
ಈ ಹಿಂದೆ ಜುಲೈ 31ರೊಳಗಾಗಿ ಆದಾಯ ತೆರಿಗೆ ಪಾವತಿದಾರರು ತಮ್ಮ ರಿಟರ್ನ್ಸ್‌ ಸಲ್ಲಿಕೆ ಮಾಡಬೇಕು ಎಂದು ಸೂಚಿಸಾಗಿತ್ತು. ಆದರೆ ಕೋವಿಡ್‌ ಹಾಗೂ ನೂತನವಾಗಿ ಅಭಿವೃದ್ಧಿ ಪಡಿಸಲಾದ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಈ ಅವಧಿಯನ್ನು ಡಿ.31 ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಇದೀಗ ಕೊನೆ ಘಳಿಗೆಯಲ್ಲಿ ಮತ್ತೆ ತಾಂತ್ರಿಕ ಅಡಚಣೆ ಉಂಟಾಗಿದ್ದು, ಗಡುವು ವಿಸ್ತರಿಸಿ ಎನ್ನುವ ಮನವಿಗಳು ಜೋರಾಗಿವೆ.

ತೆರಿಗೆ ಇಲಾಖೆಯ ವೆಬ್‌ಸೈಟ್‌ ಆಗಾಗ್ಗೆ ಹ್ಯಾಂಗ್‌ ಆಗುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ದಿನಾಂಕ ಇನ್ನಷ್ಟು ವಿಸ್ತರಣೆ ಮಾಡಿ ಎನ್ನುವುದು ತೆರಿಗೆ ಪಾವತಿದಾರರ ಅಳಲು.

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡುವಾಗ ಯಾವೆಲ್ಲಾ ದಾಖಲೆಗಳು ಇರಬೇಕು? ಇಲ್ಲಿದೆ ಮಾಹಿತಿ

ಇನ್ನು ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಉಂಟಾಗುತ್ತಿರುವ ತಾಂತ್ರಿಕ ಅಡಚಣೆ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ತೆರಿಗೆ ಪಾವತಿದಾರರು, ಡಿ.31 ರ ಗಡುವು ತೆರಿಗೆ ಪಾವತಿದಾರರಿಗೋ ಅಥವಾ ಸಾಫ್ಟ್‌ವೇರ್‌ ಡೆವಲಪರ್‌ಗಳಿಗೋ? ಡಿ.31 ರವರೆಗೆ ಸಾಫ್ಟ್‌ವೇರ್‌ ಡೆವಲಪರ್‌ಗಳಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ತೆರಿಗೆ ಪಾವತಿದಾರರಿಗಲ್ಲ ಎಂದಾಬೇಕು ಆದಾಯ ಇಲಾಖೆಯ ಸಂದೇಶ ಎಂದು ತೆರಿಗೆ ಪಾವತಿದಾರರೊಬ್ಬರು ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ITR Filing: ಅಂತಿಮ ಗಡುವಿನೊಳಗೆ ಐಟಿ ರಿಟರ್ನ್ಸ್‌ ಫೈಲ್‌ ಮಾಡದಿದ್ದರೆ ಎಷ್ಟು ದಂಡ? ಏನು ಶಿಕ್ಷೆ?

ದಿನಾಲೂ ಸಮಸ್ಯೆ ಹಾಗೂ ದೋಷ ಇರುವ ಅತ್ಯುತ್ತಮ ಪೋರ್ಟಲ್‌ ಅನ್ನು ಅಭಿವೃದ್ದಿ ಪಡಿಸಿದ್ದಕ್ಕೆ ಆದಾಯ ತೆರಿಗೆ ಇಲಾಖೆ ಹಾಗೂ ಇನ್ಫೋಸಿಸ್‌ಗೆ ಅಭಿನಂದನೆಗಳು ಎಂದು ಇನ್ನೊಬ್ಬರು ಕುಹಕವಾಡಿದ್ದಾರೆ.

ಅಂತಿಮ ದಿನದ ಗಡುವು ಮುಂದಕ್ಕೆ?

ಈಗಗಾಗಲೇ ಹಲವು ಉದ್ಯಮ ಸಂಘಗಳು, ಚಾರ್ಟೆಟ್‌ ಅಕೌಂಟೆಂಟ್‌ಗಳ ಒಕ್ಕೂಟ, ಸದ್ಯ ನೀಡಲಾಗಿರುವ ಡಿ.31ರ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ಕೇಂದ್ರ ಸರ್ಕಾರ ಈ ಮನವಿ ಹಾಗೂ ಸದ್ಯ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಉಂಟಾಗಿರುವ ದೋಷವನ್ನು ಪರಿಗಣಿಸಿ, ಸದ್ಯ ಇರುವ ಡಿಸೆಂಬರ್‌ 31 ರ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ. ಈ ಬಗ್ಗೆ ಸದ್ಯದಲ್ಲೇ ಘೋಷಣೆ ಹೊರಬೀಳಲಿದೆ ಎನ್ನುವುದು ಈ ವಿಷಯದ ಬಗ್ಗೆ ಮಾಹಿತಿ ಇರುವ ಮೂಲಗಳಿಂದ ಗೊತ್ತಾಗಿದೆ.

ಡಿಸೆಂಬರ್‌ 31 ರೊಳಗೆ ಕಡ್ಡಾಯವಾಗಿ ಮಾಡಿ ಮುಗಿಸಬೇಕಾದ ಕೆಲಸಗಳಿವು: ಇಲ್ಲದಿದ್ದರೆ ದಂಡ ಪಕ್ಕಾ
ಡಿಸೆಂಬರ್‌ 31 ಕೊನೆಯ ದಿನ ಎಂದು ಈಗಾಗಲೇ ಹಲವು ಮಂದಿ ತರಾತುರಿಯಲ್ಲಿ ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿದ್ದರು. ಲಕ್ಷಾಂತರ ಮಂದಿ ಒಮ್ಮೆಲೆ ವೆಬ್‌ಸೈಟ್‌ ಲಾಗಿನ್ ಆಗಿದ್ದರಿಂದ ಈ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ತಿಳಿದು ಬಂದಿದೆ.

ಈ ವರ್ಷದಿಂದ ಬೆಂಗಳೂರು ಮೂಲದ ಇನ್ಫೋಸಿಸ್‌ ಅಭಿವೃದ್ಧಿ ಪಡಿಸಿರುವ ನೂತನ ವೆಬ್‌ಸೈಟ್‌ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬೇಕಿತ್ತು. ಆದರೆ ವೆಬ್‌ಸೈಟ್‌ನಲ್ಲಿ ಆಗಾಗ್ಗೆ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಗಡುವನ್ನು ಡಿ. 31ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಹೀಗಾಗಿ ಮತ್ತೆ ಗಡುವು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.



Read more